ಶಿವಮೊಗ್ಗ,ಸೆಪ್ಟಂಬರ್,12,2023(www.justkannada.in): ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡ ಕಡ್ಡಾಯವಾಗಿದೆ. ಕನ್ನಡವನ್ನು ಎಲ್ಲ ಮಕ್ಕಳು ಮೊದಲ ವಿಷಯವಾಗಿ ತೆಗೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜಡೆಗ್ರಾಮದ ಶ್ರೀ ಸಿದ್ಧ ವೃಷಬೇಂದ್ರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 14 ವರ್ಷದೊಳಿಗಿನ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮೂರು ಬೋರ್ಡ್ ಎಕ್ಸಾಂ ಮಾಡುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಶಿಕ್ಷಕರಿಗೆ ಸ್ವಲ್ಪ ತೊಂದರೆ ಆಗಬಹುದು. ಆದರೆ ಸರ್ಕಾರ ಹೆಚ್ಚಿನ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತದೆ. ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ನಾವು, ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ವಲಯ ಕ್ರೀಡಾಕೂಟಗಳು ಮೊದಲು ಹೆಚ್ಚಾಗಿರಲಿಲ್ಲ. ಈಗ ಕ್ರೀಡಾಕೂಟಗಳ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಕ್ರೀಡಾಕೂಟಗಳನ್ನು ಮಾಡುವುದರಿಂದ ಮಕ್ಕಳ ಅಭಿವೃದ್ಧಿಗೆ ಬುನಾದಿ ಹಾಕಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೇಡಿಕೆಯೂ ಬಹಳ ಇದೆ. ಮಕ್ಕಳು ಮಾತೃಭಾಷೆ ಕನ್ನಡ ಕಡ್ಡಾಯ ಇರುವುದರಿಂದ ಅದರ ಜೊತೆಗೆ ಇಂಗ್ಲೀಷ್ ಹಾಗೂ ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು. ಸೊರಬ ತಾಲ್ಲೂಕಿನಲ್ಲಿಯೂ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುತ್ತೇವೆ ಎಂದರು.
ಕ್ರೀಡಾಕೂಟದಲ್ಲಿ 11 ವಲಯದ ಮಕ್ಕಳು ಭಾಗವಹಿಸಿದ್ದೀರಿ. ನಿಮಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನೀವು ಒಂದು ಹೆಜ್ಜೆ ಮುಂದೆ ಬಂದು ಸಾಧನೆ ಮಾಡಲು ಬಂದಿದ್ದೀರಿ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಿರಿ ಎಂದರೆ ನೀವೆಲ್ಲರೂ ಗೆದ್ದಿದ್ದೀರಿ. ಎಲ್ಲರೂ ಒಂದೇ ಎನ್ನುವ ಮನೋಭಾವನೆ ನಿಮ್ಮಲ್ಲಿ ಮೂಡಬೇಕು. ದೈಹಿಕ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಮಕ್ಕಳು ಸಾಧನೆಗೆ ಸಹಕಾರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಜನಪ್ರತಿನಿಧಿಗಳಿಗೆ ಬಹಳ ಸಮಯ ಕೊಡಲು ಆಗಿಲ್ಲ. ಗಣೇಶ ಹಬ್ಬದ ಬಳಿಕ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಮಯ ಕೊಡುತ್ತೇನೆ ಇಲ್ಲಿಯವರೆಗೂ ಸಚಿವನಾಗಿ ಬಹಳ ಕಲಿಯುತ್ತಿದ್ದೇನೆ. ಈ ಕಲಿಕೆ 5 ವರ್ಷದವರೆಗೆ ನಿರಂತರವಾಗಿರುತ್ತದೆ. ಇಲ್ಲಿನ ಸಮಸ್ಯೆಗಳನ್ನು ನೋಡಿದ್ರೆ, ಯಾರು ಇರುವುದಿಲ್ಲ. ಓಡಿ ಹೋಗುತ್ತಾರೆ. ಆದರೆ ಆ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಸೊರಬ ಕ್ಷೇತ್ರದ ಜನತೆ ನೀಡಿದ್ದಾರೆ. ಸೊರಬ ತಾಲ್ಲೂಕಿನ ಜನರು ನನಗೆ 1.20 ಲಕ್ಷ ಮಕ್ಕಳ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Key words: Kannada – Mother Tongue -Mandatory – Children – Karnataka- Minister -Madhu Bangarappa.