ಮೈಸೂರು,ಸೆಪ್ಟಂಬರ್,30,2021(www.justkannada.in): ಈ ಬಾರಿಯೂ ಸರಳ ಮತ್ತು ಸಾಂಪ್ರದಾಯಿಕ ಮೈಸೂರು ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರದ ನಡೆಯನ್ನ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ವಿಜೃಂಭಣೆಯ ದಸರಾ ಮಹೋತ್ಸವ ಆಚರಿಸುವಂತೆ ಆಗ್ರಹಿಸಿ ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸರಳ ದಸರಾ ಬೇಡ, ಅದ್ದೂರಿ ದಸರಾ ಬೇಕು. ಈ ಬಾರಿಯ ದಸರಾ ಜನಸಾಮಾನ್ಯರ ದಸರಾವಾಗಿ ಆಚರಣೆಯಾಗುತ್ತಿಲ್ಲ.ದಸರಾವನ್ನ ಬಿಜೆಪಿ ಸರ್ಕಾರ ತನ್ನ ಇಷ್ಟದಂತೆ ಮಾಡುತ್ತಿದೆ. ಉಸ್ತುವಾರಿ ಸಚಿವರಿಗೆ ಮಾತ್ರ ದಸರಾ ಆಗ್ತಿದೆ. ಜನಸಾಮಾನ್ಯರ ದಸರಾ ಆಗುತ್ತಿಲ್ಲ. ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಬಾರದು. ಬನ್ನಿಮಂಟಪದ ಜಂಬೂಸವಾರಿ ಮೆರವಣಿಗೆ ಮಾಡಿ ಜನರು ನೋಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಆಯ್ಕೆಗೆ ಆಕ್ಷೇಪ.
ದಸರಾ ಉದ್ಘಾಟನೆಗೆ ಎಸ್.ಎಂ ಕೃಷ್ಣ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಬಿಜೆಪಿ ಸರ್ಕಾರ ದಸರಾ ಸಂಪ್ರದಾಯವನ್ನ ಗಾಳಿಗೆ ತೂರಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕವಾಗಿ ಎಸ್.ಎಂ ಕೃಷ್ಣರ ಬಗ್ಗೆ ಗೌರವ ಇದೆ. ಆದರೆ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಸರಿಯಲ್ಲ. ಹಿಂದಿನಿಂದಲೂ ದಸರಾಗೆ ತನ್ನದೇ ಆದ ಸಂಪ್ರದಾಯವಿದೆ. ಅದನ್ನ ಬಿಜೆಪಿ ಸರ್ಕಾರ ಬೆಳೆಸಿಕೊಂಡು ಹೋಗಬೇಕು. ಅದು ಬಿಟ್ಟು ತನ್ನಿಷ್ಟದಂತೆ ದಸರಾ ಆಚರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
Key words: kannada fighter- Vatal Nagaraj- protests -demanding –mysore dasara