ಬೆಂಗಳೂರು,ನವೆಂಬರ್,27,2020(www.justkannada.in): ಎಲ್ಲರ ಸಹಭಾಗಿತ್ವದಲ್ಲಿ ಕನ್ನಡ ಕಾಯಕ ವರ್ಷಾಚರಣೆ ನಿಮಿತ್ತ ಎಲ್ಲ ಸದಸ್ಯರು ಯೋಧರಂತೆ ಕನ್ನಡ ಕಟ್ಟುವಿಕೆಗೆ ಅಣಿಯಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಕರೆ ನೀಡಿದರು.
ವಿಧಾನಸೌಧದಲ್ಲಿಂದು ಜಿಲ್ಲಾ ಕನ್ನಡ ಜಾಗೃತ ಸಮಿತಿ, ಮಹಾನಗರ ಪಾಲಿಕೆ ಮತ್ತು ಬೆಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಜಿಲ್ಲೆಯ ಸದಸ್ಯರೊಂದಿಗೆ ಜಾಲ ಸಂಪರ್ಕ ಸಭೆ ನಡೆಸಿದ ಅಧ್ಯಕ್ಷ ಟಿ.ಎಸ್ ನಾಗಾಭರಣ, ಸದಸ್ಯರು ಎಂಬ ಮಿತಿಯನ್ನು ಹಾಕಿಕೊಳ್ಳದೆ, ಕನ್ನಡದ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಮುಖ್ಯಮಂತ್ರಿಗಳು ಘೋಷಿಸಿರುವ ಕನ್ನಡ ಕಾಯಕ ವರ್ಷಾಚರಣೆ ಎಂಬ ಉದ್ಘೋಷದಡಿ ವರ್ಷಪೂರ್ತಿ ಕರ್ನಾಟಕದ ಉದ್ದಗಲಕ್ಕೂ ಮತ್ತು ದೇಶದ ಒಳಗೆ ಮತ್ತು ಹೊರಗೆ ವಿಶ್ವ ಕನ್ನಡಿಗರ ಜತೆ ಸಮನ್ವಯ ಸಾಧಿಸಿ ಕನ್ನಡದ ತೇರನ್ನು ವಿಶ್ವವ್ಯಾಪಿಯಾಗಿಸುವಂತೆ ತಿಳಿಸಿದರು.
ಯಾವುದೇ ಸದಸ್ಯರು ತಮ್ಮ ವ್ಯಾಪ್ತಿ ಮತ್ತು ಮಿತಿಯನ್ನು ಮೀರದೆ ಪ್ರಾಧಿಕಾರಕ್ಕೆ ಪೂರಕವಾದ ಆಶಯಗಳನ್ನು ಇಟ್ಟುಕೊಂಡು ವಿನಂಭ್ರವಾಗಿ, ಕಾನೂನುಬದ್ಧವಾಗಿ ಮತ್ತು ಸಹೃದಯತೆಯಿಂದ ಕನ್ನಡದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಎಲ್ಲ ಸವಲತ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸುವಂತೆ ತಿಳಿಸಿದ ಅಧ್ಯಕ್ಷರು ಆಯ್ಕೆಯಾಗಿರುವ ಎಲ್ಲ ಸದಸ್ಯರನ್ನು ಅಭಿನಂದಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಅವರು ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಕಾರ್ಯವ್ಯಾಪ್ತಿಯ ಬಗ್ಗೆ ವಿವರಿಸಿ ಯಾವ ಹಂತದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು? ಕನ್ನಡ ಅನುಷ್ಠಾನದ ವಿಷಯದಲ್ಲಿ ಸರ್ಕಾರದ ಆದೇಶಗಳು, ಸುತ್ತೋಲೆಗಳು ಏನನ್ನು ಹೇಳುತ್ತವೆ ಎಂಬ ಬಗ್ಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ವಿವರವಾಗಿ ತಿಳಿಸಿದರು.
ರಾಜ್ಯ ವಿವಿಧ ಜಿಲ್ಲೆಗಳ ಜಿಲ್ಲಾ ಜಾಗೃತಿ ಸಮಿತಿ, ಮಹಾನಗರ ಪಾಲಿಕೆ, ಮತ್ತು ಬೆಂಗಳೂರು ವಿಧಾನಸಭಾ ಮತ ಕ್ಷೇತ್ರದ ಕನ್ನಡ ಜಾಗೃತಿ ಸಮಿತಿಯ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Key words: Kannada-TS Nagabhara-calls – District Kannada Vigilance Committee -members