ಕೊಪ್ಪಳ,ನವೆಂಬರ್,01,2020(www.justkannada.in) : ಕನ್ನಡ ಕೇವಲ ನವೆಂಬರ್ ಉತ್ಸವವಾಗದೇ ನಿತ್ಯೋತ್ಸವವಾಗಬೇಕು. ಭಾಷಾ ಸ್ವಾಭಿಮಾನದ ಕೊರತೆಯಿಂದಾಗಿ ಕನ್ನಡ ನಶಿಸುವ ಸಾಧ್ಯತೆ ಎದುರಾಗಿದೆ. ಹೀಗಾಗಿ, ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡ ಭಾಷೆ ಬಗ್ಗೆ ಜಾಗೃತರಾಗದೇ ವರ್ಷಪೂರ್ತಿ ನಮ್ಮ ಭಾಷೆ ಎಂಬ ಅಭಿಮಾನವಿರಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಪೆರೆಡ್ಗಳಿಂದ ಧ್ವಜವಂದನೆ ಸ್ವೀಕರಿಸಿ ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು.
ಕರ್ನಾಟಕವೆನ್ನುವುದು ಅಖಂಡ. ನಮ್ಮದು ಅಖಂಡ ಕರ್ನಾಟಕ. ಕೊಪ್ಪಳ ಐತಿಹಾಸಿಕ ಹಿರಿಮೆಯನ್ನು ಹೊಂದಿದ ನಾಡಾಗಿದ್ದು , ಇದು “ ತಿರುಳನ್ನಡದ ನಾಡು ” ಎಂದೇ ಪ್ರಸಿದ್ಧವಾಗಿದೆ . ಕೊಪ್ಪಳವು ಕರ್ನಾಟಕದ ಪ್ರಮುಖ ರಾಜಮನೆತನಗಳ ಆಳ್ವಿಕೆಗೊಳಪಟ್ಟ , ರಾಜಕೀಯ , ಧಾರ್ಮಿಕ , ಸಾಮರಸ್ಯಕ್ಕೆ ಹೆಸರಾದ ಬೀಡು ಎಂದರು.
ಇದು ಪರಧರ್ಮ ಸಹಿಷ್ಣುತೆಗೆ ಒಂದು ಮಾದರಿಯಾಗಿದೆ . ಈ ನಾಡನ್ನು ಸಾಂಸ್ಕೃತಿಕವಾಗಿ ಮತ್ತಷ್ಟು ಉನ್ನತ ಶಿಖರಕ್ಕೆ ತಲುಪಿಸಬೇಕಾದದ್ದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ . ಕಲಾ ಕ್ಷೇತ್ರಕ್ಕೂ ಕೊಪ್ಪಳ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ . ವೃತ್ತಿ ರಂಗಭೂಮಿ ಮಂಡಳಿಗಳು , ಪೌರಾಣಿಕ , ಸಾಮಾಜಿಕ , ಹವ್ಯಾಸಿ ನಾಟಕಗಳು , ಜಾನಪದ ಕಲೆಗಳು , ಬಯಲಾಟ , ಚಿತ್ರಕಲೆ , ಸಂಗೀತ – ಸಾಹಿತ್ಯ ಕ್ಷೇತ್ರಗಳಿಗೂ ಸಹ ಕೊಪ್ಪಳ ಜಿಲ್ಲೆ ಪ್ರಸಿದ್ಧಿಯಾಗಿದೆ ಎಂದು ಹೇಳಿದರು.
ಕಿನ್ನಾಳ ಕರಕುಶಲ ಕಲೆ , ಜಾನಪದ ಪ್ರದರ್ಶನ ಕಲೆಗಳು , ಶಿಲ್ಪಕಲೆಗಳಿಗೆ ಸಂಬಂಧಿಸಿದ ಕಲಾಪ್ರಕಾರಗಳು ಕೊಪ್ಪಳ ಜಿಲ್ಲೆಯಲ್ಲಿ ಇರುವುದು ಅಭಿಮಾನದ ಸಂಗತಿಯಾಗಿರುವುದರ ಜೊತೆಗೆ ಈ ಕನ್ನಡ ರಾಜ್ಯೋತ್ಸವ ಸುಸಂದರ್ಭದಲ್ಲಿ ಜಾನಪದ ತೊಗಲು ಗೊಂಬೆ ಆಟದಲ್ಲಿ ಕೊಪ್ಪಳ ಜಿಲ್ಲೆಯ ಕೇಶಪ್ಪ ಶಿಳ್ಳೆಕ್ಯಾತರ್ ಇವರಿಗೆ 2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಈ ಜಿಲ್ಲೆಯ ಹೆಮ್ಮೆಯಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಭಕ್ತಿ , ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸೆದ ಜಗತ್ತಿನ ಅತ್ಯಪೂರ್ವ ಚಳುವಳಿಯೊಂದು ರೂಪುಗೊಂಡು 12 ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದು ಎಂದು ಬಿ.ಸಿ.ಪಾಟೀಲ್ ಹೇಳಿದರು.
key words : Kannada-not-just-November-festival-celebration-Minister B.C. Patil