ಇಸ್ರೇಲ್ ಸಹಭಾಗಿತ್ವದೊಂದಿಗೆ ಸೆಮಿಕಂಡಕ್ಟರ್‌ ತಯಾರಿಕೆಯಲ್ಲಿ ಚೀನಾ, ತೈವಾನ್ ಗೆ ಪೈಪೋಟಿ- ಕಿಶೋರ್ ರಾಮಿಸೆಟ್ಟಿ

 

ಬೆಂಗಳೂರು, ನ.17, 2021 : (www.justkannada.in news ) ಇಸ್ರೇಲ್‌ ಹಾಗೂ ಇತರ ದೇಶಗಳ ಪಾಲುದಾರಿಕೆಯೊಂದಿಗೆ ಭಾರತವು ಸೆಮಿಕಂಡಕ್ಟರ್‌ ಉತ್ಪಾದನಾ ವಲಯದಲ್ಲಿ ಚೀನಾ ಹಾಗೂ ತೈವಾನ್‌ಗೆ ಸರಿಸಾಟಿಯಾಗಿ ಬೆಳೆಯಲು ಸಾಧ್ಯವಿದೆ ಎಂದು ಇಂಟೆಲ್‌ನ ವರ್ಟಿಕಲ್‌ ಸಲ್ಯೂಷನ್ಸ್‌ ಆಂಡ್‌ ಸರ್ವಿಸ್‌ ಗ್ರೂಪ್‌ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ರಾಮಿಸೆಟ್ಟಿ ಅಭಿಪ್ರಾಯಪಟ್ಟರು.

24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ (ಬಿಟಿಎಸ್-21) ಬುಧವಾರ “ಸೆಮಿಕಂಡಕ್ಟರ್‌ ರೋಡ್‌ಮ್ಯಾಪ್‌ ಫಾರ್‌ ಇಂಡಿಯಾ ಅಂಡ್ ಇಸ್ರೇಲ್‌- ಇಂಡಸ್ಟ್ರಿ ಪ್ರೆಸ್ಪಕ್ಟಿವ್‌ ಜಿಐಎ ಪಾರ್ಟನರ್” ವರ್ಚುಯಲ್‌ ಸಂವಾದದಲ್ಲಿ ಎಲೆಕ್ಟ್ರಾನಿಕ್ಸ್‌ ಹಾಗೂ ಸೆಮಿಕಂಡಕ್ಟರ್‌ ವಲಯದ ಉದ್ಯಮಗಳ ಮುಖ್ಯಸ್ಥರು ಭಾರತದಲ್ಲಿ ಈ ಉದ್ಯಮದ ಬೆಳವಣಿಗೆಗೆ ಇರುವ ಅವಕಾಶಗಳ ಮೇಲೆ ಬೆಳಕು ಚೆಲ್ಲಿದರು.

“1970, 80ರ ದಶಕದಲ್ಲಿಯೇ ಭಾರತವು ಸೆಮಿಕಂಡಕ್ಟರ್‌ ವಲಯದಲ್ಲಿ ಸಾಕಷ್ಟು ಹೂಡಿಕೆಗೆ ಉತ್ತೇಜನ ನೀಡಿದ್ದರೂ ನಾನಾ ಕಾರಣಗಳಿಂದ ಅದು ಫಲ ನೀಡಲಿಲ್ಲ. ಆದರೆ ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಕೇಂದ್ರ ಸರಕಾರದ “ಪ್ರೊಡೊಕ್ಷನ್‌ ಲಿಂಕ್ಡ್‌ ಇನ್ಸೆಂಟಿವ್‌ ಪ್ರೊಗ್ರಾಮ್‌, ಇಂಡಿಯಾ ಮೈಕ್ರೊ ಪ್ರೊಸಸರ್‌ ಪ್ರೋಗ್ರಾಂ” ಉತ್ತೇಜನಾ ಕಾರ್ಯಕ್ರಮಗಳಿಂದ ಸೆಮಿಕಂಡಕ್ಟರ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಗೆ ಒತ್ತು ಸಿಗುತ್ತಿದೆ ಎಂದು ರಾಮಿಸೆಟ್ಟಿ ಹೇಳಿದರು.

“ಜಾಗತಿಕ ಸೆಮಿಕಂಡಕ್ಟರ್‌ ಮಾರುಕಟ್ಟೆಯ ಬೇಡಿಕೆಯಲ್ಲಿ ಭಾರತದ ಪಾಲು ಶೇಕಡ 3ರಷ್ಟು ಮಾತ್ರ ಇದೆ. ಡಿಸೈನ್‌ ಇನ್ಸೆಂಟಿವ್‌ಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಭಾರತವು ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್‌ ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸಿ, ಆಮದು ವೆಚ್ಚ ತಗ್ಗಿಸಬಹುದಾಗಿದೆ ಎಂದರು.

ಮದ್ರಾಸ್‌ ಐಐಟಿಯ ವಿದ್ಯಾರ್ಥಿಗಳು ಎರಡು ಮೂರು ವರ್ಷದ ಹಿಂದೆ “ಶಕ್ತಿ” ಹೆಸರಿನ ಮೈಕ್ರೊ ಪ್ರೊಸೆಸರ್‌ ಉತ್ಪಾದಿಸಿದ್ದು, ಇದು ಭಾರತದ ಮೊದಲ ಮೈಕ್ರೊಪ್ರೊಸೆಸರ್‌ ಎಂಬ ಹಿರಿಮೆಗೆ ಒಳಗಾಗಿದೆ ಎಂದೂ ಅವರು ತಿಳಿಸಿದರು.

ಭಾರಿ ಬೇಡಿಕೆ, ಉದ್ಯೋಗಕ್ಕೆ ರಹದಾರಿ:

“ಮೈಕ್ರೊ ಪ್ರೊಸೆಸರ್‌ ಚಿಪ್‌ಗಳು ಇಂದು ಕೇವಲ ಎಲೆಕ್ಟ್ರಾನಿಕ್ಸ್‌ ಉದ್ಯಮಕ್ಕಷ್ಟೇ ಅವಶ್ಯಕತೆಯಾಗಿ ಉಳಿದಿಲ್ಲ. ಆಟೋ ಮೊಬೈಲ್‌, ಸೌರ ವಿದ್ಯುತ್‌ ಸೇರಿ ಉತ್ಪಾದನಾ ವಲಯದಲ್ಲೂ ಸಾಕಷ್ಟು ಬೇಡಿಕೆ ಇದೆ. ಸ್ಮಾರ್ಟ್‌ ಸಿಟಿ, ಸೈಬರ್‌ ಸೆಕ್ಯೂರಿಟಿ, ಸಿಸಿಟಿವಿ, ಸ್ಮಾರ್ಟ್‌ ಲೈಟಿಂಗ್‌ ಸಿಸ್ಟಮ್‌, ಸ್ಮಾರ್ಟ್‌ ವಿದ್ಯುತ್‌ ಮೀಟರ್‌, ಬ್ಯಾಂಕಿಂಗ್‌ ಕ್ಷೇತ್ರದ ಹಣಕಾಸು ವರ್ಗಾವಣೆ ಹಾಗೂ ಆಧಾರ್‌ನಂತಹ ಜನಸ್ನೇಹಿ ಡಿಜಿಟಲ್‌ ಕಾರ್ಯಕ್ರಮಗಳಿಗೆ ಬಳಕೆಯಾಗುವ ನಾನಾ ಬಗೆಯ ಡಿಜಿಟಲ್ ಉಪಕರಣಗಳಿಗೆ ಮೈಕ್ರೊ ಪ್ರೊಸಸರ್‌ಗಳು ಬೇಕೇಬೇಕು ಎಂದು ವಿವರಿಸಿದರು.

ಸರ್ಕಾರ ಇಸ್ರೇಲ್‌ನ ಸಿ.ಇ.ವಿ.ಎ, ಟೋವರ್‌ ಸೆಮಿಕಂಡಕ್ಟರ್‌ ನಂತಹ ವಿಶ್ವದ ಅನೇಕ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು, ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ಕಿಲ್‌ ಇಂಡಿಯಾದಂತಹ ಕಾರ್ಯಕ್ರಮಗಳ ಮೂಲಕ ಸೆಮಿಕಂಡಕ್ಟರ್‌ ಉತ್ಪಾದನೆಗೆ ಒತ್ತು ಕೊಡುವತ್ತ ಗಮನ ಹರಿಸಲಿದೆ. ಹೀಗೆ ಮಾಡಿದಲ್ಲಿ ಶೇಕಡ 50ರಷ್ಟು ಎಲೆಕ್ಟ್ರಾನಿಕ್ಸ್‌ ಬಿಡಿ ಭಾಗಗಳ ಆಮದು ವೆಚ್ಚ ತಗ್ಗಿಸಬಹುದಾಗಿದೆ ಎಂದು ಇಂಡಿಯಾ ಎಲೆಕ್ಟ್ರಾನಿಕ್ಸ್‌ ಅಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್‌ (ಐಇಎಸ್‌ಎ) ಉಪಾಧ್ಯಕ್ಷ ವಿವೇಕ್‌ ತ್ಯಾಗಿ ಹೇಳಿದರು.

ಸಿಇವಿಎ ಕಂಪನಿಯ ಒಇಎ ಇಎಂಇಎ ಹಾಗೂ ಇಂಡಿಯಾ ವಿಭಾಗದ ಸೇಲ್ಸ್‌ ಡೈರೆಕ್ಟರ್‌ ಕೋಬಿ ಡೆಕ್ಟೇರ್‌ ಹಾಗೂ ಇಸ್ರೇಲ್‌ನ ಟೋವರ್‌ ಸೆಮಿಕಂಡಕ್ಟರ್‌ ಕಂಪನಿಯ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಮತ್ತು ಸ್ಪೆಷಲ್‌ ಪ್ರಾಜೆಕ್ಟ್ಸ್ ವಿಭಾಗದ ಉಪಾಧ್ಯಕ್ಷ ಎರೆಜ್‌ ಇಂಬೆರ್‌ಮೆನ್‌ ಅವರು ಭಾರತದಲ್ಲಿ ಸರಕಾರವು ಮೈಕ್ರೊ ಪ್ರೊಸೆಸರ್‌ ಚಿಪ್‌ಗಳ ಉತ್ಪಾದನೆಗೆ ಕಾನೂನಾತ್ಮಕ, ವಾಣಿಜ್ಯಾತ್ಮಕ ಹಾಗೂ ತಾಂತ್ರಿಕ ನೆರವು ನೀಡಿದಲ್ಲಿ ಪಿಪಿಪಿ ಮಾದರಿಯಲ್ಲಿ ಉದ್ಯಮ ಬೆಳವಣಿಗೆಗೆ ಎಲ್ಲ ನೆರವು ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

key words : karnataka-bangalore-tech-summit-BTS-2021