ಶುಂಠಿ ಶುದ್ಧೀಕರಣ ಘಟಕದಿಂದ ಕಪಿಲೆಯ ಒಡಲು ಕಲುಷಿತ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಮೈಸೂರು,ನವೆಂಬರ್,25,2024 (www.justkannada.in): ಶುಂಠಿ ಶುದ್ಧೀಕರಣ ಘಟಕದಲ್ಲಿ ರಾಸಾಯನಿಕ ಬಳಸುತ್ತಿರುವ ಹಿನ್ನೆಲೆಯಲ್ಲಿ ಕಪಿಲೆಯ ಒಡಲು ಕಲುಷಿತಗೊಂಡಿದ್ದು, ಕಲುಷಿತ ನೀರಿನಿಂದ ದನ-ಕರುಗಳು, ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದರೂ ಸಹ ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಐದಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಕೇಂದ್ರಗಳನ್ನು ಯಾವುದೇ ಅನುಮತಿ ಪಡೆಯದೆ ನಡೆಸುತ್ತಿರುವ ಆರೋಪ ಕೇಳಿ ಬಂದಿದ್ದು, ಶುದ್ಧೀಕರಣ ಕೇಂದ್ರದಿಂದ ಸಾವಿರಾರು ಜನರ ಆರೋಗ್ಯಕ್ಕೆ ಕುತ್ತು ಉಂಟಾಗಿದೆ.

ಈ ಸಂಬಂಧ ಪರಿಸರ ಇಲಾಖೆ, ಮಾಲಿನ್ಯ ಮಂಡಳಿ, ಪರಿಸರ ಅಭಿಯಂತರರು, ಅರಣ್ಯ ಇಲಾಖೆ, ಜಲಮಂಡಳಿ, ಚೆಸ್ಕಾಂ, ಕಾರ್ಮಿಕ ಇಲಾಖೆ, ತಾಲೂಕು ಆಡಳಿತ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಖುದ್ದು ಪುರಸಭೆ ಅಧಿಕಾರಿ  ಪತ್ರ ನೀಡಿದರೂ ಸಹ ಅಧಿಕಾರಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

ಕೃಷಿಭೂಮಿಯನ್ನ ವಾಣಿಜ್ಯೇತರ ಬಳಸಿಕೊಳ್ಳುವ ಮುನ್ನ ಅನ್ಯಕ್ರಾಂತ ಮಾಡಿಸಿಕೊಳ್ಳಬೇಕು. ಆದರೆ‌ ಕಾನೂನು ಉಲ್ಲಂಘಿಸಿ ಶುದ್ಧೀಕರಣ ಘಟಕ ತೆರೆಯಲಾಗಿದ್ದು,  ರಾಸಾಯನಿಕ‌ ಬಳಸಿ ಶುಂಠಿ ಶುದ್ಧೀಕರಣ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.  ಖುದ್ದು ಪುರಸಭೆ ಅಧಿಕಾರಿಗಳ ಪತ್ರಕ್ಕೂ ಇತರೆ ಇಲಾಖೆಗಳು ಕ್ಯಾರೆ ಎನ್ನುತ್ತಿಲ್ಲ  ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾದರೂ ಕೂಡ ಈ ಬಗ್ಗೆ ಕ್ರಮ ಆಗ್ತಿಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ್ ಅಸಹಾಯಕತೆ ತೋಡಿಕೊಂಡಿದ್ದಾರೆ.

ಬಿಜು, ಪಿ.ರಂಗಪ್ಪ ಎಂಬವರಿಗೆ ಸೇರಿದ ಭೂಮಿಯಲ್ಲಿ ಅಗ್ನಿಶಾಮಕ ಕಚೇರಿ ಹಿಂಭಾಗ ಹ್ಯಾಂಡ್ ಪೋಸ್ಟ್ ಬಳಿ  ಮುನೀರ್, ಜೋಬಿ ಎಂಬವರು  ತೆರೆದಿರುವ ಶುಂಠಿ ಶುದ್ಧೀಕರಣ ಕೇಂದ್ರಗಳಾಗಿವೆ.

ಈವರೆಗೆ ಎಲ್ಲಾ ಇಲಾಖೆಗಳಿಗೂ ಪತ್ರ ಬರೆದಿದ್ದೇವೆ. ಕಾರ್ಮಿಕರ‌ಹಿತ ದೃಷ್ಠಿಯಿಂದಲೂ ಕ್ರಮ ಕೈಗೊಳ್ಳುತ್ತಿಲ್ಲ. ಶುಂಠಿ‌ ತೊಳೆದ ನೀರಿನಿಂದ ದನ ಕರುಗಳ ಮೈ‌ಮೇಲೆ ಗಂಟು ಬರ್ತಿವೆ. ಬಹುತೇಕ ಹಸುಗಳು ಸತ್ತು ಹೋಗಿವೆ. ಸಣ್ಣ ಪೆಟ್ಟಿಗೆ ಅಂಗಡಿ ತೆರೆದರೂ ಅನುಮತಿ ಬೇಕು. ಆದರೆ ತಾರಕ ಡ್ಯಾಂ, ಕಬಿನಿ ಡ್ಯಾಂಗೆ ಕಲುಷಿತ ನೀರು ಸೇರಿಸಿದರೂ ಯಾರೂ ಕೇಳುತ್ತಿಲ್ಲ . ಈ ಕುಡಿಯುವ ನೀರನ್ನ ಮೈಸೂರು, ಬೆಂಗಳೂರು ಜನರೂ ಕುಡಿಯುತ್ತಾರೆ. ಕೂಡಲೇ ಎಲ್ಲವನ್ನೂ ಬಂದ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಕೇಸ್ ದಾಖಲಿಸಬೇಕು. ಎಲ್ಲಾ ಶುಂಠಿ ಕೇಂದ್ರಗಳನ್ನ ಮುಚ್ಚಿಸಬೇಕು ಎಂದು  ಹೆಚ್.ಡಿ.ಕೋಟೆ ಪುರಸಭೆ ಸದಸ್ಯ ನರಸಿಂಹ ಮೂರ್ತಿ, ಎಚ್.ಡಿ.ಕೋಟೆ ನಾಗರೀಕ ಯಶ್ವಂತ್ ಕುಮಾರ್ ಆಗ್ರಹಿಸಿದ್ದಾರೆ.

Key words: Kapila rivaer,  water, polluted, ginger purification plant