ಮೈಸೂರು, ಜು.26, 2021 : (www.justkannada.in news ) ಅಂತೂ ಇಂತು ಸಿಎಂ ರಾಜೀನಾಮೆ ಪ್ರಹಸನಕ್ಕೆ ತೆರೆ ಬಿದ್ದಿದೆ. ಎರಡು ತಿಂಗಳುಗಳಿಂದ ಸಿಎಂ ಬಿಎಸ್‌ವೈ ಬದಲಾವಣೆ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ಪೂರ್ಣವಿರಾಮ ಬಿದ್ದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಿದ ಸಂಭ್ರಮದಲ್ಲಿ ಮುಳುಗಬೇಕಿದ್ದ ಭಾರತೀಯ ಜನತಾ ಪಕ್ಷದಲ್ಲಿ ಸೂತಕದ ಛಾಯೆ ಆವರಿಸಿದೆ. ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಯಡಿಯೂರಪ್ಪ ರಾಜೀನಾಮೆ ಬೇಸರ ತರಿಸಿದೆ. ರಾಜ್ಯದಲ್ಲಿ ಎರಡು ವರ್ಷ ಆಡಳಿತ ಪೂರೈಸಿದ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿಯೇ ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇಷ್ಟು ದಿನ ತಾವು ಎದುರಿಸಿದ ಸವಾಲುಗಳು, ಅಗ್ನಿಪರೀಕ್ಷೆಗಳ ಬಗ್ಗೆ ನೆನೆದು, ಇಲ್ಲಿಯವರೆಗೂ ಪಕ್ಷ ಕೊಟ್ಟ ಸ್ಥಾನಮಾನಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿ ಅತ್ಯಂತ ಗೌರವಯುತವಾಗಿ ನಿರ್ಗಮಿಸಿದ್ದಾರೆ.
ಹೈಕಮಾಂಡ್‌ನ ಅಣತಿಯಂತೆ ನಡೆದುಕೊಂಡಿರುವ ಯಡಿಯೂರಪ್ಪ ರಾಜೀನಾಮೆ ವಿಚಾರದಲ್ಲಿಯೂ ಪ್ರಬುದ್ಧತೆ ತೋರಿದ್ದಾರೆ. ಕಳೆದ ವಾರವಷ್ಟೇ ಬಿ.ಎಸ್.ಯಡಿಯೂರಪ್ಪನವರನ್ನು ದೆಹಲಿಗೆ ಕರೆಸಿಕೊಂಡಿದ್ದ ವರಿಷ್ಠರು ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಬಿಜೆಪಿಯಲ್ಲಿ ೭೫ ವರ್ಷದ ನಂತರ ಅಧಿಕಾರವಿಲ್ಲ ಎಂಬ ಕಾರಣ ನೀಡಿ ಯಡಿಯೂರಪ್ಪನವರಿಂದ ರಾಜೀನಾಮೆ ಪಡೆಯಲಾಗಿದೆ. ಆದರೆ ಕಾರಣ ಅದಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ. ವಯಸ್ಸಿನ ಕಾರಣವೇ ಆಗಿದ್ದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಅಗತ್ಯವೇ ಇರಲಿಲ್ಲ. ಯಾಕೆಂದ್ರೆ ಬಿಎಸ್‌ವೈ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾಗ ಅವರ ವಯಸ್ಸು ೭೬ ಆಗಿತ್ತು. ಹೀಗೆಂದ ಮೇಲೆ ಹೈಕಮಾಂಡ್ ವಯಸ್ಸಿನ ಕಾರಣ ನೀಡುವ ಔಚಿತ್ಯವೇನಿದೆ? ಬಿಜೆಪಿ ಪಕ್ಷದಲ್ಲಿ ೭೫ರ ನಂತರ ಅವಕಾಶವಿಲ್ಲ ಎನ್ನುವವರು ಕೇರಳ ಚುನಾವಣೆಯಲ್ಲಿ ೮೮ ವರ್ಷ ವಯಸ್ಸಿನ ಮೆಟ್ರೋ ಮ್ಯಾನ್ ಖ್ಯಾತಿಯ ಶ್ರೀಧರನ್‌ರನ್ನ ಕಣಕ್ಕಿಳಿಸಿದ್ದು ಹೇಗೆ? ಕೇರಳದಲ್ಲಿ ಲೆಕ್ಕಕ್ಕೆ ಬಾರದ ವಯಸ್ಸು ಕರ್ನಾಟಕದಲ್ಲಿ ಬಂದಿದ್ದು ಹೇಗೆ ಅನ್ನೋ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಮಾತ್ರವೇ ಉತ್ತರ ನೀಡಬೇಕು.
ಬಿಎಸ್‌ವೈ ಇಳಿವಯಸ್ಸಿನಲ್ಲಿಯೂ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೊವಿಡ್ ಮೊದಲನೆ ಅಲೆಯ ವೇಳೆ ಬಿಎಸ್‌ವೈರದ್ದು ಅಕ್ಷರಶಃ ಏಕಾಂಗಿ ಹೋರಾಟವಾಗಿತ್ತು. ಪಕ್ಷದಲ್ಲಿನ ಕೆಲ ಸಚಿವರ ಅಸಹಕಾರವಿದ್ದಾಗ್ಯೂ ಬಿಎಸ್‌ವೈ ಎದೆಗುಂದಲಿಲ್ಲ. ರಾಜ್ಯದ ಪಾಲಿನ ಜಿಎಸ್‌ಟಿ ಪಾಲು ಸಿಗದೆ ಇದ್ದಾಗಲೂ, ಪ್ರವಾಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದಿಂದ ನಿರೀಕ್ಷಿಸಿದಷ್ಟು ಪರಿಹಾರ ಸಿಗದೆ ಇದ್ದಾಗಲೂ ಬಿಎಸ್‌ವೈ ಹೆದರಲಿಲ್ಲ. ತಮ್ಮನ್ನು ನಂಬಿ ಬಂದ ೧೭ ಶಾಸಕರಿಗೆ ಸೂಕ್ತ ಸ್ಥಾನಮಾನ ಕೊಡುವ ವಿಚಾರದಲ್ಲಿ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಾಗಲೂ ಮೂಲ ಬಿಜೆಪಿಗರು, ವಲಸಿಗ ಬಿಜೆಪಿಗರು ಎಂಬ ಭಾವನೆ ಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಧಾನಪಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಎಂದರೆ ಎಲ್ಲರ ಚಿತ್ತ ನೆಡುವುದು ಕರ್ನಾಟಕದತ್ತ ಮಾತ್ರ. ಇಂದಿಗೂ ಸಂಸತ್ತಿಗೆ ದಕ್ಷಿಣ ಭಾರತದಿಂದ ಬಿಜೆಪಿಯ ಅತಿ ಹೆಚ್ಚು ಸಂಸದರು ಆಯ್ಕೆಯಾಗುತ್ತಿದ್ರೆ ಅದು ಕರ್ನಾಟಕದಿಂದಲೇ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತೆ. ಸೈಕಲ್ ಏರಿ ರಾಜ್ಯದ ಹಳ್ಳಿ ಹಳ್ಳಿಗಳನ್ನು ಸುತ್ತಿ ಬಿಎಸ್‌ವೈ ಪಕ್ಷ ಸಂಘಟನೆ ಮಾಡಿದ್ದಾರೆ. ೧೯೮೫ರಲ್ಲಿ ಕೇವಲ ೨ ಸ್ಥಾನ ಪಡೆದಿದ್ದ ಬಿಜೆಪಿ ೨೦೧೮ರಲ್ಲಿ ೧೨೦ ಸ್ಥಾನಗಳಿಗೇರಿದೆ ಅಂದ್ರೆ ಅಲ್ಲಿ ಬಿಎಸ್‌ವೈ ಮತ್ತು ಅವರ ಜೊತೆಗಿದ್ದ ನಾಯಕರ ಶ್ರಮ ಎಷ್ಟಿದೆ ಎಂಬುದನ್ನು ಅಂದಾಜಿಸಬಹುದು. ದಕ್ಷಿಣ ಭಾರತದ ಅತಿದೊಡ್ಡ ನಾಯಕನಾಗಿ ಯಡಿಯೂರಪ್ಪ ಹೊರಹೊಮ್ಮಿದರ ಹಿಂದೆ ಶಾಕಷ್ಟು ಪರಿಶ್ರಮವಿದೆ. ಪಕ್ಷ ಸಂಘಟನೆಗಾಗಿ ೫೦ಕ್ಕೂ ಹೆಚ್ಚು ವರ್ಷಗಳಿಂದ ಹಗಲಿರುಳೆನ್ನದೆ ಕಷ್ಟಪಟ್ಟಿದ್ದಾರೆ.
ಇಂಥ ನಾಯಕನ ನಿರ್ಗಮನ ನಿಜಕ್ಕೂ ಲಿಂಗಾಯತ ಸಮುದಾಯಕ್ಕೆ ಆಘಾತ ನೀಡಿದೆ. ಕರ್ನಾಟಕದಲ್ಲಿ ಇಂದಿಗೂ ಬಿಜೆಪಿಯೆಂದರೆ ಅದು ಕೇವಲ ಯಡಿಯೂರಪ್ಪನವರು ಎಂಬ ಭಾವನೆ ಲಿಂಗಾಯತ ಸಮುದಾಯದಲ್ಲಿದೆ. ನಾಡಿನಾದ್ಯಂತ ಯಡಿಯೂರಪ್ಪಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಿರಿ ಕಿರಿಯರೆನ್ನದೆ ಎಲ್ಲರೊಂದಿಗೆ ಬೆರೆಯುವ ಬಿಎಸ್‌ವೈ ಗುಣವೇ ಅದಕ್ಕೆ ಕಾರಣ. ಪಕ್ಷದ ಶಿಸ್ತಿನ ಸಿಪಾಯಿ, ಆರ್‌ಎಸ್‌ಎಸ್‌ನ ಕಟ್ಟಾಳು ಬಿಎಸ್ವೈ ಗೆ ಬಿಜೆಪಿ ಪಕ್ಷವೇ ಎಲ್ಲಾ. ಇಂಥಹ ನಾಯಕ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುವ ವೇಳೆ ಕಣ್ಣೀರು ಹಾಕಿದ್ದು ಅವರನ್ನು ರಾಜಕೀಯವಾಗಿ ವಿರೋಧಿಸುವ, ಟೀಕಿಸುವವರಿಗೂ ಒಂದು ಕ್ಷಣಕ್ಕೆ ಅಯ್ಯೋ ಎನಿಸುವಂತೆ ಮಾಡಿದ್ದು ಸುಳ್ಳಲ್ಲ.
‘ರಾಜೀನಾಮೆಗೆ ನನ್ನನ್ನು ಯಾರೂ ಒತ್ತಾಯಿಸಿಲ್ಲ’ ಎಂದು ಯಡಿಯೂರಪ್ಪನವರು ಹೇಳಬಹುದು ಆದರೆ ಪದತ್ಯಾಗ ಎಂಬ ವಿಚಾರ ಎಂಥವರನ್ನೂ ನೋಯಿಸುತ್ತದೆ. ಅದರಲ್ಲೂ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಒಬ್ಬ ದೊಡ್ಡ ಸಮುದಾಯದ ನಾಯಕನಿಗೆ ಅದು ಅವಮಾನವೇ ಸರಿ. ವಿದಾಯ ಭಾಷಣದಲ್ಲಿ ಯಡಿಯೂರಪ್ಪ ಸವಾಲು,ಅಗ್ನಿ ಪರೀಕ್ಷೆಗಳನ್ನು ಮೆಲುಕು ಹಾಕುವ ವೇಳೆ ಕೇಂದ್ರ ಸರ್ಕಾರದಿಂದ ತಮಗಾದ ಅಡ್ಡಿಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಸರ್ಕಾರ ರಚನೆ ಮಾಡಿದ ತಪ್ಪಿಗೆ ಎರಡು ತಿಂಗಳುಗಳ ಕಾಲ ಸಂಪುಟ ರಚನೆ ಮಾಡಲು ಕೇಂದ್ರ ತಮಗೆ ಅವಕಾಶ ಮಾಡಿಕೊಡದ ಬಗ್ಗೆ ಕೂಡಾ ಬಿಎಸ್‌ವೈ ಬೇಸರ ವ್ಯಕ್ತಪಡಿಸಿದ್ದಾರೆ. ಇದರರ್ಥ ಪಕ್ಷ ತಮಗೆ ಕೊಟ್ಟಿದ್ದಕ್ಕಿಂತ ತಾವು ಪಕ್ಷಕ್ಕೆ ಕೊಟ್ಟ ಕೊಡುಗೆಯೇ ಹೆಚ್ಚು ಎಂದು.
ರಾಜಕಾರಣಿಗಳು ಅವಧಿಗೆ ಮುನ್ನವೇ ತಮ್ಮ ಸ್ಥಾನದಿಂದ ನಿರ್ಗಮಿಸಿದ್ರೆ ಕೆಲವು ಷರತ್ತುಗಳನ್ನು ಹಾಕಿಯೇ ನಿರ್ಗಮಿಸುತ್ತಾರೆ. ಆದರೆ ಯಡಿಯೂರಪ್ಪ ವಿಚಾರದಲ್ಲಿ ಅಂಥಹ ಯಾವುದೇ ಷರತ್ತುಗಳನ್ನು ಹೈಕಮಾಂಡ್ ಮುಂದೆ ಇಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ‘ರಾಜ್ಯಪಾಲರಾಗ್ತೀರಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಬಿಎಸ್‌ವೈ ‘ಖಂಡಿತವಾಗಿಯೂ ಇಲ್ಲ’ ಎಂದು ಹೇಳುವ ಮೂಲಕ ಯಾವುದೇ ಸ್ಥಾನಮಾನಗಳನ್ನೂ ನಿರೀಕ್ಷಿಸುತ್ತಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ವಿರುದ್ಧ ಸಿಡಿದೆದ್ದು ಕೆಜೆಪಿ ಪಕ್ಷ ಕಟ್ಟಿ ೨೦೧೩ರ ಚುನಾವಣೆಯಲ್ಲಿ ಯಡಿಯೂರಪ್ಪ ಕೊಟ್ಟ ಪೆಟ್ಟಿನ ಬಗ್ಗೆ ಹೈಕಮಾಂಡ್‌ಗೂ ಅರಿವಿದೆ. ಹೀಗಾಗಿ ಯಡಿಯೂರಪ್ಪನವರನ್ನು ಸುಲಭವಾಗಿ ನಿರ್ಲಕ್ಷಿಸುವಂತಿಲ್ಲ. ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲಿಯೂ ಕಮಲ ಅರಳಿಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳ ಮುಂದೆ ಬಿಜೆಪಿ ಮಂಕಾಗಿದೆ. ಕರ್ನಾಟಕದ ಮೂಲಕ ದಕ್ಷಿಣ ಭಾರತವನ್ನು ಪ್ರವೇಶಿಸಬೇಕೆಂಬ ಹೆಬ್ಬಯಕೆ ಹೊಂದಿರುವ ಬಿಜೆಪಿ, ಹಿರಿಯ ನಾಯಕನಿಂದ ಅಧಿಕಾರ ಕಿತ್ತುಕೊಳ್ಳುವ ಮೂಲಕ ದೊಡ್ಡ ಸಮುದಾಯದ ಸ್ವಾಭಿಮಾನಕ್ಕೆ ಪೆಟ್ಟು ನೀಡಿರುವುದು ಸುಳ್ಳಲ್ಲ. ಯಡಿಯೂರಪ್ಪನವರು ಕುರ್ಚಿ ಬಿಟ್ಟು ಮೇಲೇಳುವವರೆಗೂ ಲಿಂಗಾಯತರನ್ನೇ ಮುಂದಿನ ಸಿಎಂ ಮಾಡುತ್ತೇವೆ ಎನ್ನುತ್ತಿದ್ದ ಹೈಕಮಾಂಡ್ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆಯೇ ತನ್ನ ವರಸೆ ಬದಲಿಸಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಯ ಹೆಸರನ್ನೇ ತೇಲಿಬಿಟ್ಟು ಲಿಂಗಾಯತರನ್ನು ಡಿಸಿಎಂ ಮಾಡುತ್ತೇವೆ ಎನ್ನುತ್ತಿದೆ.
ಸಿಎಂ ರೇಸ್‌ನ ಲಿಸ್ಟ್ನಲ್ಲಿದ್ದ ಮುರುಗೇಶ್ ನಿರಾಣಿ ಹೆಸರು ಹಿಂದೆ ಸರಿದು ಅರವಿಂದ್ ಬೆಲ್ಲದ್ ಹೆಸರು ಡಿಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಹೈಕಮಾಂಡ್ ಅಂಗಳದಿಂದ ಕ್ಷಣಕ್ಕೊಂದು ನಿರ್ಧಾರಗಳು ಹೊರಬರುತ್ತಿವೆ. ಹೈಕಮಾಂಡ್ ನಿರ್ಧಾರ ಏನೇ ಆದರೂ ಯಡಿಯೂರಪ್ಪನವರ ವರ್ಚಸ್ಸು, ನಾಯಕತ್ವವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ವಿದಾಯ ಭಾಷಣ ವೇಳೆ ಯಡಿಯೂರಪ್ಪ ಹಾಕಿದ ಕಣ್ಣೀರು ಬಿಜೆಪಿಗೆ ದುಬಾರಿಯಾಗಬಹುದು. ಹೈಕಮಾಂಡ್ ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತೆ ಇಲ್ಲದಿದ್ರೆ ಬಿಜೆಪಿ ನಿರ್ಧಾರ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭ ಮಾಡಿಕೊಡುವ ಸಾಧ್ಯತೆಗಳೇ ಹೆಚ್ಚು.
- ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತರು, ಮೈಸೂರು.
key words : karnataka-bsy-yadiyurappa-bjp-resignation-cm-weeping
==============-