ಬೆಂಗಳೂರು, ಜು.10, 2020 : (www.justkannada.in news ) ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA) ಕಚೇರಿಯಲ್ಲಿನ ಕಡತಗಳು ಸಹಿಯಾಗಿ ಆಯುಕ್ತರ ಕೈ ಸೇರುವ ಮುನ್ನವೇ ಗುತ್ತಿಗೆದಾರರ ಮೊಬೈಲ್ ಸೇರುತ್ತಿವೆ.
ಕಚೇರಿಯ ಕಡತಗಳ ಈ ವೇಗಕ್ಕೆ ಅಲ್ಲಿ ಕಾರ್ಯನಿರ್ವಹಿಸುವ ಕೆಲ ಡೇಟಾ ಎಂಟ್ರಿ ಅಪರೇಟರ್ ಗಳ ಭಾರಿ ಆ್ಯಕ್ಟೀವ್ ನೆಸ್ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಆಯುಕ್ತರ ಆದೇಶಕ್ಕೂ ಮುನ್ನವೇ ಈ ಕಡತಗಳು ಖಾಸಗಿ ಡೆವಲಪರ್ಗಳ ಕೈಸೇರುತ್ತಿರುವುದೇ ಇದಕ್ಕೆ ಕಾರಣ.
ಈ ಸಲುವಾಗಿಯೇ ಪ್ರಾಧಿಕಾರದಲ್ಲಿನ ಸುಮಾರು 103 ಡಾಟಾ ಎಂಟ್ರಿ ಆಪರೇಟರ್ಗಳ ಸ್ಥಳ ಬದಲಾವಣೆ ಮಾಡಲಾಗಿದೆ. ಕೆಲ ಆಪರೇಟರ್ಗಳು, ಕಡತಗಳಲ್ಲಿನ ಪ್ರಮುಖ ನೋಟ್ಶೀಟ್ಗಳನ್ನು ಆದೇಶಕ್ಕೂ ಮೊದಲೇ ಮೊಬೈಲ್ನಲ್ಲಿ ಸೆರೆಹಿಡಿದು, ವಾಟ್ಸ್ಆ್ಯಪ್ ಮೂಲಕ ಡೆವಲಪರ್ , ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಕಡತ ತಿದ್ದುಪಡಿ ಆರೋಪದ ಕಾರಣ, ಡಾಟಾ ಎಂಟ್ರಿ ಆಪರೇಟರ್ ಗಳ ಸ್ಥಾನ ಪಲ್ಲಟಕ್ಕೆ ಆದೇಶ ಹೊರಡಿಸಲಾಗಿದೆ. ಈ ಆದೇಶ ರದ್ದತಿಗೆ ಈಗ ಇನ್ನಿಲ್ಲದ ಕಸರತ್ತು ನಡೆದಿದ್ದು, ಸಾಮಾನ್ಯ ಡಾಟಾ ಎಂಟ್ರಿ ಆಪರೇಟರ್ ಗಳು ತಮ್ಮ ಈ ಹಿಂದಿನ ಸ್ಥಾನದಲ್ಲೇ ಉಳಿಯಲು ಲಕ್ಷಾಂತರ ರೂ. ಸುರಿಯಲು ತಯಾರಾಗಿದ್ದಾರೆ. ಅಷ್ಟೇ ಅಲ್ಲ, ರಾಜಕೀಯ ಮುಖಂಡರಿಂದಲೂ ಈ ಬಗ್ಗೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ.
ಎರಡು ವರ್ಷಗಳಿಗೊಮ್ಮೆ ಅಧಿಕಾರಿಗಳೇ ಬದಲಾಗುತ್ತಾರೆ. ಆದರೆ, ನಗರ ಯೋಜನೆ, ಭೂಸ್ವಾಧೀನ ಸೇರಿದಂತೆ ಬಿಡಿಎ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ಗಳು ಮಾತ್ರ ಆಯಕಟ್ಟಿನ ಜಾಗಗಳಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವುದೂ ಆಶ್ಚರ್ಯಕ್ಕೆ ಕಾರಣವಾಗಿದೆ.
ಹೊರಗುತ್ತಿಗೆ ಪಡೆದ ಕಂಪನಿಗಳ ಅವಧಿ ಬಹುತೇಕ ಮುಗಿದಿದೆ. ಆದರೂ, ಒಂದೂವರೆ-ಎರಡು ವರ್ಷಗಳಿಂದ ತಾತ್ಕಾಲಿಕ ಅವಧಿ ವಿಸ್ತರಣೆಯೊಂದಿಗೆ ಮುಂದುವರಿಯುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
oooo
key words : Karnataka-Bangalore/data-entry-operators-behind-the-leak-in-BDA