ಬೆಂಗಳೂರು, ನ.19, 2021 : (www.justkannada.in news ) ಪ್ರತಿಭಾವಂತ ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಟಾರ್ಟಪ್‌ಗಳಿಗೆ ಇಲ್ಲಿಂದಲೇ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವಂತೆ ‘ಸ್ಟಾರ್ಟಪ್ ಸಿಲಿಕ್ಯಾನ್ ವ್ಯಾಲಿ ಬ್ರಿಡ್ಜ್’ ರಚನೆ ಮಾಡಲಾಗುವುದು ಎಂದು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರಕಟಿಸಿದರು.
ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆದು ಸಂಪನ್ನಗೊಂಡ 24ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಐಟಿ-ಬಿಟಿ ಅಷ್ಟೇ ಅಲ್ಲದೇ ಇತರೆ ಉದ್ಯಮಗಳ ಸ್ಥಾಪನೆಗೆ ಉದ್ಯಮಿಗಳಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂದರು.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವನ್ನು ‘ಸ್ಟಾರ್ಟಪ್ ಸಿಲಿಕಾನ್ ವ್ಯಾಲಿ ಬ್ರಿಡ್ಜ್’ ಸ್ಥಾಪನೆ ಮೂಲಕ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲಾಗುವುದು. ಈ ಮೂಲಕ ಅಮೆರಿಕದಲ್ಲಿರುವ ಸ್ಟಾರ್ಟಪ್‌ಗಳಿಗೆ ಇಲ್ಲಿನ ಪ್ರತಿಭಾನ್ವಿತ ತಂತ್ರಜ್ಞರು ಇಲ್ಲಿಂದಲೇ ಕೆಲಸ ಮಾಡುವುದಷ್ಟೇ ಅಲ್ಲದೇ, ಆ ಕಂಪನಿಗಳಲ್ಲಿ ಷೇರು ಸಹ ಪಡೆಯುವ ವ್ಯವಸ್ಥೆ ರೂಪಿಸಲು ಎಲ್ಲ ಪ್ರಯತ್ನಗಳು ನಡೆದಿವೆ ಸಚಿವರು ತಿಳಿಸಿದರು.
ಅಮೆರಿಕದಲ್ಲಿರುವ ಸ್ಟಾರ್ಟಪ್‌ಗಳಿಗೆ ಇಲ್ಲಿಂದಲೇ ನಿಪುಣ ಮಾನವ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ʼಸ್ಟಾರ್ಟಪ್ ಸಿಲಿಕಾನ್ ವ್ಯಾಲಿ ಕಾರ್ಯಪಡೆʼ ರಚಿಸಲಾಗುವುದು. ಇದರಿಂದ ರಾಜ್ಯದ ಯುವ ಜನತೆಗೆ ಉತ್ತಮ ಉದ್ಯೋಗಾವಕಾಶ ದೊರೆಯುವುದರ ಅವರ ಆದಾಯ ವೃದ್ಧಿಯಾಗುತ್ತದೆ. ಜೊತೆಗೆ, ಅಮೆರಿಕದಲ್ಲಿರುವ ಉದ್ಯಮ ಆಲೋಚನೆ ಹಾಗೂ ಪರಿಕಲ್ಪನೆಗಳು ಭಾರತಕ್ಕೆ ವರ್ಗಾವಣೆಯಾಗಲು ಸಹಕಾರಿಯಾಗುತ್ತದೆ. ಇದರಿಂದ ನಾವು ಜಾಗತಿಕವಾಗಿ ಇನ್ನಷ್ಟು ಬೆಳೆಯಲು ಅನುಕೂಲವಾಗಲಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.
ಬಿಯಾಂಡ್ ಬೆಂಗಳೂರು:
ಬೆಂಗಳೂರಿನಾಚೆಗೂ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ‘ಬಿಯಾಂಡ್ ಸ್ಟಾರ್ಟಪ್ ಗ್ರಿಡ್’. ಹುಬ್ಬಳ್ಳಿ, ಮೈಸೂರು, ಮಂಗಳೂರು ಕ್ಲಸ್ಟರ್‌ಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತುಕೊಡಲಾಗಿದ್ದು, ಅದಕ್ಕೆ ಬೇಕಿರುವ ಅಗತ್ಯ ಪ್ರೋತ್ಸಾಹಧನ, ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಬಾರಿಯ ಶೃಂಗಸಭೆಯ ಆದ್ಯತೆಯೂ ಇದೇ ಆಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕಂಪನಿಗಳು ಬೆಂಗಳೂರಿನಾಚೆಗೂ ಉದ್ಯಮ ಸ್ಥಾಪನೆಗೆ ಒಲವು ತೋರಿವೆ. ಮಹಿಳಾ ಉದ್ಯಮಶೀಲತೆ ಮೇಲೂ ಬೆಳೆಕು ಹರಿಸಲಾಗಿದ ಎಂದು ಸಚಿವರು ತಿಳಿಸಿದರು.
ಮಂಗಳೂರಿನಲ್ಲಿ ಫಿನ್‌ಟೆಕ್ ಬ್ಯಾಕ್ ಆಫೀಸ್:
ಸ್ಮಾರ್ಟ್‌ಫೋನ್ ಮೂಲಕ ಪಾವತಿ ಸೇವೆ ಸೇರಿದಂತೆ ಹಣಕಾಸಿಗೆ ಸಂಬಂಧಿಸಿದಂತೆ ಹತ್ತು ಹಲವು ಸೇವೆಗಳನ್ನು ಒದಗಿಸುತ್ತಿರುವ ಹಣಕಾಸು ತಂತ್ರಜ್ಞಾನ ಉದ್ಯಮದಲ್ಲಿ ಕರ್ನಾಟಕದಲ್ಲಿ ದೊಡ್ಡ ಸಾಧನೆ ಮಾಡಿದೆ. ಫಿನ್‌ಟೆಕ್ ಕಂಪನಿಗಳು, ಅದರಲ್ಲೂ ಸ್ಟಾರ್ಟಪ್‌ಗಳು ಹೆಚ್ಚು ಹೆಚ್ಚು ಬೆಳೆಯುತ್ತಿದ್ದು, ಫಿನ್‌ಟೆಕ್ ಕಾರ್ಯಪಡೆ ರಚಿಸಲಾಗಿದೆ. ಮಂಗಳೂರಿನಲ್ಲಿ ಫಿನ್‌ಟೆಕ್ ಉತ್ಕೃಷ್ಠತಾ ಕೇಂದ್ರವನ್ನು ತೆರೆದು ಅಲ್ಲಿ, ಫಿನ್‌ಟೆಕ್ ಬ್ಯಾಕ್ ಆಫೀಸ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
4 ಲಕ್ಷ ಉದ್ಯೋಗಿಗಳ ಕೊರತೆ ನಿವಾರಣೆಗೆ ಕ್ರಮ
ಐಟಿ-ಬಿಟಿ ಸೇರಿದಂತೆ ಅನೇಕ ಉದ್ಯಮಗಳಲ್ಲಿ ಕೌಶಲಯುಕ್ತ ಉದ್ಯೋಗಿಗಳ ಕೊರತೆ ಇದೆ. ನಾವು ಇನ್ನೂ 4 ಲಕ್ಷ ಉದ್ಯೋಗ ನೀಡಲು ಸಿದ್ಧ. ಅದರ ಅವಶ್ಯಕತೆ ತಮಗಿದೆ ಎಂದು ಕಂಪನಿಗಳು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೌಶಲಾಯುಕ್ತ ಮಾನವ ಸಂಪನ್ಮೂಲ ಒದಗಿಸಲು ಶಿಕ್ಷಣ ಹಾಗೂ ತರಬೇತಿ ವಿಧಾನಗಳಲ್ಲಿ ಹಲವು ಸುಧಾರಣೆಗಳನ್ನು ತಂದಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರದ ದೂರದೃಷ್ಟಿಯಿಂದ ಸಿದ್ಧಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಇದಕ್ಕೆ ಪೂರಕವಾಗಿದೆ ಎಂದರು.
ಕಾಲೇಜುಗಳ ದತ್ತು:
ಕಾಲೇಜುಗಳನ್ನು ದತ್ತು ಪಡೆದುಕೊಂಡು ಅಲ್ಲಿ ತರಬೇತಿ ನೀಡಿ, ತಮಗೆ ಬೇಕಾದ ಮಾನವ ಸಂಪನ್ಮೂಲ ಪಡೆದುಕೊಳ್ಳಲು ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ಉದ್ಯಮಿಗಳಿಗೂ ಉನ್ನತ ಶೈಕ್ಷಣಿಕ ಸಂಸ್ಥೆಗಳಿಂದ ಪಿಎಚ್.ಡಿ. ಮಾಡಿ, ಆ ಮೂಲಕ ಅವರು ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದ ನಡುವೆ ಕೊಂಡಿಯಾಗಿ ಬೆಳೆಯಲು ಅವಕಾಶ ಕಲ್ಪಿಸುವ ಬಗ್ಗೆ ಪ್ರಸ್ತಾಪ ಇರಿಸಲಾಗಿದೆ. ಸಾಧ್ಯವಾದರೆ ಕೆಲವೊಂದು ಕಂಪನಿಗಳನ್ನೇ ಸಂಶೋಧನಾ ಕೇಂದ್ರಗಳನ್ನಾಗಿ ಪರಿಗಣಿಸುವ ಬಗ್ಗೆಯೂ ಪ್ರಸ್ತಾಪ ಇರಿಸಲಾಗಿದ್ದು, ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದರು.
ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ನ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕೆಡಿಇಎಂ ಅಧ್ಯಕ್ಷರಾದ ಬಿ.ವಿ.ನಾಯ್ಡು, ಐಟಿ ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ ಇದ್ದರು.
key words : karnataka-bangalore-tech-summit-dr.ashwathnarayan-prees.meet