ಬೆಂಗಳೂರು, ಮಾರ್ಚ್ 22,2025 (www.justkannada.in): ಎಂಇಎಸ್ ಸಂಘಟನೆ ನಿಷೇಧ ಹಾಗೂ ಗಡಿಪಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು, ಬೆಳಗಾವಿ ಸೇರಿದಂತೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್ ಬಿಸಿ ಅಷ್ಟಾಗಿ ತಟ್ಟಿಲ್ಲ ಎನ್ನಲಾಗುತ್ತಿದೆ. ಈ ಮಧ್ಯೆ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ಪರ ಹೋರಾಟಗಾರ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ಹಲವೆಡೆ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ಬಸ್, ಆಟೋ ಓಡಾಟ ಎಂದಿನಂತೆಯೇ ಇದೆ. ಶನಿವಾರ ಆಗಿರುವುದರಿಂದ ಸಂಚಾರ ದಟ್ಟಣೆ ತುಸು ಕಡಿಮೆ ಇದೆ. ಬೆಂಗಳೂರಿನ ಹೆಬ್ಬಾಳ ದಿಂದ ಕೆಆರ್ ಪುರಂ ಭಾಗದ ಕಡೆ ಸಂಚರಿಸುವರರಿಗೆ ಹಾಗೂ ಇತರ ಪ್ರಮುಖ ಪ್ರದೇಶಗಳವರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಂದಿನಂತೆಯೇ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್, ಆಟೋ, ಓಲಾ, ಉಬರ್ ಸಂಚಾರ ನಡೆಸುತ್ತಿವೆ.
ಮೈಸೂರು ಜಿಲ್ಲೆಯಲ್ಲಿ ಬಂದ್ ಗೆ ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ವಕೀಲರ ಸಂಘ ಸೇರಿ ಹಲವರಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಂಚಾರ ಎಂದಿನಂತೆಯೇ ಇರಲಿದೆ.
ಬೆಳಗಾವಿ ನಗರದಲ್ಲಿ ಬಂದ್ ಬಿಸಿ ಕಾಣಿಸಿಲ್ಲ. ನಗರದಲ್ಲಿ ಶನಿವಾರ ಬೆಳಗ್ಗೆ ಎಂದಿನಂತೆಯೇ ಬಸ್ ಸಂಚಾರ ಆರಂಭವಾಗಿದೆ. ಬೆಳಗಾವಿಯಲ್ಲಿ ಕರವೇ ಹೋರಾಟಗಾರರು ಪ್ರತಿಭಟನೆಗಿಳಿದಿದ್ದು ಅತಿಥಿಗೃಹದಿಂಧ ಚೆನ್ನಮ್ಮ ವೃತ್ತದತ್ತ ಪ್ರತಿಭಟನಾ ರ್ಯಾಲಿ ತೆರಳಿದೆ. ಪೊಲೀಸ್ ಭದ್ರತೆಯಲ್ಲಿ ಪ್ರತಿಭಟನಾ ಬೆರವಣಿಗೆ ಸಾಗಿದೆ.
ಇನ್ನು ಬಾಗಲಕೋಟೆಯಲ್ಲಿ ಬಸವೇಶ್ವರ ವೃತ್ತದಲ್ಲಿ ಕರವೇ ಕಾರ್ಯಕರ್ತರು ಧರಣಿ ನಡೆಸಿದ್ದು, ಎಂಇಎಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ದಾವಣಗೆರೆಯಲ್ಲಿ ಜಯದೇವ ವೃತ್ತದಲ್ಲಿ ಬಸ್ ತಡೆದು ಪ್ರತಿಭಟನೆಗೆ ಮುಂದಾದ 20ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರರನ್ನ ಪೊಲೀಸರು ವಶಕ್ಕೆ ಪಡೆದರು.
Key words: Karnataka bandh, Protests, many places