ಕನ್ನಡದ ಸಮಸ್ಯೆಗಳ ಮನವರಿಕೆ: ಕನ್ನಡಿಗ ಸಚಿವರ ಸಂಸದರ ಸಂಘಟಿತ ಬೆಂಬಲ – ಡಾ.ಪುರುಷೋತ್ತಮ ಬಿಳಿಮಲೆ

ನವದೆಹಲಿ,ಡಿಸೆಂಬರ್,18,2024 (www.justkannada.in): ಕೇಂದ್ರ ಸರ್ಕಾರದ ಸಚಿವರು, ಸಂಸದರುಗಳನ್ನು ಭೇಟಿ ಮಾಡಿ ಪ್ರಾದೇಶಿಕ ಭಾಷೆಗಳ ಜ್ವಲಂತ ಸಮಸ್ಯೆಗಳನ್ನು ಮನವರಿಕೆ ಮಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ಪ್ರಯತ್ನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಸಂಸದರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಈ ಕುರಿತಂತೆ ಸಂಘಟಿತ ಹೋರಾಟ ಮಾಡಲಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರವರೊಂದಿಗೆ ಭೇಟಿಯ ನಂತರ  ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ರಾಜ್ಯದ ಸಂಸದರುಗಳ ಸಭೆಯ ಬಳಿಕ ಮಾತನಾಡಿದ ಅವರು,  ವಿಶೇಷವಾಗಿ ಗ್ರಾಮೀಣ ಪ್ರದೇಶದ  ಬ್ಯಾಂಕ್‌ ಗಳಲ್ಲಿ ಅನ್ಯಭಾಷಿಕ ಸಿಬ್ಬಂದಿಗಳ ನೇಮಕಾತಿಯಿಂದ ಗ್ರಾಮೀಣ ಪ್ರದೇಶದ ಜನರಿಗೆ ತೀವ್ರ ತೊಂದರೆಯುಂಟಾಗುತ್ತಿದ್ದು, ಕೇಂದ್ರ ಸರ್ಕಾರವು ಈ ಕುರಿತಂತೆ ತುರ್ತಾದ ಕ್ರಮವಹಿಸಬೇಕಾದ ಅವಶ್ಯಕತೆ ಇದೆ. ವಿತ್ತ ಸಚಿವರಿಗೆ ಈ ಕುರಿತಂತೆ ಒತ್ತಡ ಹೇರಬೇಕಾಗಿದ್ದು, ಎಲ್ಲಾ ಸಂಸದರು ಜಂಟಿಯಾಗಿ ಈ ಸಮಸ್ಯೆಗೆ ತಾರ್ಕಿಕ ಹೋರಾಟ ರೂಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿರುವ ಎಲ್ಲ ಭಾಷೆಗಳಿಗೂ ಅನುದಾನ ಸೇರಿದಂತೆ ಎಲ್ಲ ಸಹಕಾರಕ್ಕೂ ಕೇಂದ್ರವು ಸಮಾನ ನೀತಿ ರೂಪಿಸುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕಿದೆಯೆಂಬ ಸಂಸದ ಕುಮಾರ್ ನಾಯಕ್ ರವರ ಸಲಹೆಯನ್ನು ಪ್ರಸ್ತಾಪಿಸಿದ ಡಾ.ಬಿಳಿಮಲೆ, ಕನ್ನಡಿಗ ಸಂಸದರ ಈ ಭರವಸೆ ನಿಯೋಗಕ್ಕೆ ವಿಶ್ವಾಸ ಮೂಡಿಸುವ ಕ್ರಮವಾಗಿದೆ ಎಂದರು.

ಲೋಕಸಭೆಯಲ್ಲಿ ಕನ್ನಡ

ಕನ್ನಡ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕೆಂಬ ತಮ್ಮ ಆಗ್ರಹಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಸಂಸದರು ಭರವಸೆ ನೀಡಿದ್ದಾರೆಂದು ತಿಳಿಸಿದ ಡಾ. ಬಿಳಿಮಲೆ, ಎಲ್ಲಾ ಸಂಸದರು ಕನ್ನಡದಲ್ಲಿ ಮಾತನಾಡಲು ಉತ್ಸುಕರಾಗಿದ್ದು, ತಾವು ತಮ್ಮ ಸಹೋದ್ಯೋಗಿ ಕನ್ನಡಿಗ ಸಂಸದರನ್ನು ಪ್ರೇರೆಪಿಸುವ ಕೆಲಸ ಮಾಡುತ್ತೇವೆ ಎಂದು ಸಂಸದರು ಹೇಳಿದ್ದಾರೆಂದು ತಿಳಿಸಿದರು.

ನ್ಯಾಯಾಲಯದಲ್ಲಿ ಕನ್ನಡ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಥಳೀಯ ನ್ಯಾಯಾಲಯಗಳು ಕನ್ನಡದಲ್ಲಿ ತೀರ್ಪು ನೀಡುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸುವಲ್ಲಿ ಸೂಕ್ತ ಅನುಪಾಲನೆಗೆ ಮುಂದಾಗಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಸಲಹೆ ನೀಡಿದ್ದಾರೆಂದು ತಿಳಿಸಿದ ಡಾ. ಬಿಳಿಮಲೆ ಈ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ನವದೆಹಲಿಯಲ್ಲಿ ರಸ್ತೆ-ನಿಲ್ದಾಣಗಳಿಗೆ ಕನ್ನಡದ ಮೇರು ವ್ಯಕ್ತಿಗಳ ಹೆಸರು

ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳ ಮೇರು ವ್ಯಕ್ತಿಗಳ ಹೆಸರುಗಳನ್ನು ನವದೆಹಲಿಯ ಹಲವಾರು ರಸ್ತೆ-ನಿಲ್ದಾಣಗಳಿಗೆ ಇಡಲಾಗಿದ್ದು, ಅತ್ಯಂತ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡಕ್ಕೆ  ರಾಷ್ಟ್ರರಾಜಧಾನಿಯಲ್ಲಿ ಸಿಗಬೇಕಾದ ಪ್ರಾಶಸ್ತ್ಯ ಸಿಕ್ಕಿಲ್ಲ. ಈ ಕುರಿತಂತೆ ಎಲ್ಲಾ ಸಂಸದರು ಕನ್ನಡಿಗ ಸಚಿವರು ಸಂಘಟಿತರಾಗಿ ಸಹಕರಿಸಲಿದ್ದಾರೆ ಎಂದ ಡಾ. ಬಿಳಿಮಲೆ,  ಪ್ರಾಧಿಕಾರದ ವತಿಯಿಂದ ನವದೆಹಲಿಯ ರಸ್ತೆ-ನಿಲ್ದಾಣಗಳಿಗೆ ಕನ್ನಡದ ಮೇರು ವ್ಯಕ್ತಿಗಳ ಹೆಸರುಗಳನ್ನು ಇಡಲು ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಆಗ್ರಹವನ್ನು ಸಲ್ಲಿಸಲಾಗುವುದು ಎಂದಿದ್ದಾರೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ  ಕುಮಾರನಾಯ್ಕ್, ತುಕರಾಂ, ಈರಣ್ಣ ಕಡಾಡಿ, ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ನಿಯೋಗದ ಸದಸ್ಯರಾದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಂಸದ ಎಲ್.ಹನುಮಂತಯ್ಯ, ಶಿಕ್ಷಣ ತಜ್ಞರಾದ ಹಿ.ಚಿ.ಬೋರಲಿಂಗಯ್ಯ, ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಶಂಕರ ಹಲಗತ್ತಿ, ಪ್ರಾಧಿಕಾರದ ಸದಸ್ಯರಾದ ವಿ.ಪಿ.ನಿರಂಜನಾರಾಧ್ಯ, ಎ.ಬಿ.ರಾಮಚಂದ್ರಪ್ಪ, ದಾಕ್ಷಾಯಿಣಿ ಹುಡೇದ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಅಧ್ಯಕ್ಷರ ಆಪ್ತಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ಇದ್ದರು.

Key words: support, Kannadiga, ministers, MPs, Kannada issues – Dr. Purushottam Bilimale