ಬೆಂಗಳೂರು,ಡಿಸೆಂಬರ್.23,2020(www.justkannada.in) ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಪ್ರವೇಶಾತಿ ನೀಡುತ್ತಿರುವಂತೆ ಹಾಗೂ ರಾಜ್ಯ ಸರ್ಕಾರ ಭಾಷಾ ಉಪನ್ಯಾಸಕರ ನೇಮಕಾತಿಗೆ ಅವಕಾಶ ನೀಡಿದಂತೆ ಕನ್ನಡ ಎಂ.ಎ. ತರಗತಿಗೆ ಪ್ರವೇಶಾತಿ ನೀಡಲು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯವರಿಗೆ ಸೂಚಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಕನ್ನಡ ಎಂ.ಎ.ಗೆ ಪ್ರವೇಶಾತಿಯನ್ನು ನೀಡುವಾಗ ಪದವಿ ತರಗತಿಯಲ್ಲಿ ಐಚ್ಛಿಕ ಕನ್ನಡವನ್ನು ಅಧ್ಯಯನ ಮಾಡಿದವರನ್ನು ಮಾತ್ರ ಪರಿಗಣಿಸುತ್ತಿದೆ. ಇದರಿಂದಾಗಿ ನೂರಾರು ಭಾಷಾ ವಿದ್ಯಾರ್ಥಿಗಳು ಪ್ರವೇಶಾತಿಯಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬಹುತೇಕ “ವಿಶ್ವವಿದ್ಯಾಲಯಗಳು ಕನ್ನಡ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಲು ಅಭ್ಯರ್ಥಿಯು ಪದವಿ ಹಂತದಲ್ಲಿ ಕನ್ನಡವನ್ನು ಐಚ್ಛಿಕವಾಗಿ ಅಥವಾ ಸಾಮಾನ್ಯ ವಿಷಯವಾಗಿ ಓದಿರುವುದನ್ನು ಪರಿಗಣಿಸುತ್ತಿವೆ. ಅಲ್ಲದೆ, 5 ವರ್ಷಗಳ ಬಿ.ಎ.ಆನರ್ಸ್ ಪದವಿ, ಪಿಯುಸಿ ನಂತರದ ಕನ್ನಡ ಡಿಪ್ಲಮೋ, ಕರ್ನಾಟಕ ಸರ್ಕಾರದ ಪಂಡಿತ ಪರೀಕ್ಷೆ, ಎಸ್.ಎಸ್.ಎಲ್.ಸಿ. ಜೊತೆಗೆ ಬಿಇಡಿ ಪದವಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ರತ್ನ ಹಾಗೂ ಮದ್ರಾಸು ವಿಶ್ವವಿದ್ಯಾಲಯದ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನು ಪರಿಗಣಿಸುತ್ತಿವೆ. ಹಾಗಿರುವಾಗ ಬೆಂಗಳೂರು ವಿವಿ ಮಾತ್ರ ಈ ರೀತಿಯ ಷರತ್ತನ್ನು ವಿಧಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಈ ಮಾದರಿಯ ಷರತ್ತನ್ನು ವಿಧಿಸಿ ಕನ್ನಡದ ಕತ್ತನ್ನು ಹಿಸುಕಲು ಹೊರಟಿರುವುದನ್ನು ಸರಿಯಾದ ಕ್ರಮವಲ್ಲ ಎಂದಿರುವ ಅಧ್ಯಕ್ಷರು, ರಾಜ್ಯದ ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸಂಸ್ಥೆಗಳು, ಜನರ ಭಾಷೆಯ ಬಗ್ಗೆ ಹೊಂದಿರುವ ತಾತ್ಸಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಕಾಸರಗೊಡು ಕನ್ನಡ ಅಧ್ಯಯನ ಕೇಂದ್ರ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ಪದವಿ ಹಂತದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ನೀಡಲಾಗಿದೆ. ಅಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯವನ್ನು ಭಾಷೆಯಾಗಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಎಂ.ಎ.ಗೆ ಪ್ರವೇಶ ಹೊಂದಲು ಅವಕಾಶ ನೀಡಲಾಗಿದೆ. ಆದರೆ, ಇದೇ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಮಾತ್ರ ಕನ್ನಡವನ್ನು ಭಾಷೆಯಾಗಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ನಿರಾಕರಿಸುವ ಮೂಲಕ ಬೆಂಗಳೂರು ವಿವಿಯು ಭಾಷಾ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ; ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರೋತ್ಸಾಹ ನಿಡಿ ಬೆಳೆಸಬೇಕಾಗಿರುವ ಈ ಸಂದರ್ಭದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಬೇಕಾದ ಗುರುತರ ಜವಾಬ್ದಾರಿ ಹೊತ್ತಿರುವ ಕನ್ನಡ ಅಧ್ಯಯನ ಕೇಂದ್ರವು, ಕನ್ನಡ ಸ್ನಾತಕೋತ್ತರ ಅಧ್ಯಯನ ಬಯಸಿ ಬರುವ ವಿದ್ಯಾರ್ಥಿಗಳ ಆಸಕ್ತಿಗೆ ತಣ್ಣೀರೆರಚುವ ಕೆಲಸ ಮಾಡದೆ ಅವರಿಗೆ ಪ್ರವೇಶಾತಿ ನೀಡಲು ಮುಂದಾಗಬೇಕೆಂದು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯವರಿಗೆ ಪತ್ರವನ್ನು ಬರೆದಿದ್ದಾರೆ.
key words:kannada- ts nagagarana- bangalore university