ಬೆಂಗಳೂರು, ಸೆಪ್ಟೆಂಬರ್ ೨೧, 2021 : (www.justkannada.in news ) ರಾಜ್ಯದಲ್ಲಿ ಬಲವಂತದ ಹಾಗೂ ಆಮಿಷವೊಡ್ಡಿ ಮತಾಂತ ರ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, “ಮತಾಂತರ ನಿಷೇಧ’ ಕಾಯಿದೆಯೊಂದನ್ನು ತರುವ ಚಿಂತನೆ ಇದೆ, ಎಂದು, ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಸಭೆಯ ಶೂನ್ಯ ವೇಳೆಯಲ್ಲಿ, ಬಿಜೆಪಿ ಸದಸ್ಯ ಗೂಳಿಹಟ್ಟಿ ಶೇಖರ್ ಅವರು ತಮ್ಮ ಜಿಲ್ಲೆ ಹಾಗೂ ಮತಕ್ಷೇತ್ರದಲ್ಲಿ ಕೆಲವು ಕ್ರಿಶ್ಚಿಯನ್ ಮಿಷನರೀಸ್ ಹಾಗೂ ಸಂಘಟನೆಗಳು ವ್ಯಾಪಕವಾಗಿ ಬಲವಂತದ ಹಾಗೂ ಆಮಿಷಗಳನ್ನೊಡ್ಡಿ ಮುಗ್ಧ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಕೆಲವು ಕುಟುಂಬಗಳೇ ಮುರಿದು ಬಿದ್ದಿವೆ, ಇದನ್ನು ತಡೆಯಲು ಸರಕಾರವು ತಕ್ಷಣದಿಂದಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕರು ಸ್ವತಃ ತಮ್ಮದೇ ಅನುಭವವನ್ನು ಸದನದಲ್ಲಿ ಹಂಚಿಕೊಂಡು, “ನನ್ನ ತಾಯಿಯನ್ನೇ ಮತಾಂತರಗೊಳಿಸಲಾಗಿದ್ದು ಕುಟುಂಬದ ಸದಸ್ಯರಲ್ಲಿ ಕಳವಳವುಂಟಾಗಿದೆ” ಎಂದು ಹೇಳಿದರು.
“ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಜನರನ್ನು ಮತಾಂತರಗೊಳಿಸಲಾಗಿದೆ, ಈ ಪ್ರಕ್ರಿಯೆಯಲ್ಲಿ, ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯದ ಜನರೂ ಮತಾಂತರಗೊಂಡಿದ್ದಾರೆ” ಎಂದು ಸದಸ್ಯರು ತಿಳಿಸಿದರು.
“ಮತಾಂತರ ಪ್ರಕ್ರಿಯೆಯನ್ನು ವಿರೋದಿಸುವವರಿಗೆ ಬೆದರಿಕೆ ಹಾಕಲಾಗುತ್ತಿದ್ದು ಪೊಲೀಸರನ್ನು ಉಪಯೋಗಿಸಿ ಸುಳ್ಳು ಕೇಸು ಗಳನ್ನೂ ಹಾಕಲಾಗುತ್ತಿದೆ” ಎಂದೂ ಸದಸ್ಯರು ತಿಳಿಸಿದರು.
ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ, ಗೃಹ ಸಚಿವರು, ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಶವೊಡ್ಡಿ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಪೊಲೀಸರಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದರು.
ಜನತೆಯ ಮುಗ್ಧತೆ, ಅಥವಾ ಇನ್ನಿತರ ಸನ್ನಿವೇಶಗಳನ್ನು ಉಪಯೋಗಿಸಿಕೊಂಡು ಯಾವುದೇ ಸಂಘಟನೆ ಅಥವಾ ಸಂಸ್ಥೆಗಳು ಮತಾಂತರ ಮಾಡುವುದರಿಂದ, ಸಮಾಜದಲ್ಲಿ, ಶಾಂತಿ ಕದಡುವ ಸಂಭವವೂ ಇದೆ ಎಂದ ಸಚಿವರು, ಈ ಕುರಿತು ರಾಜ್ಯ ಸರಕಾರ ಸೂಕ್ತ ಕಾನೂನನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಸದನಕ್ಕೆ ತಿಳಿಸಿದರು.
“ಆಮಿಷ ನೀಡಿ ಜನರನ್ನು ಮತಾಂತರ ಗೊಳಿಸುವ ಪ್ರಕ್ರಿಯೆಯಲ್ಲಿ ಒಂದು ವ್ಯವಸ್ಥಿತ ಜಾಲವೇ ಇದ್ದು ಅದನ್ನು ಯಾವರೀತಿ ತಡೆಗಟ್ಟಲು ಸಾಧ್ಯ ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕಾನೂನನ್ನು ತರಲಾಗುವುದು” ಎಂದು ಸಚಿವರು ತಿಳಿಸಿದರು.
“ಶಾಂತಿ ಭಂಗಕ್ಕೆ ಕಾರಣವಾಗುವ ಯಾವುದೇ ಸಂಘಟನೆಗಳ ಅಥವಾ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸಚಿವರು ಸದನಕ್ಕೆ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಕೆ ಜೆ ಜಾರ್ಜ್, ಮಧ್ಯ ಪ್ರವೇಶಿಸಿ ಮಾತನಾಡಿ, ಬಲವಂತವಾಗಿ ಮತಾಂತರಿಸುವ ಯಾವುದೇ ಪ್ರಯತ್ನಕ್ಕೆ ನಮ್ಮ ವಿರೋಧವಿದೆ, ಆದರೆ ಯಾವೊದೋ ಒಂದು ಸಂಘಟನೆ ತಪ್ಪು ಮಾಡಿದರೆ ಅದನ್ನು ಸಾರ್ವತ್ರಿಕವಾಗಿ ದೂಷಿಸುವುದು ಸರಿಯಲ್ಲ ಎಂದು ಹೇಳಿದರು.
ಇದೆ ಸಂಧರ್ಭದಲ್ಲಿ ಮಾತನಾಡಿದ, ಜೆಡಿಎಸ್ ಶಾಸಕ ದೇವಾನಂದ್ ಮಾತನಾಡಿ, ತಮ್ಮ ವಿಜಯಪುರ ಜಿಲ್ಲೆಯಲ್ಲಿಯೂ ಮತಾಂತರ ಹಾವಳಿ ಅವ್ಯಾಹತವಾಗಿದ್ದು, ಬಂಜಾರ ಸಮುದಾಯವನ್ನು ಗುರಿ ಮಾಡಿ,ಕೊಂಡಿರುವ ಕೆಲವು ಸಂಘಟನೆಗಳು ಮಾಡುತ್ತಿರುವ ಕೃತ್ಯದಿಂದ ಶಾಂತಿ ಹಾಗೂ ಕುಟುಂಬದ ಸದಸ್ಯರ ನಡುವೆಯೇ ಸಮನ್ವಯ ಕದಡಿ ಹೋಗಿದೆ, ಸರಕಾರ ಈ ಕೂಡಲೇ ಮಧ್ಯ ಪ್ರೇವೇಶಿಸಬೇಕು ಎಂದು ಹೇಳಿದರು.
key words : Karnataka-assembly-home-minister-araga-no-to-conversion-police