ಬೆಂಗಳೂರು,ನವೆಂಬರ್,26,2020(www.justkannada.in): ‘ಕರ್ನಾಟಕದ ಭೂಮಿ, ನೀರು, ಜಾಗ ಬಳಸಿಕೊಂಡು ಎತ್ತರಕ್ಕೆ ಬೆಳೆದಿರುವ ಭಾರತೀಯ ವಿಜ್ಞಾನ ಸಂಸ್ಥೆ, ನೇಮಕಾತಿ ವಿಷಯದಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಕನ್ನಡ ಅನುಷ್ಠಾನದ ವಿಷಯದಲ್ಲಿ ಕೇವಲ ಕಣ್ಣೋರೆಸುವ ತಂತ್ರದಂತೆ ಬಳಕೆಯಾಗುತ್ತಿದ್ದು, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿದ್ದೀರಿ. ಪರಿಣಾಮ ನೆಟ್ಟಗಿರಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ವಿರುದ್ಧ ಗುಡುಗಿದ ಪರಿ ಇದು.
ನೂರಾರು ಎಕರೆ ಭೂಮಿ:
ವಿಧಾನಸೌಧದಲ್ಲಿಂದು ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆಯ ಜಾಲ ಸಂಪರ್ಕ ಸಭೆ ನಡೆಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ರಾಜ್ಯ ಸರ್ಕಾರ ನಿಮ್ಮ ಸಂಸ್ಥೆಗೆ ಸಾವಿರಾರು ಎಕರೆ ಜಾಗ ನೀಡಿದೆ. 111 ವರ್ಷ ಇತಿಹಾಸ ಹೊಂದಿರುವ ಸಂಸ್ಥೆಗೆ ಈ ಮೊದಲು 440 ಎಕರೆ ಜಾಗ ನೀಡಿದ್ದು, ಇತ್ತೀಚೆಗೆ ಶತಮಾನೋತ್ಸದ ಸಂದರ್ಭದಲ್ಲಿ ಚಿತ್ರದುರ್ಗ ಸಮೀಪ 1500 ಎಕರೆ ಭೂಮಿಯನ್ನು ನೀಡಿದೆ. ಇಷ್ಟು ದೊಡ್ಡ ಮಟ್ಟದ ಜಾಗ ನೀಡಿರುವುದು ಕನ್ನಡಿಗರನ್ನು ಕಡೆಗಣಿಸಲಿ ಎಂದಲ್ಲ. ಈ ನೆಲದ ಮಕ್ಕಳಿಗೆ ಉದ್ಯೋಗ ದೊರೆಯಲಿ; ಆ ಮೂಲಕ ಅವರ ಬದುಕು ಹಸನಾಗಲಿ ಎಂಬ ಸದುದ್ದೇಶದಿಂದ. ಇದನ್ನು ಮನದಲ್ಲಿಟ್ಟುಕೊಂಡು ಈ ನೆಲದ ನೀತಿ, ಕಾನೂನನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಬೂಬು ಕೇಳಲ್ಲ:
ಕೋವಿಡ್-19 ಸಂದರ್ಭದಲ್ಲಿ ನಾಗರಿಕರಿಗೆ ಅರಿವು ಮೂಡಿಸಬೇಕಿದ್ದ ಭಾರತೀಯ ವಿಜ್ಞಾನ ಸಂಸ್ಥೆ, ಕೋವಿಡ್ ಕುರಿತು ಆಂಗ್ಲಭಾಷೆಯಲ್ಲಿ ಸುತ್ತೋಲೆ ಹೊರಡಿಸಿದ್ದೀರಿ. ಇದು ಯಾರಿಗಾಗಿ ? ಅದರ ಬದಲಿಗೆ ಕನ್ನಡದಲ್ಲಿ ಸುತ್ತೋಲೆ ಹೊರಡಿಸಿದ್ದರೆ, ಜನರು ಜಾಗೃತರಾಗುತ್ತಿದ್ದರು. ಸಾವು-ನೋವುಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ನೀವು ಆ ಕೆಲಸ ಮಾಡದೆ, ಮಾಡುವ ತಪ್ಪುಗಳಿಗೆಲ್ಲ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದೀರಿ. ಇದು ಕನ್ನಡ ಕಾಯಕ ವರ್ಷ. ಹಾಗಾಗಿಇನ್ನು ಸಬೂಬು ಕೇಳಲು ಸಿದ್ಧರಿಲ್ಲ ಬದಲಾಗಿ ಬದ್ಧತೆಯಿಂದ ಕಾರ್ಯಾನುಷ್ಠಾನ ಮಾಡುವಂತೆ ಸೂಚಿಸಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ಸಾಬೀತು ಮಾಡುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುವಂತೆ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷರು, ನೇಮಕಾತಿ ಸಂದರ್ಭದಲ್ಲಿ ಗ್ರಾಮೀಣರು ಆಯ್ಕೆಯಾಗುವ ನಿಟ್ಟಿನಲ್ಲಿ ತರಬೇತಿ ನೀಡುವಂತೆ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರ ನಿಮ್ಮ ಸಂಸ್ಥೆಗೆ ನೀಡಿರುವ ಭೂಮಿಯ ಇಂದಿನ ಮಾರುಕಟ್ಟೆ ಬೆಲೆ ಬಹುದೊಡ್ಡ ಮಟ್ಟದ್ದು, ಇದನ್ನರಿತು ಸರೋಜಿನಿ ಮಹಿಷಿ ವರದಿಯನ್ವಯ ಸಿ ಮತ್ತು ಡಿ ವೃಂದ ನೇಮಕಾತಿಯಲ್ಲಿ ಶೇ.100ರಷ್ಟು ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ಅವರು, ರಾಜ್ಯ ಸರ್ಕಾರದ ನಿಯಮಾನುಸಾರ ಜಾಲತಾಣವನ್ನು ನವೀಕರಿಸುವಂತೆ ಸೂಚಿಸಿದರು.
ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಪ್ರಾಧಿಕಾರ ಸದಸ್ಯರಾದ ರೋಹಿತ್ ಚಕ್ರತೀರ್ಥ, ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್, ರಿಜಿಸ್ಟ್ರಾರ್ ಪ್ರೊ.ಕೆ.ವಿ.ಎಸ್.ಹರಿ, ಉಪ ರಿಜಿಸ್ಟ್ರಾರ್ ವೀರಣ್ಣ ಕಮ್ಮಾರ, ಡೀನ್ಗಳಾದ ಪ್ರೊ.ಅನಿಲ್ ಕುಮಾರ್, ಪ್ರೊ.ನರಹರಿ, ಪ್ರೊ.ಅಶೋಕ್ ರಾಯಚೂರು, ಕನ್ನಡ ಸಂಘದ ಪದಾಧಿಕಾರಿಗಳಾದ ಸತೀಶ ಮತ್ತು ಜಗದೀಶ್ ಇತರರು ಉಪಸ್ಥಿತರಿದ್ದರು.
Key words: Kannadigara -self-esteem- TS Nagambara – IISC