ಮೈಸೂರು, ಮಾ.೦೪, ೨೦೨೪ : ಲೋಕಾಯುಕ್ತ ಪೋಲೀಸ್ ರಿಂದಲೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಚಾಜ್೯ಶೀಟ್ ಆಗಿದ್ದ ವ್ಯಕ್ತಿಗೆ ಖುದ್ದು ಲೋಕಾಯುಕ್ತರ ಸಮ್ಮುಖದಲ್ಲೇ ಗೌರವ ಡಾಕ್ಟರೇಟ್ ನೀಡಿದ ಘಟನೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.
ಆರ್.ಟಿ.ಒ ಇನ್ಸ್ ಪೆಕ್ಟರ್ ಆಗಿದ್ದಾಗ ಲೋಕಾಯುಕ್ತ ಪೋಲೀಸ್ ರಿಂದಲೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಚ್. ಸಿ. ಸತ್ಯನ್ ವಿರುದ್ಧ ಚಾಜ್೯ಶೀಟ್ ಸಲ್ಲಿಸಲಾಗಿತ್ತು. ಇದೀಗ ಹೆಚ್ ಸಿ ಸತ್ಯನ್ ಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಭಾನುವಾರ ( 3.3.2024) ನಡೆದ 19ನೇ ಘಟಿಕೋತ್ಸವದಲ್ಲಿ ತನ್ನ ಹಾಲೀ ಗೌರವಾನ್ವಿತ ಲೋಕಾಯುಕ್ತ ಬಿ.ಎಸ್.ಪಾಟೀಲ್ ಸಮಕ್ಷಮದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.
ಹಿಂದೆ ಸಕಲೇಶಪುರದ RTO ಇನ್ಸ್ ಪೆಕ್ಟರ್ ಆಗಿದ್ದ ಹೆಚ್ ಸಿ ಸತ್ಯನ್ ವಿರುದ್ಧ ಲೋಕಾಯುಕ್ತ ಪೋಲೀಸ್ ರಿಂದ ತನಿಖೆ ನಡೆಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(1)(e) ಹಾಗೂ 13(2) ಯಡಿ 22.09.2012ರಲ್ಲಿ ಚಾರ್ಜ್ ಶೇಟ್ ( Charge Sheet ) ಸಲ್ಲಿಸಲಾಗಿತ್ತು.
ಲೋಕಾಯುಕ್ತದ ಚಾರ್ಜ್ ಶೀಟ್ ( Charge Sheet) ರದ್ದು ಗೊಳಿಸುವಂತೆ ಕೋರಿ ಹೆಚ್ ಸಿ ಸತ್ಯನ್ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ CRL.P 899/2017ಅನ್ನು 15/6/2017 ತೀರ್ಪಿನಂತೆ ನ್ಯಾಯಮೂರ್ತಿ ಕೆ.ಎನ್.ಪಣೀಂದ್ರರವರ ಉಚ್ಚ ನ್ಯಾಯಾಲಯದ ಪೀಠ ವಜಾಗೊಳಿಸಿತ್ತು.
ಉಚ್ಚ ನ್ಯಾಯಾಲಯದ CRL.P 899/2017ರಲ್ಲಿನ ತೀರ್ಪಿನ ವಿರುದ್ಧ ಮತ್ತೆ , ಹೆಚ್ ಸಿ ಸತ್ಯನ್ ಸಲ್ಲಿಸಿದ್ದ ಮೇಲ್ಮನವಿ SLP(Crl) 9158/2017 ಅನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ 01/12/2017ರ ಆದೇಶದಂತೆ ವಜಾಗೊಳಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಮಧ್ಯ ಪ್ರವೇಶಿಸಲು ಸಕಾರಣಗಳಿಲ್ಲ ಎಂದು ಮೇಲ್ಮನವಿಯನ್ನು ವಜಾಗೊಳಿಸಿತ್ತು.
ಮೈಸೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಮೂಲ ಪ್ರಕರಣ :
SPL.C 74/2012 ಇವತ್ತಿಗೂ ಬಾಕಿಯಿದ್ದು, ಕರಾಮುವಿ ಗೌರವ ಡಾಕ್ಟರೇಟ್ ಪುರಸ್ಕೃತ ಎಚ್.ಸಿ.ಸತ್ಯನ್ ಕಳೆದ 26.02.2024ರಂದು ಸದರಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದು ಪ್ರಕರಣ ಮತ್ತೆ 01.04.2024 ವಿಚಾರಣೆಗೆ ಬರುತ್ತಿದೆ.
ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡುವ ವೇಳೆ ಮುಕ್ತ ವಿಶ್ವವಿದ್ಯಾಲಯ ಸೂಕ್ತವಾಗಿ ಪೂರ್ವಾಪರ ಪರಿಶೀಲಿಸದೇ ತನ್ನ 19ನೇ ಘಟಿಕೋತ್ಸವದಲ್ಲಿ ಹಾಲೀ ಗೌರವಾನ್ವಿತ ಲೋಕಾಯುಕ್ತ ಬಿ.ಎಸ್.ಪಾಟೀಲ್ ಸಮಕ್ಷಮದಲ್ಲಿಯೇ ಪ್ರತಿಷ್ಠಿತ ಗೌರವ ಡಾಕ್ಟರೇಟ್ ನೀಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಮುಕ್ತ ವಿವಿಯ ಗೌರವ ಡಾಕ್ಟರೇಟ್ , ಸಾರ್ವಜನಿಕರಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ.
ಕೋ ಆರ್ಡಿನೇಟರ್ ಗೂ ʼ ಗೌಡಾʼ..?
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯತನ್ನದೇ ಚಿತ್ರದುರ್ಗ ಅಧ್ಯಯನ ಕೇಂದ್ರ ಕೆಎಂಎಸ್ ಪ್ರಥಮ ದರ್ಜೆ ಕಾಲೇಜು ( KMS First Grade College, Chitradurga ) ಇಲ್ಲಿನ ಸಂಯೋಜಕ ಕೆ.ಎಂ.ವೀರೇಶ್ ( K.M.Veeresh ) ಅವರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಸೂಕ್ತವಾಗಿ ಪರಿಶೀಲಿಸದೇ ದಿನಾಂಕ 3.3.2024ರ ತನ್ನ 19ನೇ ಘಟಿಕೋತ್ಸವದಲ್ಲಿ ಪ್ರತಿಷ್ಠಿತ ಗೌರವ ಡಾಕ್ಟರೇಟ್ ನೀಡಿದ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿದೆ.
ಕುಲಪತಿ ಸ್ಪಷ್ಟನೆ :
ಗೌರವ ಡಾಕ್ಟರೇಟ್ ಪುರಸ್ಕೃತ ಎಚ್.ಸಿ.ಸತ್ಯನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ತಿಳಿಸಿದರು.
ಈ ಬಗ್ಗೆ ಜಸ್ಟ್ ಕನ್ನಡ ಜತೆಗೆ ಮಾತನಾಡಿದ ಕುಲಪತಿ ಪ್ರೊ.ಶರಣಪ್ಪ ಹಲಸೆ ಹೇಳಿದಿಷ್ಟು, ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿರುತ್ತದೆ. ಈ ಸಮಿತಿಯಲ್ಲಿ ರಾಜ್ಯಪಾಲರ ನಾಮ ನಿರ್ದೇಶಿತ ಪ್ರತಿನಿಧಿಗಳು ಹಾಗೂ ಸಿಂಡಿಕೇಟ್ ನಾಮನಿರ್ದೇಶಿತರು ಇರುತ್ತಾರೆ. ಈ ಸಮಿತಿ ನೀಡಿದ ಶಿಫಾರಸ್ಸುಗಳನ್ನು ರಾಜಭವನದ ಸಿಬ್ಬಂದಿ ಪರಿಶೀಲಿಸಿ ಪಟ್ಟಿ ಅಂತಿಮಗೊಳಿಸುತ್ತಾರೆ. ಹಾಗಾಗಿ ಆಯ್ಕೆ ಪಟ್ಟಿಯಲ್ಲಿ ವಿವಿಯ ಪಾತ್ರವಿಲ್ಲ. ಶಿಪಾರಸ್ಸು ಮಾತ್ರ ಮಾಡಲಾಗುತ್ತದೆ ಎಂದರು.
ಚಿತ್ರದುರ್ಗದ ಕೆ.ಎಂ.ವೀರೇಶ್, ಬಾಪೂಜಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅವರು ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರ ಆರಂಭಿಸಿದ್ದು ನಮ್ಮ ಕೋರ್ಸ್ ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. ಯುಜಿಸಿ ನಿಯಮಾವಳಿ ಪ್ರಕಾರ ಪ್ರಾದೇಶಿಕ ಕೇಂದ್ರ ಆರಂಭಿಸಬೇಕಾಗಿದೆ. ಹಾಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿರುವುದರಲ್ಲಿ ಯಾವುದೇ ಲೋಪವಿಲ್ಲ ಎಂದು ಕುಲಪತಿಗಳು ಸ್ಪಷ್ಟಪಡಿಸಿದರು.
Key words : Karnataka ̲ open ̲ university ̲ doctorate ̲ vc ̲ ksou