ಮೈಸೂರು,ಅಕ್ಟೋಬರ್,27,2020(www.justkannada.in): ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಸಾಹಿತ್ಯವನ್ನು ಕಲಿಯಬೇಕು ಎಂಬ ನಿಯಮವನ್ನು ಸರ್ಕಾರ ರೂಪಿಸಿದರೆ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್ ಅಭಿಪ್ರಾಯಪಟ್ಟರು.
ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಡೆದ ಡಾ.ಎಸ್. ನಾಗಾಚಾರಿ ಅವರ ಸಮಗ್ರ ಕನ್ನಡ ವ್ಯಾಕರಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಶಿವಕುಮಾರ್ ಮಾತನಾಡಿದರು.
1200 ವರ್ಷಗಳ ಹಿಂದೆ ಕೇಶಿರಾಜ ಕನ್ನಡ ವ್ಯಾಕರಣ ಮತ್ತು ಭಾಷಾ ಪ್ರಯೋಗ ಹೀಗೆ ಇರಬೇಕು ಎಂದು ಹೇಳಿದ್ದ. ಆದರೆ ಇಂದು ನಾವು ದಿನನಿತ್ಯ ಉಪಯೋಗಿಸುವ ಭಾಷೆಯಲ್ಲಿ ವ್ಯಾಕರಣವೇ ಇಲ್ಲ. ವ್ಯಾಕರಣ ಎಂಬುದು ಶಾಸ್ತ್ರಕ್ಕಷ್ಟೆ ಎಂಬಂತಾಗಿದೆ. ಹೀಗಿದ್ದರೂ ಕನ್ನಡ ಸಾಹಿತ್ಯ ಮತ್ತು ಭಾಷೆ ಬೆಳವಣಿಗೆ ಹೊಂದುತ್ತಿರುವುದು ನೆಮ್ಮದಿ ವಿಚಾರ ಎಂದರು.
ಸರ್ಕಾರಗಳು ಕನ್ನಡವನ್ನು ಕಲಿಯಿರಿ ಎಂದು ಹೇಳುತ್ತೇವೆ. ಆದರೆ ಹೇಗೆ ಕಲಿಸಬೇಕು ಎಂಬ ಬಗ್ಗೆ ಯೋಚಿಸುವುದಿಲ್ಲ. ಪ್ರಸ್ತುತ ವಿದ್ಯಾರ್ಥಿಗಳು ಅಂಕಕ್ಕಾಗಿ ಕನ್ನಡ ಸಾಹಿತ್ಯವನ್ನು ಓದುವಂತಾಗಿದೆ. ಈ ಸ್ಥಿತಿ ಹೀಗೆ ಮುಂದುವರೆದರೆ ಕನ್ನಡ ಮತ್ತಷ್ಟು ಕುಸಿತ ಕಾಣಲಿದೆ. ಹಾಗಾಗಿ ಸರ್ಕಾರ ವೃತ್ತಿಪರಕೋರ್ಸ್ ಸೇರಿದಂತೆ ಇತರೆ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯವನ್ನು ಕಡ್ಡಾಯಗೊಳಿಸಬೇಕು. ಇದರಿಂದ ಕನ್ನಡ ಓದಿಕೊಂಡ ಪದವೀಧರರಿಗೆ ಕೆಲಸವಾದರು ಸಿಕ್ಕಂತಾಗುತ್ತದೆ. ಜೊತೆಗೆ ವಿಶ್ವವಿದ್ಯಾಲಯಗಳು ಕನ್ನಡ ಭಾಷೆ ಬೋಧಿಸಲು ಹಾಗೂ ಸಂಶೋಧನೆ ನಡೆಸಲು ಉತ್ತೇಜಿಸಿದಂತಾಗುತ್ತದೆ ಎಂದು ಶಿವಕುಮಾರ್ ಹೇಳಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುವರೆಗಿನ ವಿದ್ಯಾರ್ಥಿಗಳಿಗೆ ವ್ಯಾಕರಣ ಅದ್ಯಯನ ಅತಿಮುಖ್ಯವಾಗಿದ್ದು, ಡಾ. ನಾಗಾಚಾರಿ ಅವರ ಸಮಗ್ರಕನ್ನಡ ವ್ಯಾಕರಣ ಪುಸ್ತಕ ಅದ್ಯಯನಕ್ಕೆ ಸೂಕ್ತವಾದ ಸಾಮಗ್ರಿಯಾಗಿದೆ ಎಂದರು.
ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತೆ ಡಾ. ಮಹದೇವಿಬಾಯಿ ಮಾತನಾಡಿ, ಯಾವುದೇ ಒಂದು ಪುಸ್ತಕದ ಮಹತ್ವ ತಿಳಿಯುವುದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ. ಹಾಗಾಗಿ ವ್ಯಾಕರಣ ಪುಸ್ತಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಸ್ಪರ್ಧಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.
ಕನ್ನಡ ಶಿಕ್ಷಕನಾದವನಿಗೆ ವ್ಯಾಕರಣ ಚೆನ್ನಾಗಿ ತಿಳಿದಿರಬೇಕು. ಇಲ್ಲವಾದರೆ ಕನ್ನಡ ಸಾಹಿತ್ಯ ಮತ್ತು ಭಾಷೆಯನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ, ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಹೆಚ್. ಬಾಲಕೃಷ್ಣ, ಡಾ. ಉಮೇಶ್ಬೇವಿನಹಳ್ಳಿ ಸೇರಿದಂತೆಇತರರು ಇದ್ದರು.
Key words: Kannada- literature –compulsory-mysore-book release-jnanabutthi-Shivakumar