ಬೆಂಗಳೂರು, ನ.17, 2021 : (www.justkannada.in news ) ಇಂದು ಪ್ರಾರಂಭವಾದ ಬೆಂಗಳೂರು ಟೆಕ್ ಶೃಂಗದಲ್ಲಿ ಭಾಷಣಗಳು ಹಾಗೂ ಸಂವಾದಗಳ ಜೊತೆಗೆ ಆಯೋಜಿಸಲಾಗಿರುವ ತಂತ್ರಜ್ಞಾನ ಸಂಸ್ಥೆಗಳ ಪ್ರದರ್ಶನವೂ ಪ್ರತಿನಿಧಿಗಳ ಗಮನವನ್ನು ಸೆಳೆಯುತ್ತಿದೆ. ಸಾಫ್ಟ್‌ವೇರ್ ಕಂಪನಿಗಳು ಮಾತ್ರವೇ ಅಲ್ಲದೆ ಸ್ಥಳೀಯ ಸಮಸ್ಯೆಗಳಿಗೆ ಹಾಗೂ ಅಗತ್ಯಗಳಿಗೆ ಸ್ಪಂದಿಸುತ್ತಿರುವ ಹಲವು ನವೋದ್ಯಮಗಳೂ ಈ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು ವಿಶೇಷ.
ತ್ಯಾಜ್ಯ ವಿಲೇವಾರಿ, ಅರಣ್ಯೀಕರಣ, ಒಳಚರಂಡಿ ನಿರ್ವಹಣೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಈ ನವೋದ್ಯಮಗಳು ಸಕ್ರಿಯವಾಗಿವೆ. ಬೆಂಗಳೂರಿನ ತ್ರಿವೇಣಿ ಟೆಕ್ ಸಂಸ್ಥೆ ಪ್ರದರ್ಶಿಸಿರುವ ‘ಕ್ಲೀನ್‌ಕ್ವೀನ್’ ಯಂತ್ರ ಅಡುಗೆಮನೆಯ ತ್ಯಾಜ್ಯವನ್ನು ಕೇವಲ ಎರಡೇ ಗಂಟೆಗಳ ಅವಧಿಯಲ್ಲಿ ಒಣ ಪುಡಿಯಾಗಿ ಪರಿವರ್ತಿಸಿಕೊಡಬಲ್ಲದಂತೆ! ಇನ್ನು ರಾಯಚೂರಿನ ಅಸ್ಪಳ್ಳಿ ಸಂಸ್ಥೆ ಗಿಡಗಳನ್ನು ಸುಲಭವಾಗಿ ಬೆಳೆಸಲು ಉಪಯೋಗಿಸಬಹುದಾದ ‘ಸೀಡ್ ವೂಂಬ್’ ತಂತ್ರಜ್ಞಾನವನ್ನು ರೂಪಿಸಿದ್ದು, ಅರಣ್ಯೀಕರಣದ ಉದ್ದೇಶಕ್ಕಾಗಿ ಈ ತಂತ್ರಜ್ಞಾನದ ಬಳಕೆ ಬೀಜದ ಉಂಡೆಗಳಿಗಿಂತ ಉತ್ತಮ ಎಂದು ಹೇಳಿಕೊಂಡಿದೆ.
ವಿವಿಧ ಉದ್ದೇಶಗಳಿಗಾಗಿ ಯಂತ್ರಗಳ ಬಳಕೆ ಹೆಚ್ಚುತ್ತಿರುವ ಇಂದಿನ ಸನ್ನಿವೇಶದಲ್ಲಿ ಹಲವು ನವೋದ್ಯಮಗಳು ಆ ನಿಟ್ಟಿನಲ್ಲೂ ಕೆಲಸ ಮಾಡುತ್ತಿವೆ. ದ್ರೋಣ ಆಟೋಮೇಶನ್ ಎಂಬ ಸಂಸ್ಥೆ ಕಟ್ಟಡಗಳ ಒಳಚರಂಡಿ ಕೊಳವೆಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸುವ ಹಾಗೂ ಸ್ವಚ್ಛಗೊಳಿಸುವ ಯಂತ್ರವನ್ನು ಪ್ರದರ್ಶಿಸಿದೆ. ನಿಂಬಲ್ ವಿಶನ್ ಎಂಬ ಇನ್ನೊಂದು ಸಂಸ್ಥೆ ಜಲಸಂಪನ್ಮೂಲದ ನಿರ್ವಹಣೆಯಲ್ಲಿ ಉಪಯುಕ್ತವಾದ ಹಲವು ಉತ್ಪನ್ನಗಳನ್ನು ತನ್ನ ವರ್ಚುಯಲ್ ಮಳಿಗೆಯಲ್ಲಿ ಪರಿಚಯಿಸಿದೆ.
ಕೋವಿಡ್ ಸಂದರ್ಭಕ್ಕಾಗಿ ತಯಾರಿಸಲಾದ ಹಲವು ತಂತ್ರಜ್ಞಾನಗಳೂ ಪ್ರದರ್ಶನದಲ್ಲಿದ್ದು, ಅದರ ವಿಸ್ತರಣೆಯಾಗಿ ಗಾಳಿಯ ಶುದ್ಧೀಕರಣದಂತಹ ತಂತ್ರಜ್ಞಾನಗಳನ್ನೂ ಕೆಲ ನವೋದ್ಯಮಗಳು ಅಭಿವೃದ್ಧಿಪಡಿಸಿವೆ.
key words : karnataka-bangalore-tech-summit-BTS-2021