ಕಮಲ ಪಕ್ಷ ಹಿರಿಯ ನಾಯಕರನ್ನು ಮೂಲೆಗೆ ಸರಿಸುತ್ತಿರುವ ಹಿನ್ನಲೆ ಏನು?  

ಬೆಂಗಳೂರು,ಏಪ್ರಿಲ್,15,2023(www.justkannada.in): ಕರ್ನಾಟಕದಲ್ಲಿ ಈಗ ಚುನಾವಣಾ ಪರ್ವ. ಅಂತೆಯೇ ಪಕ್ಷದಲ್ಲಿ ಹೊಸತನ, ಹೊಸ ತಲೆಮಾರಿನ ನಾಯಕರುಗಾಗಿ ಬಿಜೆಪಿ ತಲಾಷ್  ನಡೆಸಿದೆಯೇ ಎಂಬ ಗುಮಾನಿ ಜನರಲ್ಲಿ ದಟ್ಟವಾಗುತ್ತಿದೆ. ಈ ರೀತಿಯ ಅನುಮಾನಕ್ಕೆ ಎಡೆ ಮಾಡಿಕೊಟ್ಟದ್ದು, ಕಮಲದ ಹೈ ಕಮಾಂಡ್ ಇದ್ದಕ್ಕಿದ್ದಂತೆ ಹಿರಿಯ ತಲೆಗಳನ್ನು ಪಕ್ಕಕ್ಕೆ ಸರಿಸಲು ಆರಂಭಿಸಿದ್ದು.

2018 ರ ವಿಧಾನಸಭೆ ಚುನಾವಣೆಯಲ್ಲಿ, ಪಕ್ಷದ ಮೇರುನಾಯಕ ಹಾಗೂ ಪ್ರಭಾವಿ ಲಿಂಗಾಯತ ಮುಖಂಡ ಯಡಿಯೂರಪ್ಪ ನವರಿಗೆ ಎಪ್ಪತ್ತೈದು ವರ್ಷವಾಗಿದ್ದರು, ಪಕ್ಷ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯ ಮಂತ್ರಿ ಎಂದು ಘೋಷಿಸಿತು. ಆದಾಗಿಯೂ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಬಿಜೆಪಿಯ ವಜುಭಾಯಿ ವಾಲ ರಾಜ್ಯಪಾಲರಾಗಿದ್ದ ಕಾರಣ, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾರಣ, ಆ ಪಕ್ಷವನ್ನು ಸರ್ಕಾರ ರಚನೆಗೆ, ಬಹುಮತವಿಲ್ಲದಿದ್ದರೂ ಅಹ್ವಾನಿಸಿದರು. ಅಲ್ಪ ಮತದ ಯಡಿಯೂರಪ್ಪ ಸರ್ಕಾರ ಕೆಲವೇ ದಿನಗಳಲ್ಲಿ ಪತನವಾಯಿತು. ನಂತರ  ಅವಕಾಶವಾದಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಾತ್ಯಾತೀತ ಮುಖವಾಡ ಮತ್ತೊಮ್ಮೆ ಧರಿಸಿ ಸಮ್ಮಿಶ್ರ ಸರ್ಕಾರ ರಚಿಸಿ, ಅದೂ ಸಹ ಹದಿನಾಲ್ಕು ತಿಂಗಳಲ್ಲಿ ಪತನವಾಯಿತು. ಮತ್ತೆ ವಯೋವೃಧ್ಧ ಯಡಿಯೂರಪ್ಪ, ಪಕ್ಷಾಂತರ ಪರ್ವ ಕೈಗೊಂಡು ಕಾಂಗ್ರೆಸ್  ಜೆಡಿಎಸ್ ನ ಶಾಸಕರನ್ನು ಸೆಳೆದು ಅಧಿಕಾರದ ಗದ್ದುಗೆ ಏರಿದ್ದು, ಎರಡು ವರ್ಷಗಳ ನಂತರ ವಯಸ್ಸಿನ ನೆಪವೊಡ್ಡಿ ಅವರನ್ನು ಹೀನಾಯವಾಗಿ ಪದಚ್ಯುತಿಗೊಳಿದ್ದು ಇತಿಹಾಸ.

ಚುನಾವಣಾ ಘೋಷಣೆ ಯಾಗುತ್ತಿದ್ದಂತೆ, ಬಿಜೆಪಿ ಸದ್ದಿಲ್ಲದೆ ತನ್ನ ಹಿರಿಯ ನಾಯಕರುಗಳನ್ನು ನೇಪಥ್ಯಕ್ಕೆ ಸರಿಸುವ ಕೆಲಸ ಮಾಡಿದೆ. ಕಮಲ ಪಾಳಯದಲ್ಲಿ ಈ ವಿದ್ಯಮಾನ ಹಲವರಿಗೆ ಶಾಕ್ ತಂದಿದೆ. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿ, ಯುವ ನಾಯಕ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯಾಗಿ ಕೂರಿಸಿತು. ಹೊಸ ಮುಖ, ಕಳಂಕ ರಹಿತ ಬೊಮ್ಮಾಯಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಬಹುದು, ಯಡಿಯೂರಪ್ಪ ಸರ್ಕಾರದ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳಿಂದ ಪಕ್ಷ  ಹಾಗೂ ಸರ್ಕಾರವನ್ನು ಪಾರು ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡುತ್ತು. ಆದರೆ ಬೊಮ್ಮಾಯಿಯವರು ಬಿಜೆಪಿ ವರಿಷ್ಠರನ್ನು ಭ್ರಮ ನಿರಸನಗೊಳಿಸಿದರು. ಭ್ರಷ್ಟಾಚಾರದ ಆರೋಪಗಳ ಸುರಿಮಳೆಯ ಜೊತೆಗೆ, ಆಡಳಿತದಲ್ಲಿ ಹೊಸತನ ಚುರುಕುತನ ತರಲು ಬೊಮ್ಮಾಯಿಯವರಿಗೆ ಸಾಧ್ಯವಾಗಲಿಲ್ಲ. ಹಿರಿಯರ ಅಸಹಕಾರವೂ ಇದಕ್ಕೆ ಕಾರಣ. ಬೊಮ್ಮಾಯಿಯವರನ್ನು ಬದಲಿಸಿದರೆ, 2008 ರಲ್ಲಿ ಜರುಗಿದ ಮೂರು ಮುಖ್ಯಮಂತ್ರಿ ಪ್ರಹಸನ ಮರುಕಳಿಸಿ ಪಕ್ಷದ ಘನತೆಗೆ ಧಕ್ಕೆಯಾಗಬಹುದು ಎಂದು ಕಮಲ ಹೈಕಮಾಂಢ್ ಸುಮ್ಮನಾಯಿತು. ಚುನಾವಣೆಯಲ್ಲಿ ಬೊಮ್ಮಾಯಿ ನಾಯಕತ್ವ ಜನತೆಗೆ ಅಪಥ್ಯವಾದೀತು ಎಂದರಿತ ಪಕ್ಷ ಹಳೇ ಗಂಡನ ಪಾದವೇ ಗತಿ ಎಂಬುದನ್ನು ಅರಿತು, ಯಡಿಯೂರಪ್ಪ ನವರೆಗೇ ಮಣೆ ಹಾಕಿತು.

ಏತನ್ಮಧ್ಯೆ, ಅಕಸ್ಮಾತ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಬಹುಮತ ಲಭಿಸಿದರೆ, ಹೊಸ ನಾಯಕನನ್ನು ಕೂರಿಸಬೇಕು ಎಂದು ಹಲವಾರ ಪ್ರಯೋಗಕ್ಕೆ ಮುಂದಾಗಿರುವಂತೆ ತೋರುತ್ತಿದೆ. ಇದರ ಭಾಗವಾಗಿ ವಯಸ್ಸಾದ ಹಿರಿಯ ತಲೆಗಳನ್ನು ಪಕ್ಕಕ್ಕೆ ಸರಿಸುವ ಕೆಲಸ ಸದ್ದಿಲ್ಲದೆ ನಡೆದಿದೆ. ಮೊದಲಿಗೆ ಯಡಿಯೂರಪ್ಪ, ನಂತರ ಈಶ್ವರಪ್ಪ, ಜಗದೀಶ್ ಶೆಟ್ಟರ್, ಹೀಗೆ. ಗೋವಿಂದ ಕಾರಜೋಳ ರನ್ನು ಮೂಲೆಗುಂಪು ಮಾಡುವ ಸಂದರ್ಭವಿತ್ತು. ದಲಿತ ಎಂಬ ಕಾರಣಕ್ಕೆ ಅವರಿಗೆ ಮತ್ತೆ ಟಿಕೆಟ್ ನೀಡಬೇಕು. ಮುಖ್ಯ ಮಂತ್ರಿ ರೇಸ್ ನಲ್ಲಿರಬಹುದಾದ ನಾಯಕರೆಂದರೆ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷಣ ಸವದಿ, ಗೋವಿಂದ ಕಾರಜೋಳ., ಆರ್ ಆಶೋಕ್, ವಿ ಸೋಮಣ್ಣ. ಇವರೆಲ್ಲರನ್ನೂ ಮೂಲೆಗುಂಪು ಮಾಡಿದರೆ, ಕರ್ನಾಟಕದ ನಾಯಕನೊರ್ವನನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಹಾಕಿಕೊಂಡಿದೆಯೇ ಭಾಜಪ ಎಂಬ ಅನುಮಾನ ಕಾಡುತ್ತಿದೆ. ಸೋಮಣ್ಣ ಹಾಗೂ ಆಶೋಕ್ ಅವರನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಸೆಣಸಲು ಹೇಳಿದೆ. ಇದರ ಹಿಂದಿನ ಮರ್ಮವೇನು. ಅವರಿಬ್ಬರನ್ನು ಏಕೆ ಪಕ್ಷ  ಹರಕೆಯ ಕುರಿಗಳನ್ನಾಗಿಸುತ್ತಿದೆ? ಕಾಲವೇ ಉತ್ತರಿಸಬೇಕು.

M.SIDDARAJU, SENIOR JOURNALIST
  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು

 

 

 

 

Key words:  Karnataka -Assembly Elections-2023 -BJP- senior leaders