ಮೈಸೂರು,ನವೆಂಬರ್,1,2024 (www.justkannada.in): ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡು ಬರುತ್ತದೆ. ಕನ್ನಡ ಭಾಷೆ ಮಾತನಾಡುವವರು ಕಾವೇರಿಯಿಂದ ಗೋದಾವರಿಯವರೆಗೆ ಇರುವುದನ್ನು ಕಾಣುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಹೇಳಿದರು.
ಇಂದು ಜಿಲ್ಲಾಡಳಿತದ ವತಿಯಿಂದ ಓವಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕರ್ನಾಟಕ ಏಕೀಕರಣಗೊಂಡ ದಿನ. ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಬಹಳ ವಿಶೇಷವಾದ ದಿನ. ಕನ್ನಡದ ಕಾರಣಕ್ಕೆ ಒಗ್ಗೂಡಿರುವ ಜನ ನಾವು. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿoದ ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಕ್ರಿ.ಶ.450 ರ ಕನ್ನಡ ಭಾಷೆಯ ಮೊಟ್ಟ ಮೊದಲ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕ್ರಿ.ಶ. 850 ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖವಿದೆ. 21 ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡ ಭಾಷೆ ಆಧುನೀಕತೆಯೊಂದಿಗೆ ತನ್ನದೇ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ, ಆದ್ದರಿಂದ ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದರು.
ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಆ ಮಹಾನ್ ಚೇತನಗಳನ್ನೆಲ್ಲಾ ಇಂದು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದರು.
ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರಾಗಿದ್ದು ಜೊತೆಗೆ ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಾಂಬ್ಳಿ, ಆರ್.ಎಚ್.ದೇಶಪಾಂಡೆ, ರಂಗರಾವ್ ದಿವಾಕರ್, ಕೌಜಲಗಿ ಶ್ರೀನಿವಾಸರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಚ್.ಮರಿಯಪ್ಪ ಸುಬ್ರಮಣಸ್ವಾಮಿ ಅಯ್ಯಂಗಾರ್, ಎಸ್.ನಿಜಲಿಂಗಪ್ಪ, ಚೆನ್ನಯ್ಯ, ಟಿ.ವೀರನಗೌಡ, ಹೆಚ್.ಸಿ.ದಾಸಪ್ಪ, ಎಚ್.ಸಿದ್ದಯ್ಯ, ಕೆ.ಆರ್.ಕಾರಂತ್ ಮತ್ತು ಅನಕೃ ಮೊದಲಾದವರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, ಕನ್ನಡ ಭಾಷಿಕರ ರಾಜ್ಯವಾಗಿ ಕರ್ನಾಟಕ ರೂಪಗೊಳ್ಳಲು ಶ್ರಮಿಸಿದರು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದವರು. ಸಾಹಿತಿಗಳು ಹಾಗೂ ರಾಜಕಾರಣಿಗಳು. ರಾಷ್ಟ್ರಕವಿ ಕುವೆಂಪು ಅವರು ಸಹ ಕರ್ನಾಟಕ ಏಕೀಕರಣಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ಗೀತೆಯು ನಮ್ಮ ರಾಜ್ಯದ ನಾಡಗೀತೆಯಾಗಿದೆ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಕರ್ನಾಟಕ ಏಕೀಕರಣ ಆಗಿದ್ದರೂ, ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳ ಐಕ್ಯತೆಯ ಕೂಗು ಎದ್ದಿತ್ತು. ಆದರೆ ಮೊದಲು ದೇಶಕ್ಕೆ ಸ್ವಾತಂತ್ರ್ಯ ನಂತರ ಭಾಷಾವಾರು ಐಕ್ಯತೆ ಎಂಬ ವಿಚಾರವನ್ನು ಅಂದಿನ ಹೋರಾಟಗಾರರು ತಳೆದಿದ್ದರು. ಸಾಹಿತಿಗಳು, ಚಿಂತಕರು, ಲೇಖಕರು ತಮ್ಮ ಬರಹಗಳ ಮೂಲಕ ಏಕೀಕರಣದ ಪರವಾಗಿ ಧ್ವನಿಗೂಡಿಸಿದರು. ಮೈಸೂರಿನಿಂದ ಪ್ರಕಟವಾಗಿದ್ದ ಸಾಧ್ವಿ ಪತ್ರಿಕೆಯ ಸಂಪಾದಕರಾದ ಅಗರಂ ರಂಗಯ್ಯ ಅವರು ಏಕೀಕರಣ ಕುರಿತ ಲೇಖನಗಳನ್ನು ಹೆಚ್ಚು ಹೆಚ್ಚಾಗಿ ಪ್ರಕಟಿಸುತ್ತಿದ್ದರು. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಅರುಣಾ ಪತ್ರಿಕೆಯ ಸಂಪಾದಕರಾದ ಕುಮಾರಸ್ವಾಮಿ ಅವರು, ಇನ್ನೂ ಅನೇಕರು ಏಕೀಕರಣಕ್ಕೆ ಬೆಂಬಲವಾಗಿ ನಿಂತರು. ಹೀಗೆ, ಕನ್ನಡ ನಾಡಿನ ಸ್ಥಾಪನೆಗೆ ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಅನೇಕರು ಶ್ರಮಿಸಿದ್ದಾರೆ. ಅವರೆಲ್ಲರನ್ನು ಇಂದು ಗೌರವಪೂರ್ವಕವಾಗಿ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಗೌರವ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಗೌರವಿಸಬೇಕು ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರೂ ಪ್ರತಿಪಾದಿಸಿದ್ದರು ಎಂಬುದನ್ನು ನಾವು ಮನಗಾಣಬೇಕಿದೆ. ನಮ್ಮ ನಾಡು-ನುಡಿ ಹಾಗೂ ಸಂಸ್ಕೃತಿಗೆ ಸುಮಾರು 2000 ವರ್ಷಗಳ ಭವ್ಯ ಇತಿಹಾಸವಿದೆ. ದೇಶದ ಸಾಹಿತ್ಯದಲ್ಲಿ ಮತ್ತು ಭಾಷಾ ಲೋಕದಲ್ಲಿ ಕನ್ನಡ ಹಾಗೂ ಕರ್ನಾಟಕ ಅತ್ಯುನ್ನತವಾಗಿ ಬಣ್ಣಿಸಲ್ಪಟ್ಟಿದೆ. ಕನ್ನಡ ಭಾಷೆಯು ಹಲವು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಸಾಹಿತ್ಯ, ಭಾಷಾ ಶ್ರೀಮಂತಿಕೆಯನ್ನು ತೋರಿಸುತ್ತಿದೆ ಎಂದರು.
ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ನಮ್ಮ ಸರ್ಕಾರ ಇಂದು ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇದನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ನಾವೆಲ್ಲರೂ ಮುಂದಾಗಬೇಕಾಗಿದೆ. ಕನ್ನಡ ಭಾಷೆಯ ಶ್ರೀಮಂತಗೊಳಿಸುವಿಕೆಯೊಂದಿಗೆ ಸಾಹಿತ್ಯ ಹಾಗೂ ಸಂಸ್ಕೃತಿಗಳ ಉತ್ತೇಜನಕ್ಕೂ ನಮ್ಮ ಸರಕಾರವು ಸಾಕಷ್ಟು ಒತ್ತು ನೀಡಿದೆ. ತಂತ್ರಜ್ಞಾನದ ವೇಗದಲ್ಲಿ ಹಾಗೂ ಇಂದಿನ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯು ಹಿಂದುಳಿಯದಂತೆ ಸರಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಚರವಾಣಿ (ಮೊಬೈಲ್ ನಲ್ಲಿ) ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾoಶಗಳನ್ನು ಅಭಿವೃದ್ಧಿಪಡಿಸಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿರುತ್ತದೆ. ವಿಜ್ಞಾನ-ತಂತ್ರಜ್ಞಾನದ ಜೊತೆ ಜೊತೆಗೂ ಕನ್ನಡವನ್ನು ಬಳಸಿ, ಬೆಳೆಸಬೇಕಾಗಿದೆ. ಕನ್ನಡದ ಅಸ್ಮಿತೆಯನ್ನು ಕಟ್ಟುವಂತಹ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಕನ್ನಡ ನಮ್ಮ ಬದುಕಿನ ಭಾಷೆ, ನಮ್ಮ ಹೃದಯದ ಭಾಷೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಪೂರ್ಣಗೊಳ್ಳುತ್ತಿದ್ದು, ಹಲವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಜನರ ಮನ ಗೆದ್ದಿದೆ. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪಸರಿಸುವಲ್ಲಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.
ಮೈಸೂರು ರಾಜ್ಯವು ‘ಕರ್ನಾಟಕ’ ಎಂದು ಮರು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿದೆ. ಈ ಶುಭ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ‘ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬoಧಿಸಿದoತೆ ಹಾಗೂ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಕರ್ನಾಟಕ ಸಂಭ್ರಮ 50 ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ನಿಮಿತ್ತ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ಈಗಾಗಲೇ ಜರುಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕನ್ನಡ ನಾಡು-ನುಡಿ, ಕಲೆ, ಸಂಸ್ಕೃತಿ ಜಾನಪದ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ನಾಡು-ನುಡಿಗೆ ವಿಶೇಷ ಆದ್ಯತೆ ನೀಡಿದೆ ಎಂದು ಮಾಹಿತಿ ನೀಡಿದರು.
ಕನ್ನಡವು ಯಾವುದೋ ಮತ ಪಂಥದ ಭಾಷೆಯಲ್ಲ. ಅದು ಈ ನಾಡಿನ, ಈ ಮಣ್ಣಿನ ಭಾಷೆ. ಈ ಭಾಷೆಯಲ್ಲೇ ನಮ್ಮ ಸಂಸ್ಕೃತಿ ಇದೆ. ನಮ್ಮ ಸಂಸ್ಕಾರ ಇದೆ. ನಮ್ಮ ಸಂಬಂಧಗಳು ಇವೆ. ನಮ್ಮ ನಾಗರೀಕತೆ ಇದೆ. ಈ ಭಾಷೆಯ ಶ್ರೀಮಂತಿಕೆಗೆ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಮುಂದಿನ ತಲೆಮಾರಿಗೆ ಈ ಭಾಷೆಯನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕೇವಲ ಭೌಗೋಳಿಕವಾಗಿ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಕನ್ನಡದ ಮನಸ್ಸುಗಳು ಏಕೀಕರಣವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಸಿ. ಎನ್.ಮಂಜೇಗೌಡ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಎಂ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಕ್ಷಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಸುದರ್ಶನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ. ಕೆ ಹರೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Kannada language , literature, culture, Minister, Dr. H.C. Mahadevappa