ಬೆಂಗಳೂರು:ಜೂ-15: ಕೇರಳಕ್ಕೆ ಪ್ರವೇಶಿಸಿದ ಹಲವು ದಿನಗಳ ಬಳಿಕ ಶುಕ್ರವಾರ ರಾಜ್ಯಕ್ಕೆ ನೈಋುತ್ಯ ಮುಂಗಾರು ಪ್ರವೇಶಿಸಿದೆ. ವಾಯು ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಮುಂಗಾರು ಸ್ವಲ್ಪ ಚುರುಕಾಗಿದೆ.
ಜೂ.8ರಂದು ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಇದೇ ವೇಳೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಅದು ಚಂಡಮಾರುತವಾಗಿ ಬದಲಾಗಿದ್ದರಿಂದ ರಾಜ್ಯಕ್ಕೆ ಮುಂಗಾರು ಪ್ರವೇಶ ತಡವಾಯಿತು.
ವಾಯು ಚಂಡಮಾರುತ ಗುಜರಾತ್‌ನ ಕರಾವಳಿಯಲ್ಲಿದ್ದು, ಶುಕ್ರವಾರದಿಂದ ದುರ್ಬಲಗೊಂಡಿದೆ. ಈ ವೇಳೆ ಮುಂಗಾರು ಸ್ವಲ್ಪಮಟ್ಟಿಗೆ ಚುರುಕಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಭಾರಿ ಮಳೆ ಸುರಿದಿದೆ.
ಮುಂಗಾರು ಸದ್ಯಕ್ಕೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಭಾಗಗಳಲ್ಲಿ ಸಂಪೂರ್ಣವಾಗಿ ಆವರಿಸಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳನ್ನು ಪೂರ್ಣವಾಗಿ ಆವರಿಸಲು ಇನ್ನೂ ನಾಲ್ಕೈದು ದಿನಗಳ ಕಾಲ ಬೇಕಾಗಿದೆ. ಶುಕ್ರವಾರ ಮುಂಗಾರಿನಿಂದ ಮಳೆ ಬಂದಿದ್ದರೂ ಅದರಲ್ಲಿ ಚಂಡಮಾರುತದ ಅಲ್ಪ ಪರಿಣಾಮವೂ ಇದೆ.
ಮಳೆ ಪ್ರಮಾಣ: ಕೊಲ್ಲೂರಿನಲ್ಲಿ 130 ಮಿ.ಮೀ., ಸಿದ್ದಾಪುರದಲ್ಲಿ (ಉಡುಪಿ) 110 ಮಿ.ಮೀ., ಮಾಣಿ, ಕುಂದಾಪುರ, ಅಂಕೋಲ, ಕಾರವಾರದಲ್ಲಿ 90 ಮಿ.ಮೀ., ಶಿರಾಲಿ, ಕದ್ರ, ಪಣಂಬೂರು, ಮೂಡಬಿದಿರೆ, ಉಪ್ಪಿನಂಗಡಿ, ಭಟ್ಕಳ, ಮಂಕಿ, ಗೋಕರ್ಣ, ವಿರಾಜಪೇಟೆ, ಕೊಟ್ಟಿಗೆಹಾರದಲ್ಲಿ 70 ಮಿ.ಮೀ., ಮಂಗಳೂರು, ಬೆಳ್ತಂಗಡಿ, ಕೋಟ, ಕ್ಯಾಸಲ್ ರಾಕ್, ಭಾಗಮಂಡಲ, ಹೊಸನಗರದಲ್ಲಿ 6 ಮಿ.ಮೀ. ಮಳೆಯಾಗಿದೆ. ಖಾನಾಪುರ, ಕಿತ್ತೂರು, ಕಲಘಟಗಿ, ಕೊಪ್ಪಳ, ಕಮಲಾಪುರದಲ್ಲಿ 10 ಮಿ.ಮೀ. ಮಳೆ ಸುರಿದಿದೆ.
”ಚಂಡಮಾರುತದ ತೀವ್ರತೆ ಹೆಚ್ಚಿದ್ದರಿಂದ ಮುಂಗಾರು ದುರ್ಬಲಗೊಂಡಿತ್ತು. ಚಂಡಮಾರುತ ಗುಜರಾತ್‌ನ ಕರಾವಳಿಗೆ ತಲುಪಿದ್ದು, ದುರ್ಬಲಗೊಂಡಿದೆ. ಇದು ಮುಂಗಾರು ಪ್ರವೇಶಕ್ಕೆ ಹಾಗೂ ಮುಂಗಾರು ಚುರುಕಾಗಲು ಅನುಕೂಲಕರ ವಾತಾವರಣ ಕಲ್ಪಿಸಿಕೊಟ್ಟಿದೆ. ಮುಂಗಾರಿನಿಂದಾಗಿ ಈಗ ಕೆಲ ಜಿಲ್ಲೆಗಳಲ್ಲಿ ಮಳೆ ಬರುತ್ತಿದೆ. ಒಳನಾಡನ್ನು ಮುಂಗಾರು ಸಂಪೂರ್ಣವಾಗಿ ವ್ಯಾಪಿಸಲು ನಾಲ್ಕೈದು ದಿನ ಹಿಡಿಯಲಿದೆ,” ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ.
ಜೂ.15, 16, 19 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಾಗೂ ಜೂ.19 ರವರೆಗೆ ಕರಾವಳಿಯ ಎಲ್ಲ ಭಾಗಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಗೆ ಎಚ್ಚರಿಕೆ: ಮಂಗಳೂರಿನಿಂದ ಕಾರವಾರವರೆಗೆ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಮೀನುಗಾರರು ಕಡಲಿಗಿಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೃಪೆ:ವಿಜಯಕರ್ನಾಟಕ