ಆಂಧ್ರ ವಿಧಾನಸಭೆ ಪ್ರವೇಶಿಸಿದ ಕನ್ನಡತಿ

ಕೂಡ್ಲಿಗಿ:ಜೂ-6: ಕರ್ನಾಟಕ-ಆಂಧ್ರಪ್ರದೇಶ ಗಡಿ ಭಾಗವಾದ ಬಳ್ಳಾರಿ ಜಿಲ್ಲೆಯ ಮಹಿಳೆಯೊಬ್ಬರು ಆಂಧ್ರಪ್ರದೇಶ ವಿಧಾನಸಭೆ ಪ್ರವೇಶಿಸಿದ್ದಾರೆ. ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯ ಕೆ.ಉಷಾ ಅವರು ಆಂಧ್ರ ರಾಜಕಾರಣದಲ್ಲಿ ಗುರುತಿಸಿಕೊಂಡು ಜನರ ವಿಶ್ವಾಸ ಗಳಿಸಿ ಕಲ್ಯಾಣದುರ್ಗದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ತಾಯಕನಹಳ್ಳಿ ಗ್ರಾಮದ ಕಜ್ಜೆàರು ವಿರೂಪಾಕ್ಷಪ್ಪ ಮತ್ತು ರತ್ನಮ್ಮ ಅವರ ನಾಲ್ವರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ಕೆ.ಉಷಾ ಅವರಿಗೆ ಮೊದಲಿಂದಲೂ ರಾಜಕೀಯದಲ್ಲಿ ಆಸಕ್ತಿ. ಪದವಿ ಮುಗಿಸಿದ ನಂತರ 12 ವರ್ಷದ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಂಗನಹಳ್ಳಿಯ ಚರಣ್‌ ಜತೆ ವಿವಾಹವಾಗಿದ್ದು, ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದರು. ವಿವಾಹದ ನಂತರವೂ ರಾಜಕೀಯ ಪ್ರವೇಶಿಸುವ ತಮ್ಮ ಪ್ರಯತ್ನ ಮುಂದುವರಿಸಿ ಕೊನೆಗೂ ಯಶಸ್ಸು ಕಂಡಿದ್ದಾರೆ.

ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗಡಿಗ್ರಾಮವಾಗಿದ್ದು, ಇಲ್ಲಿಯವರಿಗೆ ಆಂಧ್ರದೊಂದಿಗಿನ ನಂಟು ಸಾಮಾನ್ಯ. ಅಲ್ಲದೆ, ಉಷಾ ಅವರ ತಾಯಿ ರತ್ನಮ್ಮ ಅವರ ತವರುಮನೆ ಆಂಧ್ರದ ರಾಯದುರ್ಗ. ಹೀಗಾಗಿ, ಚಿಕ್ಕಂದಿನಿಂದಲೂ ಅಜ್ಜಿ ಮನೆಯ ಸಂಪರ್ಕವಿತ್ತು. ಆಗಾಗ ರಾಯದುರ್ಗಕ್ಕೆ ಹೋಗುತ್ತಿದ್ದುದರಿಂದ ಸಹಜವಾಗಿಯೇ ಅಲ್ಲಿನ ನಂಟು ಬೆಳೆದಿತ್ತು.

ತಂದೆಗೂ ಆಂಧ್ರದ ನಂಟು: ಉಷಾ ತಂದೆ ಕಜ್ಜೆàರು ವಿರೂಪಾಕ್ಷಪ್ಪ ಅವರು ಹೈದ್ರಾಬಾದ್‌ನ ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, 21 ವರ್ಷಗಳ ಹಿಂದೆಯೇ ಹೃದಯಾಘಾತದಿಂದ ಆಂಧ್ರದಲ್ಲಿ ಮೃತಪಟ್ಟಿದ್ದರು. ಉಷಾ ಅವರ ತಂಗಿ ಅರ್ಚನಾ ಅವರನ್ನು ಕೂಡ ಆಂಧ್ರದ ಕಡಪಾಗೆ ಮದುವೆ ಮಾಡಿಕೊಡಲಾಗಿದೆ.

ಹೀಗಾಗಿ ಉಷಾಗೆ ಆಂಧ್ರಪ್ರದೇಶದ ನಂಟು ಸಾಮಾನ್ಯವಾಗಿಯೇ ಬೆಳೆದಿದೆ. ತಂದೆಯ ಮರಣಾನಂತರ ತಾಯಿ ರತ್ನಮ್ಮ ಹಾಗೂ ಇನ್ನಿಬ್ಬರು ಸಹೋದರಿಯರಾದ ವಿಜಯಲಕ್ಷ್ಮೀ, ಜ್ಯೋತಿ ಕೂಡ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಹೀಗೆ, ಆಂಧ್ರದ ನಂಟು ಹೊಂದಿದ್ದ ಉಷಾ ಅವರು, ರಾಯದುರ್ಗದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸಿದರು.

ಕೈಹಿಡಿದ ವೈಎಸ್‌ಆರ್‌ ಪಕ್ಷ: 2014ರಲ್ಲೇ ರಾಯದುರ್ಗ ಕ್ಷೇತ್ರದಿಂದ ಟಿಡಿಪಿಯಿಂದ ಸ್ಪ ರ್ಧಿಸಲು ಉಷಾ ತಯಾರಿ ನಡೆಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ಟಿಕೆಟ್‌ ಸಿಗಲಿಲ್ಲ. ನಂತರ 3 ವರ್ಷಗಳ ಹಿಂದೆ ವೈಎಸ್‌ಆರ್‌ ಪಕ್ಷಕ್ಕೆ ಸೇರಿದ್ದರು. ಈ ಬಾರಿ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣದುರ್ಗ ಕ್ಷೇತ್ರದ ಟಿಕೆಟ್‌ ಪಡೆದು ತಮ್ಮ ಪ್ರತಿಸ್ಪ ರ್ಧಿಯನ್ನು 18 ಸಾವಿರ ಮತಗಳ ಅಂತರದಿಂದ ಉಷಾ ಸೋಲಿಸಿದ್ದಾರೆ.

ಪ್ರತಿವರ್ಷ ಉಷಾ, ಅವರ ತಾಯಿ ಮತ್ತು ಸೋದರಿಯರು ತಾಯಕನಹಳ್ಳಿಗೆ ಬಂದು ಹಿರಿಯರ ಹಬ್ಬ ಮಾಡಿಕೊಂಡು ಹೋಗುತ್ತಿದ್ದರು. ಈಗ ಅವಳು ಶಾಸಕಿಯಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ.
-ಕೃಷ್ಣಪ್ಪ, ಉಷಾ ಸಂಬಂಧಿ

ಉಷಾಗೆ ಮೊದಲಿನಿಂದಲೂ ರಾಜಕೀಯ ಸೇರಬೇಕೆಂಬ ಉತ್ಸಾಹ ಇತ್ತು. ಟಿಡಿಪಿಯಿಂದ ಟಿಕೆಟ್‌ ವಂಚಿತರಾಗಿ 3 ವರ್ಷಗಳ ಹಿಂದೆಯೇ ವೈಎಸ್‌ಆರ್‌ ಸೇರಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವುದು ಕುಟುಂಬ, ಗ್ರಾಮದ ಜನತೆಗೆ ಖುಷಿ ತಂದಿದೆ.
-ಕೆ.ಅಂಜಿನಪ್ಪ, ಉಷಾ ಚಿಕ್ಕಪ್ಪ
ಕೃಪೆ:ಉದ್ಯವಾಣಿ

ಆಂಧ್ರ ವಿಧಾನಸಭೆ ಪ್ರವೇಶಿಸಿದ ಕನ್ನಡತಿ
kannadati-is-the-entry-into-the-andhra-assembly