ನವದೆಹಲಿ:ಜುಲೈ-26:(www.justkannada.in) ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ ಮತ್ತು ಐಜಿಪಿ) ಹುದ್ದೆಗೆ ನೀಲಮಣಿ ಎನ್.ರಾಜು ಅವರನ್ನು ನೇಮಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ, ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಯುಪಿಎಸ್‌ಸಿ ಸಮಿತಿ ಶಿಫಾರಸು ಮಾಡುವ ಹೆಸರನ್ನು ಡಿಜಿಪಿ ಹುದ್ದೆಗೆ ಪರಿಗಣಿಸಬೇಕು. ಈ ಕುರಿತಂತೆ ಸುಪ್ರೀಂ ಕೋರ್ಟ್ನ ಸ್ಪಷ್ಟ ಆದೇಶವಿದ್ದರೂ ಉಲ್ಲಂಘಿಸಿ ನೀಲಮಣಿ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ ಸರ್ಕಾರದ ಆದೇಶ ರದ್ದುಪಡಿಸಿ, ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಅವರನ್ನು ತೆಗೆದುಹಾಕುವಂತೆ ಕೋರಿ ರೆಡ್ಡಿ ಸುಪ್ರೀಂ ಮೊರೆ ಹೋಗಿದ್ದಾರೆ.
ನೀಲಮಣಿ ರಾಜು ಅವರನ್ನು ಡಿಜಿಪಿ ಮತ್ತು ಕರ್ನಾಟಕದ ಐಜಿಯಾಗಿ ನೇಮಕ ಮಾಡಿದ ಸರ್ಕಾರಿ ಅಧಿಸೂಚನೆಯನ್ನು 2017 ರ ಅಕ್ಟೋಬರ್ 31ಕ್ಕೆ ತಡೆನೀಡಬೇಕು. ಈ ಹುದ್ದೆಗೆ ಅರ್ಹ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಲು ಮತ್ತು ಅದನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಕಳುಹಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮಧ್ಯಂತರ ನಿರ್ದೇಶನ ನೀಡುವಂತೆ ರೆಡ್ಡಿ ನ್ಯಾಯಾಲಯವನ್ನು ಕೋರಿದ್ದಾರೆ.
ಡಿಜಿ ಹಾಗೂ ಐಜಿಪಿ ಹುದ್ದೆಗೆ ನೀಲಮಣಿ ಎನ್.ರಾಜು ಅವರ ನೇಮಕ ಪ್ರಶ್ನೆಸಿ ಈ ಹಿಂದೆ ಎಂ.ಎನ್ ರೆಡ್ಡಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲನ್ನೂ ಏರಿದ್ದರಲ್ಲದೇ ಈ ಹುದ್ದೆ ನೇಮಕಾತಿಯನ್ನು ತಾತ್ಕಾಲಿಕ ಎಂದು ಘೋಷಿಸುವಂತೆ ಅಪೆಕ್ಸ್ ನ್ಯಾಯಾಲಯಕ್ಕೂ ಮನವಿ ಮಾಡಿದ್ದರು.