ಬೆಂಗಳೂರು ಫೆಬ್ರವರಿ 17,2021(www.justkannada.in): ಕನ್ನಡದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಕನ್ನಡ ಪುಸ್ತಕ ಲೋಕ ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಬೆಳೆಯಬೇಕಾದ ಅಗತ್ಯವಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜನೆ ಮಾಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಲೋಕಾರ್ಪಣೆ ಮಾಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಾಹಿತ್ಯ ಪರಿಸ್ಥಿತಿ ಸೋಷಿಯಲ್ ಮೀಡಿಯಾಗಳ ಭರಾಟೆಯಲ್ಲಿ ಕಳೆದು ಹೋಗಿದೆ, ಇ-ಬುಕ್, ಆಡಿಯೋ ಬುಕ್ ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಸಹ ಪುಸ್ತಕ ಪ್ರಕಟಣೆಯ ಜೊತೆಗೆ ಈ ಮಾಧ್ಯಮಗಳನ್ನು ಕೂಡ ಸಮರ್ಥವಾಗಿ ಬಳಸಿಕೊಂಡು ಬೆಳೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಅದಕ್ಕೆ ಅಗತ್ಯವಾದ ಅನುದಾನವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಯುವ ಬರಹಗಾರರು ತಮ್ಮ ಸುತ್ತಲಿನ ಪರಿಸರವನ್ನು ಗ್ರಹಿಸಿ ಬರೆಯಬೇಕು, ಸಾಹಿತ್ಯ ಪರಂಪರೆಯನ್ನು ಅರಿತು ಬರೆಯಬೇಕು, ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅವರು ಯುವ ಲೇಖಕರಿಗೆ ಕಿವಿಮಾತು ಹೇಳಿದರು.
ಪುಸ್ತಕಗಳನ್ನುಲೋಕಾರ್ಪಣೆ ಮಾಡಿ ಮಾತನಾಡಿದ ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರು, ಜಾತಿ, ವರ್ಗಗಳನ್ನು ಮೀರಿದ ಸಾಹಿತ್ಯ ಸೃಷ್ಟಿ ನಮ್ಮ ಧ್ಯೇಯ ಆಗಬೇಕು, ಶೋಷಿತರು ಎಲ್ಲಾ ಜಾತಿಯ ಎಲ್ಲಾ ವರ್ಗಗಳಲ್ಲಿಯೂ ಇರುತ್ತಾರೆ, ಬರಹಗಾರರು ಜಾತಿ ವರ್ಗಗಳನ್ನು ಮೀರಿ ಶೋಷಣೆಯ ವಿರುದ್ಧ ದನಿ ಎತ್ತಬೇಕು ಎಂದು ಅವರು ಹೇಳಿದರು. ಇಂದಿನ ಯುವ ಬರಹಗಾರರು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಂಪರೆ ಪ್ರವಾಹ ಇದ್ದ ಹಾಗೆ. ಅದನ್ನು ಅರಿತು,ಗ್ರಹಿಸಿ,ಅಧ್ಯಯನ ಮಾಡಿ ಬರೆದರೆ ಶಕ್ತಿಯುತ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು. ತಮ್ಮ ಸುತ್ತಲ ಪರಿಸರ ಪರಿಸರದ ಸಂವೇದನೆಗಳು ಸಾಹಿತ್ಯದ ಶಕ್ತಿಯಾಗಿದೆ ಕವಿ ಸಿದ್ದಲಿಂಗಯ್ಯ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಸಾಹಿತ್ಯದ ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಂಡಿದೆ ಅದನ್ನು ಒಂದು ವರ್ಷದೊಳಗೆ ಮುಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು, ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸುವ ಜೊತೆಗೆ ಅವುಗಳನ್ನು ಇ ಬುಕ್ ಆಗಿ ಕೂಡ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್ ರಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಸೌಭಾಗ್ಯ ವಂದಿಸಿದರು.
Key words: Kannada -book world -should be- developed -using -modern media-Minister -Arvind Limbavali.