ಬೆಂಗಳೂರು, ಸೆಪ್ಟೆಂಬರ್ 14, 2023 (www.justkannada.in): ಇಂಗ್ಲೆಂಡ್’ನ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ 182 ರನ್ ಸಿಡಿಸಿ ಕೂಲ್ ಕ್ಯಾಪ್ಟನ್ ಧೋನಿ ದಾಖಲೆ ಮುರಿದಿದ್ದಾರೆ.
15 ಬೌಂಡರಿ 9 ಸಿಕ್ಸರ್ ನೆರವಿನಿಂದ 182 ರನ್ ಸಿಡಿಸಿದ ಬೆನ್ ಸ್ಟೋಕ್ಸ್, ಕಪಿಲ್ ದೇವ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿ ಸಲುವಾಗಿ ನಿವೃತ್ತಿಯನ್ನು ಹಿಂಪಡೆದಿರುವ ಬೆನ್ ಸ್ಟೋಕ್ಸ್ ವಿಶ್ವಕಪ್ ಟೂರ್ನಿಯಲ್ಲಿ ಎದುರಾಳಿ ತಂಡದ ಬೌಲರ್ ಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ. ಲಂಡನ್ ದಿ ಓವಲ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ 4ನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸ್ಫೋಟಕ 182 ರನ್ ಸಿಡಿಸಿದ್ದಾರೆ.
3ನೇ ವಿಕೆಟ್ ಗೆ ಜೊತೆಗೂಡಿದ ಸಿಡಿಲಬ್ಬರದ ಆಟಗಾರರಾದ ಡೇವಿಡ್ ಮಾಲನ್ (96 ರನ್) ಹಾಗೂ ಬೆನ್ ಸ್ಟೋಕ್ಸ್ (182 ರನ್) ಕಿವೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿ 199 ರನ್ ಗಳ ಜೊತೆಯಾಟ ನೀಡಿದ್ದರು.
ಇಂಗ್ಲೆಂಡ್ ನ 368 ರನ್ ಗಳ ಬೃಹತ್ ಮೊತ್ತ ಹಿಂಬಾಲಿಸಿದ ನ್ಯೂಜಿಲೆಂಡ್ 187 ರನ್ ಗಳಿಗೆ ಆಲೌಟ್ ಆಗಿ 182 ರನ್ ಅಂತರದಿಂದ ಸೋಲು ಕಂಡಿತು.