ಬೆಂಗಳೂರು, ಮೇ 27, 2020 : (www.justkannada.in news ) ಕೊವಿಡ್ ಸೋಂಕು ಪತ್ತೆ ಪರೀಕ್ಷೆ ವೇಳೆ ನೇರ ಸಂಪರ್ಕ ಇಲ್ಲದೇ ಮಾದರಿ ಸಂಗ್ರಹಿಸುವ ಸ್ಮಾರ್ಟ್ ಕಿಯೋಸ್ಕ್ ವ್ಯವಸ್ಥೆ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ವಿಪ್ರೊ ಜಿಇ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಮಾರ್ಟ್ ಕಿಯೋಸ್ಕ್ ಉದ್ಘಾಟಿಸಿದ ಬಳಿಕ ಡಾ.ಅಶ್ವತ್ಥನಾರಾಯಣ ಸುದ್ದಿಗಾರರ ಜತೆ ಮಾತನಾಡಿದರು.
“ಕೊವಿಡ್ ಸೋಂಕು ಪತ್ತೆಗಾಗಿ ಸುರಕ್ಷಿತವಾಗಿ ಮಾದರಿ ಸಂಗ್ರಹಿಸುವ ಕಿಯೋಸ್ಕ್‌ಅನ್ನು ವಿಪ್ರೊ ಜಿಯೊ ಸಂಸ್ಥೆಯೇ ವಿನ್ಯಾಸಗೊಳಿಸಿ, 15 ಕಿಯೋಸ್ಕ್‌ಗಳನ್ನು ಉಚಿತವಾಗಿ ನೀಡಿದೆ. ಈ ಸಂದರ್ಭದಲ್ಲಿ ಡಿಜಿಟಲ್ ಹೆಲ್ತ್ ಕೇರ್ ದೊಡ್ಡ ಪಾತ್ರವಹಿಸುತ್ತದೆ. ಸುರಕ್ಷತೆ, ಸ್ವಚ್ಛತೆಯ ಕಾಯ್ದುಕೊಳ್ಳುವ ಜತೆಗೆ ಸುಲಭವಾಗಿ ಮಾದರಿ ಸಂಗ್ರಹಿಸುವ ಕಿಯೋಸ್ಕ್ ಅನ್ನು ಎಲ್ಲಿಗೆ ಬೇಕಾದಾರೂ ಒಯ್ಯಬಹುದು. ಜಿಲ್ಲಾ ಆಸ್ಪತ್ರೆಗಳಿಗೂ ಈ ಕಿಯೋಸ್ಕ್‌ಗಳನ್ನು ತಲುಪಿಸಬಹುದು,”ಎಂದರು.
“ವಿಪ್ರೊ ಜಿಯೊ ಸಂಸ್ಥೆಯವರು ರೋಗಿ, ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ರಕ್ಷಣೆಗೆ ಬರುವ ನಿಟ್ಟಿನಲ್ಲಿ ವಿಶಿಷ್ಟ ಕಿಯೋಸ್ಕ್ ವಿನ್ಯಾಸಗೊಳಿಸಿದ್ದಾರೆ. ವೈದ್ಯರು ಹಾಗೂ ರೋಗಿ ಪ್ರತ್ಯೇಕ ಕೊಠಡಿಯಲ್ಲಿ ಇದ್ದು, ಕಿಯೋಸ್ಕ್ ಮೂಲಕ ಮಾದರಿ ಸಂಗ್ರಹಿಸಲಾಗುವುದು. ಪರಸ್ಪರ ಸಂಪರ್ಕಕ್ಕೆ ಬರದೇ ಪರೀಕ್ಷೆ ನಡೆಸಲು ಸಾದ್ಯವಾಗುವುದರಿಂದ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆತಂಕ ಕಡಿಮೆ ಆಗುವುದು. ಜತೆಗೆ ಪಿಪಿಇ ಕಿಟ್‌ಗಳ ಬಳಕೆಯೂ ಕಡಿಮೆ ಆಗುವುದು,”ಎಂದು ವಿವರಿಸಿದರು.
“ರಾಮನಗರ ಜಿಲ್ಲೆಯಲ್ಲಿ ರಿಮೋಟ್ ಐಸಿಯು ಘಟಕ ಸ್ಥಾಪನೆಗೆ ವಿಪ್ರೊ ಜಿಯೊ ಸಂಸ್ಥೆ ಮುಂದೆ ಬಂದು ಎಲ್ಲ ರೀತಿಯ ಸಹಕಾರ ಒದಗಿಸಿತ್ತು. ಕಾರ್ಪೊರೆಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯನ್ನು ಹಲವಾರು ಸಂಸ್ಥೆಗಳು ಸಮರ್ಥವಾಗಿ ನಿಭಾಯಿಸಿದ್ದು, ಕೊವಿಡ್ ವಿರುದ್ಧದ ಸಮರದಲ್ಲಿ ಸರ್ಕಾರದ ಜತೆ ಕೈಜೋಡಿಸಿವೆ. ವಿಪ್ರೊ ಜಿಯೊ ಸಂಸ್ಥೆ ಸಹಕಾರಕ್ಕೆ ಸರ್ಕಾರದ ಪರವಾಗಿ ಧನ್ಯವಾದ,”ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವಿಪ್ರೊ ಜಿಇ ವ್ಯವಸ್ಥಾಪಕ ನಿರ್ದೇಶಕ ನಳಿನಿ ಕಾಂತ್ ಉಪಸ್ಥಿತರಿದ್ದರು.
key words : karnataka-bangalore-corona-covid-test-smart-kiosk