ರೆಡ್‌ ಝೋನ್‌ನಲ್ಲಿ ಚಟುವಟಿಕೆಗೆ ಅವಕಾಶ ಕೋರಿ ಪ್ರಸ್ತಾವನೆ: ಡಾ. ಅಶ್ವತ್ಥನಾರಾಯಣ

 

ಬೆಂಗಳೂರು, ಮೇ 15, 2020 : (www.justkannada.in news ) ಲಾಕ್‌ಡೌನ್‌-4 ಅವಧಿಯಲ್ಲಿ ಹಸಿರು, ಹಳದಿ ವಲಯಗಳಂತೆ ಕೆಂಪು ವಲಯದಲ್ಲೂ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಬೇಕೆಂಬ ಪ್ರಮುಖ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆ ಬಳಿಕ ಡಾ.ಅಶ್ವತ್ಥನಾರಾಯಣ ಸುದ್ದಿಗಾರರ ಜತೆ ಮಾತನಾಡಿದರು.

“ಲಾಕ್‌ಡೌನ್‌-4 ಕುರಿತು ಕೇಂದ್ರ ಸರ್ಕಾರದ ಮುಂದಿನ ಸೂಚನೆಯನ್ನು ಎದುರು ನೋಡುತ್ತಿದ್ದೇವೆ. ರಾಜ್ಯದಲ್ಲಿ ಅದನ್ನು ಯಾವ ರೀತಿ ಅನುಷ್ಠಾನ ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸುವರು. ಕಂಟೈನ್ಮೆಂಟ್‌ ವಲಯದಲ್ಲಿ ಮಾತ್ರ ಚಟುವಟಿಕೆ ಸ್ಥಗಿತಗೊಳಿಸಿ, ಉಳಿದ ಭಾಗಗಳಿಗೆ ವಿನಾಯಿತಿ ನೀಡಬೇಕು. ರೆಡ್ ಝೋನ್‌ನಲ್ಲೂ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಬೇಕು ಎಂಬುದೇ ನಮ್ಮ ಪ್ರಮುಖ ಬೇಡಿಕೆ,” ಎಂದು ಹೇಳಿದರು.

karnataka-demands-to-open-in-red-zone-dr.ashwath.narayan-dcm-bangalore

ಸಹಜ ಸ್ಥಿತಿಗೆ ಮರಳುವ ಸಮಯ

“ಕೊರೊನಾ ಸೋಂಕು ತಡೆಗೆ ಈಗಾಗಲೇ 2 ತಿಂಗಳು ಸಮಯ ತೆಗೆದುಕೊಂಡಿದ್ದು, ಇದೀಗ ಜನಜೀವನ ಸಹಜಸ್ಥಿತಿಗೆ ಮರಳುವ ಸಮಯ ಬಂದಿದೆ. ಆರ್ಥಿಕತೆ ಬಗ್ಗೆಯೂ ಗಮನ ಹರಿಸುವ ಅನಿವಾರ್ಯತೆ ಇರುವುದರಿಂದ ವೈರಸ್‌ ಹಾಗೂ ಜನ ಜೀವನದ ನಡುವೆ ಸಮತೋಲನ ಕಾಯ್ದುಕೊಂಡು ಅದರ ಜತೆಗೆ ಬದುಕಲು ಕಲಿಯಬೇಕು. ಈ ಲಾಕ್‌ಡೌನ್‌ ಅವಧಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗಿದ್ದು, ಮುಂದಿನ ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿದ್ದೇವೆ,”ಎಂದರು.

ರೈತರ ಹಿತ ಕಾಯಲಾಗಿದೆ

“ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಎಪಿಎಂಸಿ ಕಮಿಟಿಗಳಿಗೂ ಧಕ್ಕೆ ಆಗಲ್ಲ. ಕೃಷಿ ಉತ್ಪನ್ನಗಳನ್ನು ರೈತರು ನೇರ ಮಾರಾಟ ಮಾಡಲು ಇದರಿಂದ ಅವಕಾಶ ದೊರೆಯಲಿದೆ. ರೈತರ ಆದಾಯ ದ್ವಿಗುಣಗೊಳಿಸುವ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ

“ಆಶಾ ಕಾರ್ಯಕರ್ತರನ್ನು ಉತ್ತೇಜಿಸುವ ಉದ್ದೇಶದಿಂದ ಸಹಕಾರ ಇಲಾಖೆ ಮೂಲಕ‌ ಆಶಾ ಕಾರ್ಯಕರ್ತರಿಗೆ ಹೆಚ್ಚುವರಿ 3 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುವುದು. ಇಂಥ ಅತ್ಯುತ್ತಮ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ,”ಎಂದರು

ಇಬ್ರಾಹಿಂ ಬೇಡಿಕೆ ಸರಿಯಲ್ಲ

“ರಂಜಾನ್‌ ದಿನ ಸಾಮೂಹಿಕ ನಮಾಜ್‌ ಮಾಡಲು ಅವಕಾಶ ನೀಡಬೇಕು ಎಂಬ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರ ಬೇಡಿಕೆ ಸರಿಯಲ್ಲ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು ಎಂದು ಸರ್ಕಾರ ನಿಶ್ಚಯಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಬೇಡಿಕೆ ಸಲ್ಲಿಸುವುದು ಸಮಂಜಸವಲ್ಲ. ಪರಿಸ್ಥಿತಿಯ ಲಾಭ ಪಡೆದು, ಭಾವನಾತ್ಮಕ ವಿಚಾರ ತಂದು ರಾಜಕೀಯ ಮಾಡುವುದು ಸರಿಯಲ್ಲ. ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಸೂಕ್ತ ಬೇಡಿಕೆ ಸಲ್ಲಿಸಲಿ,”ಎಂದು ಹೇಳಿದರು.

 

key words : karnataka-demands-to-open-in-red-zone-dr.ashwath.narayan-dcm-bangalore