ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ?

 

ಬೆಂಗಳೂರು, ಆ.20, 2021 : (www.justkannada.in news) ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಪಾರವಾದ ನಿರೀಕ್ಷೆ ಹೊಂದಿರುವ ಬಿ ಎಸ್ ಯಡಿಯೂರಪ್ಪನವರು ಇತ್ತೀಚಿನ ಕೆಲವು ವಿದ್ಯಮಾನಗಳಿಂದಾಗಿ ಆತಂಕಗೊಂಡಿದ್ದಾರೆ ಎನ್ನಲಾಗಿದೆ.

“ಯಡಿಯೂರಪ್ಪನವರು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು.ನಂತರ ಪ್ರಧಾನಿ ನರೇಂದ್ರ ಮೋದಿ,ಅಮಿತ್ ಶಾ ಮೊದಲಾದ ವರಿಷ್ಠರು ಯಡಿಯೂರಪ್ಪನವರು ಒಬ್ಬ ಸರ್ವೋಚ್ಛ ನಾಯಕ.ಬಿಜೆಪಿಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ಟ್ವೀಟ್ ಮೂಲಕ ಕೊಂಡಾಡಿದ್ದರು.ಈ ಪ್ರಸಂಶೆಯಿಂದ ಸಂತೃಪ್ತರಾಗಿದ್ದ ಯಡಿಯೂರಪ್ಪನವರು ಎಲ್ಲಾ ನೋವುಗಳನ್ನು ಮರೆತು ನೂತನ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭಗಳಲ್ಲಿ ಸಂಭ್ರಮದಿಂದಲೇ ಭಾಗವಹಿಸಿದ್ದರು.ನಂತರ ಪಕ್ಷವನ್ನು ಬಲ ಪಡಿಸುವ ತಮ್ಮ ರಾಜ್ಯ ಪ್ರವಾಸದ ರೂಪು ರೇಷೆಗಳನ್ನು ಕೆಲವು ಆಪ್ತರೊಂದಿಗೆ ಉತ್ಸಾಹದಿಂದಲೇ ಚರ್ಚಿಸಿದ್ದರು.ಆದರೆ ಇತ್ತೀಚಿಗೆ ಏಕೋ ಏನೋ ಅವರು ಸ್ವಲ್ಪ ಅನ್ಯ ಮನಸ್ಕರಾದಂತೆ ಕಂಡು ಬರುತ್ತಿದ್ದಾರೆ.ಅವರ ಮನೋಸ್ಥಿತಿ ಕ್ಷಣ ಕ್ಷಣಕ್ಕೂ ಚಂಚಲವಾಗುತ್ತಿದೆ”ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಆಡಳಿತ ಶೈಲಿಯ ಮೂಲಕ ಬಿಜೆಪಿಯನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ನಡೆಯನ್ನು ಅರ್ಥ ಮಾಡಿಕೊಳ್ಳಲು ಯಡಿಯೂರಪ್ಪನವರಿಗೆ ಸಾಧ್ಯವಾಗುತ್ತಿಲ್ಲ.ರಾಜಕೀಯ ಬಿಕ್ಕಟ್ಟು ಎದುರಾದಾಗ ಬೊಮ್ಮಾಯಿ ಖಾಸಗಿಯಾಗಿ ಯಡಿಯೂರಪ್ಪನವರನ್ನು ಭೇಟಿಯಾಗುತ್ತಾರೆ.ಆದರೆ ನೂತನ ಮಂತ್ರಿಗಳ ಪ್ರಮಾಣ ವಚನ ಮುಂತಾದ ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಹಿರಿಯ ಶಾಸಕರೊಂದಿಗೆ ಯಡಿಯೂರಪ್ಪನವರ ಬಳಿ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ.ಅವರ ನಡವಳಿಕೆ ಯಡಿಯೂರಪ್ಪನವರ ಯಾವ ಅಂದಾಜಿಗೂ ಸಿಗುತ್ತಿಲ್ಲ ಎಂದು ಅವರ ಆಪ್ತರೊಬ್ಬರು ತಿಳಿಸಿದರು.

ಇದಕ್ಕೆ ಇಂಬು ನೀಡುವಂತೆ ಅವರ ಕೆಲವು ಆಪ್ತರು”ಸಾರ್,ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರ್ತಿಸಬಹುದು.ಆದರೆ ಬೊಮ್ಮಾಯಿಯವರ ರಾಜಕೀಯ ನಡೆಯನ್ನು ಅರ್ಥ ಮಾಡಿಕೊಳ್ಳುವುದು ಮಾತ್ರ ಕಷ್ಟ.ನೀವು ಕೆಜೆಪಿ ಸ್ಥಾಪಿಸಿದಾಗ ಕಡೇ ಕ್ಷಣದಲ್ಲಿ ಬೊಮ್ಮಾಯಿಯವರು ನಿಮಗೆ ವಿಶ್ವಾಸಘಾತುಕತನ ಮಾಡಿರಲಿಲ್ಲವೇ”ಎಂದು ಯಡಿಯೂರಪ್ಪನವರ ಹಳೇ ಗಾಯಗಳನ್ನು ಕೆದಕಲು ಪ್ರಯತ್ನಿಸಿದ್ದಾರೆ.

CM-BSY-Health-Stable

“ನೀವು ಆದಷ್ಟು ಬೇಗ ಯಡಿಯೂರಪ್ಪನವರ ನೆರಳಿನಿಂದ ಹೊರಗೆ ಬನ್ನಿ”ಎಂದು ವರಿಷ್ಠರು ಬೊಮ್ಮಾಯಿಯವರಿಗೆ ಕಿವಿ ಮಾತು ಹೇಳಿ ಕಳುಹಿಸಿದ್ದಾರೆ ಎಂಬ ಸಂಗತಿಯನ್ನೂ ಯಡಿಯೂರಪ್ಪನವರ ಗಮನಕ್ಕೆ ಅವರ ಆಪ್ತರು ತಂದಿದ್ದಾರೆ ಎನ್ನಲಾಗಿದೆ.ಅವರ ಬೆಂಬಲಿಗರು ಯಾವ ವಿಚಾರವನ್ನು ಪ್ರಸ್ತಾಪಿಸಿದರೂ ಯಡಿಯೂರಪ್ಪನವರು ಮಾತ್ರ ಯಾವುದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿಲ್ಲ. ಸ್ವಾತಂತ್ರೋತ್ಸವದ ದಿನ ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಸುಧಾಕರ್”ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ.ಮುಂದಿನ ಮುಖ್ಯಮಂತ್ರಿಗಳು ಕೂಡ ಬೊಮ್ಮಾಯಿಯವರೇ”ಎಂದು ಹೇಳಿಕೆ ನೀಡಿದ್ದರು.ಅದನ್ನು ಯಡಿಯೂರಪ್ಪನವರ ಗಮನಕ್ಕೆ ಅವರ ಆಪ್ತರು ತಂದಿದ್ದರು.ಆಗಲೂ ಕೂಡ ಯಡಿಯೂರಪ್ಪನವರು ಯಾವುದೇ ಭಾವನೆ ವ್ಯಕ್ತಪಡಿಸಲಿಲ್ಲ.ಅವರ ಮುಖ ಗೋಡೆಯಂತೆ ನಿರ್ವಿಕಾರವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇತ್ತೀಚಿಗೆ ಒಂದು ಅವರು ಸಾರಿ ಮೌನ ಮುರಿದಿದ್ದರಂತೆ. ಹಿರಿಯ ಸಚಿವ ಕೆ ಎಸ್ ಈಶ್ವರಪ್ಪನವರು”ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು.ಆದರೆ ಅವರ ಅವಧಿಯಲ್ಲಿ ಯಾವಾಗಲೂ ಬಿಜೆಪಿಗೆ ಸಂಪೂರ್ಣ ಬಹುಮತ ಬರಲಿಲ್ಲ.ಮುಂದಿನ ಚುನಾವಣೆಯನ್ನು ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿಯೇ ಎದುರಿಸುತ್ತೇವೆ “ಎಂಬ ಹೇಳಿಕೆ ನೀಡಿದ್ದರು.ಇದನ್ನು ಯಡಿಯೂರಪ್ಪನವರ ಗಮನಕ್ಕೆ ತಂದಾಗ ಅವರು ಸ್ವಲ್ಪ ಹೊತ್ತು ಬಿಗುಮಾನದಿಂದಲೇ ಕುಳಿತುಕೊಂಡಿದ್ದರು.ಆದರೆ ನಂತರ ಅವರು”ನಾನು ಕೆಜೆಪಿ ಸ್ಥಾಪಿಸಿದಾಗ 2013 ರಲ್ಲಿ ಅವರೇ ಚುನಾವಣೆ ನಡೆಸಿದ್ದರಲ್ಲಾ.ಆಗ ಏಕೆ ಹೀನಾಯವಾಗಿ ಸೋತರಂತೆ?”ಎಂದು ಕೇಳಿದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಬಿಜೆಪಿ ಉಪಾಧ್ಯಕ್ಷರೊಬ್ಬರು ನಿಗಮ ಮತ್ತು ಮಂಡಳಿಗಳಿಗೆ ನೇಮಕಗೊಂಡಿರುವ ಯಡಿಯೂರಪ್ಪ ಬೆಂಬಲಿಗರನ್ನು ಬದಲಾಯಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಲು ಮನವಿ ಪತ್ರ ಸಿದ್ಧಪಡಿಸುತ್ತಿದ್ದಾರೆ ಎಂಬ ಸಂಗತಿಯನ್ನೂ ಯಡಿಯೂರಪ್ಪನವವರ ಗಮನಕ್ಕೆ ತಂದಿದ್ದಾರೆ.”ಪಕ್ಷದ ಕಚೇರಿಗೆ ಹೋದರೆ ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಾರೆ”ಎಂದೂ ಅವರ ಬೆಂಬಲಿಗರು ದೂರಿದ್ದಾರೆ.

ಈ ಎಲ್ಲಾ ಬಿಡಿ ಬಿಡಿ ಘಟನೆಗಳನ್ನು ಯಡಿಯೂರಪ್ಪ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಬೊಮ್ಮಾಯಿಯವರು ರಾಜಕೀಯವಾಗಿ ಧೀರ್ಘಾವಧಿ ಮ್ಯಾರಥಾನ್ ಓಟಕ್ಕೆ ಸಿದ್ಧರಾಗುತ್ತಿರುವಂತೆ ಯಡಿಯೂರಪ್ಪನವರಿಗೆ ಭಾಸವಾಗ ತೊಡಗಿದೆ. ಜೊತೆಗೆ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಯಾವುದೇ ಅಧಿಕಾರದ ಸ್ಥಾನ ಮಾನ ವನ್ನು ವರಿಷ್ಠರು ನೀಡುವ ಲಕ್ಷಣಗಳು ಕಾಣಿಸುತ್ತಿಲ್ಲ.ಇದರಿಂದಾಗಿ ಅವರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಆಗುತ್ತಿರಬಹುದು.ಏನೇ ಆದರೂ ಮುಂದಿನ ಚುನಾವಣೆ ವೇಳೆಗೆ ಬೊಮ್ಮಾಯಿ vs ವಿಜಯೇಂದ್ರ ಎಂಬ ಸ್ಥಿತಿ ನಿರ್ಮಾಣವಾಗದಿರಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಅವರ ಆಪ್ತರೊಬ್ಬರು ತಿಳಿಸಿದರು.

ಕೃಪೆ : ಸಿ ರುದ್ರಪ್ಪ , ಹಿರಿಯ ಪತ್ರಕರ್ತರು, ಬೆಂಗಳೂರು.

key words : karnataka-bjp-politics-yadiyurappa-cm-vijayendra-election-cm