ಮೈಸೂರು,ನ,1,2019(www.justkannada.in): ಭಾರತದ ಇತಿಹಾಸದಲ್ಲಿ ಕದಂಬರು ಕನ್ನಡ ಮಣ್ಣಿನ ಮೊಟ್ಟ ಮೊದಲ ರಾಜವಂಶ. ಕ್ರಿಸ್ತ ಶಕ 345 ರಿಂದ 525ರವರೆಗೆ ಕರುನಾಡನ್ನು ಆಳಿದ ಕದಂಬರು, ಭುವನೇಶ್ವರಿ ತಾಯಿಯನ್ನ ತಮ್ಮ ಕುಲದೇವತೆ ಎಂದು ಆರಾಧಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೆಟ್ಟದ ಸಾಲಿನಲ್ಲಿರುವ ಭುವನಗಿರಿಯಲ್ಲಿ ತಮ್ಮ ಕುಲದೇವತೆಯಾದ ಭುವನೇಶ್ವರಿ ದೇವಾಲಯವನ್ನ ಕಟ್ಟಿಸಿದರು. ಅದು ಕರ್ನಾಟಕದ ಮೊಟ್ಟ ಮೊದಲ ಭುವನೇಶ್ವರಿ ದೇವಾಲಯ.
ಕುತೂಹಲದ ಸಂಗತಿ ಏನಂದ್ರೆ, ಕದಂಬರು ಕಟ್ಟಿಸಿದ ಭುವನೇಶ್ವರಿ ದೇವಾಲಯ ಪೂರ್ಣಗೊಂಡಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಅರಸರು ಅದರ ಜೀರ್ಣೋದ್ಧಾರ ಮಾಡಿದರು. ಬಳಿಕ 1692ರಲ್ಲಿ ಬೀಳಗಿ ಅರಸರ ಕೊನೆಯ ದೊರೆ ಬಸವೇಂದ್ರ, ಭುವನೇಶ್ವರಿ ದೇಗುಲ ನಿರ್ಮಾಣವನ್ನ ಪೂರ್ಣಗೊಳಿಸಿರು.
ಕದಂಬರ ಬಳಿಕ ವಿಜಯ ನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಹಕ್ಕ-ಬುಕ್ಕರು ಕೂಡ ಭುವನೇಶ್ವರಿಯನ್ನೇ ಕುಲದೇವತೆಯನ್ನಾಗಿ ಆರಾಧಿಸುತ್ತಾರೆ. ಹಂಪಿಯ ವಿರೂಪಾಕ್ಷ ಮಂದಿರದಲ್ಲಿ ತಾಯಿ ಪದ್ಮಾಂಬಿಕೆ ಭುವನೇಶ್ವರಿ ವಿಗ್ರಹವನ್ನ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪೌರಾಣಿಕ ಹಾಗೂ ಚಾರಿತ್ರಿಕ ದಾಖಲೆಗಳು ಸಿಗುತ್ತವೆ. ಆದರೆ ಅನೇಕ ದಾಖಲೆಗಳಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಪೂರ್ವದಲ್ಲೇ ಹಂಪಿಯಲ್ಲಿ ತಾಯಿ ಭುವನೇಶ್ವರಿಯ ದೇಗುಲವಿತ್ತು ಎನ್ನುವ ಉಲ್ಲೇಖವಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ಸ್ವತಃ ವಿದ್ಯಾರಣ್ಯರು ಕೂಡ ತಾಯಿ ಭುವನೇಶ್ವರಿಯನ್ನ ಕುರಿತು ತಪಸ್ಸು ಮಾಡಿದ್ದರು.
ವಿಜಯನಗರದ ಅರಸರು ಯಾವುದೇ ಒಳ್ಳೆಯ ಕೆಲಸಕ್ಕೆ ಅಥವಾ ಯುದ್ಧಕ್ಕೆ ತೆರಳುವ ಮುನ್ನ, ನಾಡಹಬ್ಬಕ್ಕೆ ಮುನ್ನ ಭುವನೇಶ್ವರಿ ದೇವಿಯ ಪೂಜೆ ಮಾಡುವುದನ್ನ ರೂಢಿಸಿಕೊಂಡಿದ್ದರು. ಅದು ಪರಂಪರೆಯಾಗಿ ಮುಂದುವರೆದಿತ್ತು. ವಿಜಯನಗರ ಸಾಮ್ರಾಜ್ಯದ ಬಳಿಕ ಮೈಸೂರು ಅರಸರು ಕೂಡ ಭುವನೇಶ್ವರಿಯ ಆರಾಧನೆ ಮಾಡಿದರು. ಮಹಾರಾಜ ಚಾಮರಾಜ ಒಡೆಯರ್ ಅವರು ಮೈಸೂರು ಅರಮನೆ ಆವರಣದಲ್ಲಿ ಭುವನೇಶ್ವರಿ ವಿಗ್ರಹವನ್ನ ಪ್ರತಿಷ್ಠಾಪಿಸಿ ದೇಗುಲವನ್ನ ಕಟ್ಟಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಪುಣ್ಯಕ್ಷೇತ್ರ ಮೇಲುಕೋಟೆಯಲ್ಲಿ ಭುವನೇಶ್ವರಿ ಮಂಟಪವನ್ನ ಕಟ್ಟಿಸಿ ಅದನ್ನ ಕರ್ನಾಟಕದ ಕಳಶಪ್ರಾಯ ಎಂದು ಬಣ್ಣಿಸಿದರು. ಇಡೀ ಭುವನವೇ ಕನ್ನಡ ನಾಡಿನಲ್ಲಿದೆ ಎಂದು ವರ್ಣಿಸಿದರು. ಇನ್ನು ಬದಾಮಿ ಚಾಲುಕ್ಯರು ಕೂಡ ಭುವನೇಶ್ವರಿಯ ದೇಗುಲ ಕಟ್ಟಿಸಿ ಪೂಜಿಸಿದ್ದರು.
Key words: Kannada mother -Bhuvaneshwari –Kuladevathe-kadamba