ಬೆಂಗಳೂರು, ನ.17, 2021 : (www.justkannada.in news ) ಸಂಸ್ಥೆಗಳು ತಮ್ಮಲ್ಲಿಯೇ ರೂಪಿಸಿ ನಿರ್ವಹಿಸುತ್ತಿದ್ದ ಸ್ಥಳೀಯ ಕಂಪ್ಯೂಟರ್ ವ್ಯವಸ್ಥೆಗಳ ಜೊತೆಯಲ್ಲಿಯೇ ವಿವಿಧ ಕ್ಲೌಡ್ ವ್ಯವಸ್ಥೆಗಳನ್ನೂ ಬಳಸುವ ಅಭ್ಯಾಸ ಈಗ ವ್ಯಾಪಕವಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಹೈಬ್ರಿಡ್ ವ್ಯವಸ್ಥೆಗಳೇ ಹೆಚ್ಚುಹೆಚ್ಚಾಗಿ ಕಾಣಸಿಗಲಿವೆ ಎಂದು ಬಿಟಿಎಸ್-2021ರ ‘ಹೈಬ್ರಿಡ್ ಮಲ್ಟಿ ಕ್ಲೌಡ್ ವರ್ಲ್ಡ್’ ಸಂವಾದದಲ್ಲಿ ಪರಿಣತರು ಅಭಿಪ್ರಾಯಪಟ್ಟರು.
ಕಿಂಡ್ರಿಲ್ ಇಂಡಿಯಾ ಸಂಸ್ಥೆಯ ಸಿಟಿಒ ಶ್ರೀಕೃಷ್ಣನ್ ವೆಂಕಟೇಶ್ವರನ್, “ಕೋವಿಡ್ ಸಂಕಷ್ಟದ ಅನುಭವವು ಕ್ಲೌಡ್, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್-ಎಐ) ಮುಂತಾದ ತಂತ್ರಜ್ಞಾನಗಳ ಉಪಯುಕ್ತತೆಯನ್ನು ನಮಗೆ ತೋರಿಸಿಕೊಟ್ಟಿದೆ. ಇಂದಿನ ಸನ್ನಿವೇಶಕ್ಕೆ ಅತ್ಯಗತ್ಯವಾದ ಹಲವು ಸೌಲಭ್ಯಗಳನ್ನು ದೊಡ್ಡ ಸಂಖ್ಯೆಯ ಬಳಕೆದಾರರಿಗೆ ಸುಲಭವಾಗಿ ಒದಗಿಸುವುದು ಎಪಿಐಗಳಿಂದ ಸಾಧ್ಯವಾಗಿದೆ. ಯುಪಿಐ, ಇ-ಕೆವೈಸಿಯಂತಹ ಸವಲತ್ತುಗಳು ಸಾರ್ವಜನಿಕವಾಗಿ, ಸುಲಭವಾಗಿ ವ್ಯಾಪಕವಾಗಿ ದೊರಕುವಂತಾಗಿರುವುದು ಭಾರತದ ಸಾಧನೆ. ಇದು ಭಾರತದಲ್ಲಿ ಉದ್ದಿಮೆಗಳು ಬೆಳೆಯುವುದಕ್ಕೂ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ತಂತ್ರಜ್ಞಾನಗಳು ಭಾರತದ ಕೋಟ್ಯಂತರ ಜನರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ” ಎಂದು ಹೇಳಿದರು.
ಹೊಸ ತಂತ್ರಜ್ಞಾನಗಳಿಂದಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳು ಸಾಧ್ಯವಾಗಿದ್ದು ಹೊಸ ಕಲ್ಪನೆಗಳು ಅನುಷ್ಠಾನಗೊಳ್ಳುತ್ತಿವೆ. ಕಂಪ್ಯೂಟರು – ಮೊಬೈಲ್ ಫೋನುಗಳ ಹಾಗೆಯೇ ಕಾರುಗಳು ಕೂಡ ಒಂದೇ ಸಮಯದಲ್ಲಿ ವಿವಿಧ ಸೇವೆಗಳನ್ನು ಬಳಸುವುದು, ಅಂತರಜಾಲ ಸಂಪರ್ಕ ಪಡೆದುಕೊಂಡು ಸ್ಮಾರ್ಟ್ ಆಗುವುದು ಇದಕ್ಕೊಂದು ಉದಾಹರಣೆಯಷ್ಟೇ ಎಂದು ವಿವರಿಸಿದರು.
ಸಂವಾದದಲ್ಲಿ ಪಾಲ್ಗೊಂಡ ಕಿಂಡ್ರಿಲ್ ಇಂಡಿಯಾದ ನಿರ್ದೇಶಕ ವಿಕಾಸ್ ಪ್ರಸಾದ್ ಮಾತನಾಡಿ, “ಕ್ಲೌಡ್ ಕಂಪ್ಯೂಟಿಂಗ್ ಪರಿಕಲ್ಪನೆ ವಿಕಾಸವಾದಂತೆ ಅದು ಹೆಚ್ಚು ಸಂಕೀರ್ಣವೂ ಆಗುತ್ತಿದೆ. ಇದೀಗ ಬಹುತೇಕ ಸಂಸ್ಥೆಗಳು ತಮ್ಮ ಅಗತ್ಯಗಳನ್ನು ಹೆಚ್ಚು ಸೂಕ್ತವಾಗಿ ಪೂರೈಸುವ ಹೈಬ್ರಿಡ್ ಮಲ್ಟಿಕ್ಲೌಡ್ ವ್ಯವಸ್ಥೆಗಳನ್ನು ಬಳಸುತ್ತಿವೆ. ಮುಂದಿನ ದಿನಗಳಲ್ಲಿ ಉದ್ಯಮದಲ್ಲಿ ಐಟಿ ಮಹತ್ವ ಹೆಚ್ಚಿದಂತೆ ಕ್ಲೌಡ್ ಬಳಕೆ ಇನ್ನಷ್ಟು ಹೆಚ್ಚಲಿದೆ. ಇದು ಹೊಸ ಸಾಧ್ಯತೆಗಳನ್ನು ತೆರೆದಿಡುವುದು ಮಾತ್ರವೇ ಅಲ್ಲದೆ ನಿರ್ವಹಣೆ, ಸುರಕ್ಷತೆ ಹಾಗೂ ಖಾಸಗಿತನ ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ಸವಾಲುಗಳನ್ನು ನಮ್ಮೆದುರು ತರಲಿದೆ” ಎಂದರು.
“ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿರುವ ಇಂದಿನ ಸನ್ನಿವೇಶದಲ್ಲಿ ನಾವು ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದ್ದೇವೆ. ಇಂದಿನ ಅಗತ್ಯಗಳಿಗೆ ಬೇಕಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಕ್ಲೌಡ್ ವ್ಯವಸ್ಥೆಗಳನ್ನು ಸ್ಥಳೀಯ ಕಂಪ್ಯೂಟರ್ ವ್ಯವಸ್ಥೆಗಳಿಗೆ ಪೂರಕವಾಗಿ ಬಳಸುವುದರಿಂದ ಬೇಕಾದ ವ್ಯವಸ್ಥೆಗಳನ್ನು ಬೇಕಾದಾಗ ಬಳಸಿಕೊಳ್ಳುವುದು ಸಾಧ್ಯವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯದಲ್ಲಿ ಇಂತಹ ಹೈಬ್ರಿಡ್ ವ್ಯವಸ್ಥೆಗಳೇ ಪ್ರಮುಖ ಪಾತ್ರ ವಹಿಸಲಿವೆ” ಎಂದು ಲೀಲಾ ಗ್ರೂಪ್‌ನ ಉಪಾಧ್ಯಕ್ಷ ಅಮನ್‌ದೀಪ್ ಸರ್ನಾ ಹೇಳಿದರು.
ಸಂವಾದದಲ್ಲಿ ಜೀನಾ ಆಂಡ್ ಕೋ ಸಂಸ್ಥೆಯ ಗ್ರೂಪ್ ಸಿಐಒ ಮೆಹರಿಯಾರ್ ಪಟೇಲ್ ಕೂಡ ಪಾಲ್ಗೊಂಡಿದ್ದರು.
key words : karnataka-bangalore-tech-summit-BTS-2021