ಬೆಂಗಳೂರು:ಜೂ-27:(www.justkannada.in) ಆರ್ಟಿಇ ಅಡಿಯಲ್ಲಿ ಮಗುವಿಗೆ ಸೀಟು ಕೊಡುವುದಾಗಿ ಹೇಳಿ ಮಹಿಳೆಯ ಮೇಲೆ ಕನ್ನಡಸಿರಿ ಸಂಘಟನೆಯ ಅಧ್ಯಕ್ಷ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ಹಾರೋಹಳ್ಳಿಯಲ್ಲಿ ನಡೆದಿದೆ.
ಸಂಘಟನೆಯ ರಾಜ್ಯಾಧ್ಯಕ್ಷ ಆನಂದ್ ಅತ್ಯಾಚಾರ ಆರೋಪಿ. ಜೂನ್ 16 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯ ಮಗುವಿಗೆ ಆರ್ಟಿಐ ಅಡಿಯಲ್ಲಿ ಶಾಲೆಯಲ್ಲಿ ಉಚಿತವಾಗಿ ಸೀಟ್ ಕೊಡಿಸುವುದಾಗಿ ಮತ್ತು ಶಾಲಾ ಶುಲ್ಕ ಕಟ್ಟುವುದಾಗಿ ನಂಬಿಸಿ ಆರೋಪಿ ಈ ಕೃತ್ಯವೆಸಗಿದ್ದಾನೆ.
ಜೂನ್ 16 ರಂದು ಹಾರೋಹಳ್ಳಿಯಲ್ಲಿರುವ ತನ್ನ ಮನೆಗೆ ಮಹಿಳೆಯನ್ನು ಕರೆಸಿಕೊಂಡ ಆರೋಪಿ, ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಜತೆಗಿನ ಖಾಸಗಿ ವೀಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಅತ್ಯಾಚಾರದ ಬಗ್ಗೆ ಬೇರೆಯವರಿಗೆ ತಿಳಿಸಿದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ.
ಮಹಿಳೆಯನ್ನು ಬೆದರಿಸಿ ಮೂರು ಬಾರಿ ಅತ್ಯಾಚಾರ ಮಾಡಿರುವ ಆರೋಪಿ, ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿಯೂ ಹೆದರಿಸಿದ್ದಾನೆ.
ಈ ಘಟನೆಯಿಂದ ಮನನೊಂದ ಮಹಿಳೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಅಂತಿಮವಾಗಿ ಆರೋಪಿ ಆನಂದ್ ನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಈ ಹಿಂದೆಯೂ ಹಲವು ಮಹಿಳೆಯರಿಗೆ ವಂಚಿಸಿದ ದೂರುಗಳು ದಾಖಲಾಗಿವೆ.