ಬೆಂಗಳೂರು ನವೆಂಬರ್ 12, 2021 : ( www.justkannada.in news) ದೇಶದ ಪ್ರಸಕ್ತ ರಾಜಕಾರಣದಲ್ಲಿ ಅನಂತಕುಮಾರ್ ಅವರ ಕೊರತೆ ಎದ್ದು ಕಾಣುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಹೇಳಿದರು.
ನಗರದ ಆರ್ ವಿ ಶಿಕ್ಷಕರ ಕಾಲೇಜಿನ ಸಭಾಂಗಣದಲ್ಲಿ ದಿವಂಗತ ಅನಂತಕುಮಾರ್ ಅವರ 3 ನೇ ಪುಣ್ಯತಿಥಿಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಅನಂತಕುಮಾರ್ ಸ್ಮಾರಕ ಉಪನ್ಯಾಸದಲ್ಲಿ ವರ್ಚುಯಲ್ ಆಗಿ ಭಾಗವಹಿಸಿ ಅವರು ಮಾತನಾಡಿದರು.
ದಿವಂಗತ ಅನಂತಕುಮಾರ್ ಅವರೊಂದಿಗೆ ತಮಗಿದ್ದ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡ ಅವರು, ದೇಶದ ಪ್ರಸಕ್ತ ರಾಜಕಾರಣದಲ್ಲಿ ಅನಂತಕುಮಾರ್ ಅವರ ಕೊರತೆ ಎದ್ದು ಕಾಣುತ್ತಿದೆ. ದೇಶ ಅದರಲ್ಲೂ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ಅನಂತಕುಮಾರ್ ಅವರ ಕೊಡುಗೆ ಅಪಾರ. ಅವರು ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದ ಸಂಧರ್ಭದಲ್ಲಿ ನಾವು ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆವು. ಈ ಮೂಲಕ ಭಾರತೀಯ ಜನತಾ ಪಕ್ಷ ದಕ್ಷೀಣ ಭಾರತದಲ್ಲಿ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಯಿತು ಎಂದು ಹೇಳಿದರು.
ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬೆಳೆಯುವಲ್ಲಿ ಅನಂತಕುಮಾರ್ ಅವರಂತಹ ಸದಸ್ಯರ ಕೊಡುಗೆ ಬಹಳ ಅಪಾರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅನಂತಕುಮಾರ್, ಅರುಣ್ ಜೇಟ್ಲೀ ಹಾಗೂ ಸುಷ್ಮಾ ಸ್ವರಾಜ್ ನಂತಹ ಪ್ರಮುಖರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ಅನಂತಕುಮಾರ್ ಅವರಿಗೆ ಇನ್ನು ರಾಜಕಾರಣದಲ್ಲಿ ಬಹಳಷ್ಟು ಅವಕಾಶವಿತ್ತು. ಅವರ ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳುವಲ್ಲಿ ಆದ ತಡದಿಂದಾಗಿ ಅವರನ್ನು ಅಕಾಲಿಕವಾಗಿ ಕಳೆದುಕೊಳ್ಳಬೇಕಾಯಿತು ಎಂದು ದುಖಃವ್ಯಕ್ತಪಡಿಸಿದರು.
ಅನಂತಕುಮಾರ್ ಅವರ ಸಾಮಾಜಿಕ ಕಳಕಳಿ ಅಪಾರ. ಸಾಮಾನ್ಯ ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದು ನಂಬಿದ್ದ ಅನಂತಕುಮಾರ್ ಅವರು ಅಪಾರ ಸಾಮಾಜಿಕ ಕಾಳಜಿಯನ್ನು ಹೊಂದಿದ್ದರು. ಅವರು ತಮ್ಮ ಪತ್ನಿ ಡಾ ತೇಜಸ್ವಿನಿ ಅನಂತಕುಮಾರ್ ಅವರೊಂದಿಗೆ ಸೇರಿ ಪ್ರಾರಂಭಿಸಿದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ದೇಶದ ಲಕ್ಷಾಂತರ ಮಕ್ಕಳ ಹಸಿವನ್ನು ಇಂದಿಗೂ ನೀಗಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪಿ ವಿ ಕೃಷ್ಣ ಭಟ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ ಗಂಗಾಧರ, ಪ್ರೊ ಹೆಚ್ ಎಸ್ ನಾಗರಾಜ್, ಪುತ್ರಿಯರಾದ ಐಶ್ವರ್ಯ ಮತ್ತು ವಿಜೇತ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಹೆಚ್ ಎನ್ ನಂದಕುಮಾರ್ ಮತ್ತು ಪ್ರದೀಪ್ ಓಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.
key words : karnataka-bangalore-ananth.kumar-nithin-gadkari-bjp