ಬೆಂಗಳೂರು, ಜೂ.27, 2019 : (www.justkannada.in news) : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೇಯೋ ಹೇಗೆ’ ಎಂದು ಸರಕಾರಕ್ಕೆ ಹೈಕೋರ್ಟ್ ಚಾಟಿ ಬೀಸುವ ಮೂಲಕ ಸಮ್ಮಿಶ್ರ ಸರಕಾರದ ಚಳಿ ಬಿಡಿಸಿದೆ. ಒಂದೆಡೆ ಮಿತ್ರ ಪಕ್ಷಗಳ ಮುಖಂಡರ ಭಿನ್ನಮತ, ಮತ್ತೊಂದೆಡೆ ಪ್ರತಿಪಕ್ಷದ ಪ್ರತಿಭಟನೆಯ ಬಿಸಿ..ಇವೆಲ್ಲದರ ನಡುವೆ ಇದೀಗ ಕೋರ್ಟ್ ಚಾಟಿ..
ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡು, ಬಹಿರಂಗವಾಗಿ ಸಾರ್ವಜನಿಕರ ಹಾಗೂ ಮಾಧ್ಯಮಗಳ ವಿರುದ್ಧ ಕೋಪೋದ್ರಿಕ್ತರಾಗಿ ವರ್ತಿಸಲು ಇಷ್ಟು ಸಾಲದೆ..? ಹೌದು ಸದ್ಯದ ಒತ್ತಡದ ಸ್ಥಿತಿ ನಿಭಾಯಿಸುವಲ್ಲಿ ಸಿಎಂ ಕುಮಾರಸ್ವಾಮಿ ದಿನೆದಿನೇ ವಿಫಲವಾಗುತ್ತಿದ್ದಾರೆ ಎಂದೆನಿಸಿದೆ.
ಈ ತನಕ ಮಾಧ್ಯಮಗಳ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿದ್ದ ಸಿಎಂ ಕುಮಾರಸ್ವಾಮಿ, ಬುಧವಾರ ನ್ಯಾಯಕ್ಕಾಗಿ ಆಗಮಿಸಿದ್ದ ಪ್ರತಿಭಟನಕಾರರ ವಿರುದ್ಧ ಆಕ್ರೋಶದ ನುಡಿಗಳನ್ನಾಡಿರುವುದು ಒತ್ತಡ ನಿಭಾಯಿಸುವಲ್ಲಿ ವಿಫಲವಾಗುತ್ತಿರುವುದಕ್ಕೆ ಸಾಕ್ಷಿಯಂತಿದೆ.
ಈ ನಡುವೆ ಜೆಡಿಎಸ್ ಮುಖಂಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದಡಿ ಬಂಧನಕ್ಕೊಳಗಾಗಿರುವ ‘ಟ್ರೋಲ್ ಮಗಾ‘ ಫೇಸ್‌ಬುಕ್ ಪುಟದ ಅಡ್ಮಿನ್ ಜಯಕಾಂತ್ ಅವರು ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರಕಾರವನ್ನು ಸರಿಯಾಗಿಯೇ ತರಾಟೆ ತೆಗೆದುಕೊಂಡಿರುವುದು ಸಹ ಮುಖ್ಯಮಂತ್ರಿ ಮತ್ತಷ್ಟು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದೆ.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೇಯೋ ಹೇಗೆ’ ಎಂದು ಕಿಡಿಕಾರಿರುವ ಹೈಕೋರ್ಟ್, ‘ಕರ್ನಾಟಕ ಪೊಲೀಸ್ ರಾಜ್ಯವಾಗಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿರುವುದು ರಾಜ್ಯ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಜತೆಗೆ, ‘ಶ್ರೀಸಾಮಾನ್ಯರು ರಸ್ತೆ ಮೇಲೆ ನಿರ್ಭಯವಾಗಿ ಓಡಾಡಲೂ ಆಗದಂತಹ ಸ್ಥಿತಿ ಇದೆ. ಅರ್ಜಿದಾರರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೂ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲಾಗುತ್ತದೆ ಎಂದರೆ ಏನರ್ಥ, ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತಿಲ್ಲವೇ’ ಎಂದು ಆಕ್ರೋಶ ಹೊರಹಾಕಿ ಅರ್ಜಿದಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ನೀಡಿರುವುದು ಕೋರ್ಟ್ ಎಷ್ಟರ ಮಟ್ಟಿಗೆ ಸರಕಾರದ ವರ್ತನೆಗೆ ಬೇಸತ್ತಿದೆ ಎಂಬುದಕ್ಕೆ ನಿದರ್ಶನ.
ಈ ಎಲ್ಲಾ ಘಟನೆಗಳು ಸಿಎಂ ಕುಮಾರಸ್ವಾಮಿ ತಾಳ್ಮೆಗೆಡುವಂತೆ ಮಾಡುತ್ತಿದೆ ಎನಿಸಿದೆ. ಈಗಲಾದರು ಕುಮಾರಸ್ವಾಮಿ ಶಾಂತಿಯಿಂದ ಆಲೋಚಿಸಿ ಸಮಸ್ಯೆ ಎದುರಿಸವ ಬಗ್ಗೆ ಆತ್ಮವಿಶ್ವಾಸದಿಂದ ಮುಂದಡಿ ಇಡಬೇಕಾಗಿದೆ.
–
karnataka CM kumaraswamy fail to manage stress. high court charged the state government regarding FB page admin arrest case
key words : bangalore-troll.maga-kumaraswamy-high.court-police