ಬೆಂಗಳೂರು, ಜುಲೈ 21, 2019 (www.justkannada.in): ವಿಶ್ವಾಸ ಮತಯಾಚನೆ ವಿಳಂಬವಾಗುತ್ತಿದ್ದು ರೆಸಾರ್ಟ್ ನಲ್ಲಿಯೇ ಶಾಸಕರು ವಾಸ್ತವ್ಯ ಹೂಡುವಂತಾಗಿದೆ. ಇದರಿಂದಾಗಿ ಕ್ಷೇತ್ರದ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಕೈ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೆಸಾರ್ಟ್ ವಾಸ್ತವ್ಯದಿಂದಾಗಿ ರೋಸಿಹೋಗಿರುವ ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ. 15 ಶಾಸಕರ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರ ಉಳಿಯುವ ಯಾವುದೇ ಭರವಸೆ ಇಲ್ಲವಾಗಿದೆ.
ಇಂತಹ ಸಂದರ್ಭದಲ್ಲಿ ವಿಶ್ವಾಸಮತ ಯಾಚನೆ ವಿಳಂಬ ಮಾಡಲಾಗುತ್ತಿದೆ. 9 ದಿನಗಳಿಂದ ರೆಸಾರ್ಟ್ ನಲ್ಲಿ ಶಾಸಕರನ್ನು ಕೂಡಿ ಹಾಕಲಾಗಿದೆ. ಕ್ಷೇತ್ರಕ್ಕೆ ಹೋಗಲು ಆಗುತ್ತಿಲ್ಲ. ಅಲ್ಲದೆ ರೆಸಾರ್ಟ್ ನಲ್ಲಿ ಪಕ್ಷದ ಮುಖಂಡರು ಸಂಶಯದಿಂದ ಹಿಂಬಾಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.