ಬೆಳಗಾವಿ, ಡಿಸೆಂಬರ್,29,2021(www.justkannada.in): ಯಾರು ಬೆಂಬಲ ಕೊಡಲಿ ಬಿಡಲಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಶತಸಿದ್ಧ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಎಂಇಎಸ್ ನಿಷೇಧ ಆಗ್ರಹಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಚನ್ನಮ್ಮ ವೃತ್ತದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿ ವಾಟಾಳ್ ನಾಗರಾಜ್ ಬಳಿಕ ಪ್ರತಿಭಟನೆ ನಡೆಸಿದರು. ಈ ವೇಳೆ ವೇಳೆ ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ನಂತರ ಪ್ರತಿಭಟನಾನಿರತ ವಾಟಾಳ್ ನಾಗರಾಜ್ ಅವರನ್ನ ಪೊಲೀಸರು ವಶಕ್ಕೆ ಪಡೆದರು.
ಇನ್ನು ಡಿ,31ರ ಕರ್ನಾಟಕ ಬಂದ್ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್, 10 ದಿನಗಳ ಹಿಂದೆಯೇ ನಾವು ಬಂದ್ಗೆ ಕರೆ ಕೊಟ್ಟಿದ್ದೇವೆ. ಡಿ.31ಕ್ಕೆ ಬಂದ್ ನಿರ್ಧಾರ ಆಗಿ ಹೋಗಿದೆ. ಎಲ್ಲರೂ ಕೈಜೋಡಿಸಬೇಕಿದೆ. ನಮ್ಮ ಹೋರಾಟ ಎಂಇಎಸ್ ಬ್ಯಾನ್ ಮಾಡಲು, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ. ಡಿಸೆಂಬರ್ 31 ರಂದು ಬಂದ್ ಮಾಡೇ ಮಾಡುತ್ತೇವೆ. ಅಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಶತಸಿದ್ದ. ಬೆಳಗಾವಿಯ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದರು.
Key words: Karnataka Bandh -dec 31st-vatal Nagaraj