ಪ್ರಧಾನಿ ಮೋದಿ ಸಾರಥ್ಯ :  ಕರ್ನಾಟಕದಲ್ಲಿ ಮತ ಶಿಖಾರಿಗೆ  “ BIG 3 PLAN “

 

ಮೈಸೂರು, ಏ.06, 2023  : (www.justkannada.in news ) ದಕ್ಷಿಣಭಾರತದ ರಾಜ್ಯಗಳ ಪೈಕಿ ಗಟ್ಟಿಯಾಗಿ ನೆಲೆಯೂರಿರುವ ಕರ್ನಾಟಕದಲ್ಲಿ ಬಿಜೆಪಿಯಿಂದ ಅಧಿಕಾರ ಕೈ ಜಾರದಂತೆ ನೋಡಿಕೊಳ್ಳಲು ಮುಂದಾಗಿರುವ ಹೈಕಮಾಂಡ್, ರಾಜ್ಯ ಗೆಲ್ಲುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಮತ ಶಿಕಾರಿ ದಂಡಯಾತ್ರೆ ನಡೆಸಲು ತಯಾರಿ ಮಾಡಿಕೊಂಡಿದೆ.

ಬಿಜೆಪಿ ಹೈಕಮಾಂಡ್ ನಡೆಸಿರುವ ಆಂತರಿಕ ಸರ್ವೆಯಲ್ಲಿ ಕಾಂಗ್ರೆಸ್ ಬಹುಮತದ ಹತ್ತಿರಕ್ಕೆ ಬಂದಿರುವ ವರದಿ ದೊರೆತಿರುವ ಹಿನ್ನಲೆಯಲ್ಲಿ ಸುಲಭವಾಗಿ ಅಧಿಕಾರ ಬಿಟ್ಟುಕೊಡದೆ ಮೋದಿ ಅವರಿಂದ ಬರೋಬ್ಬರಿ ೨೦ ರ್ಯಾಲಿಗಳನ್ನು ನಡೆಸಲು ಕಾರ್ಯತಂತ್ರ ಹೆಣೆದಿದೆ. ವಿಶೇಷವಾಗಿ ಬಹಿರಂಗ ಪ್ರಚಾರ ಅಂತ್ಯದ ಕೊನೆಯ ಮೂರ್ನಾಲ್ಕು ದಿನಗಳಲ್ಲಿ ಮೂರು ದಿನಗಳ ಕಾಲ ರಾಜ್ಯದಲ್ಲೇ ವಾಸ್ತವ್ಯ ಉಳಿಯುವ ಚಿಂತನೆ ಮಾಡಿರುವುದು ಕಾಂಗ್ರೆಸ್-ಜಾ.ದಳ ಭದ್ರಕೋಟೆಯನ್ನು ಛಿದ್ರಗೊಳಿಸುವ ಉದ್ದೇಶದಿಂದಲೇ ಎಂಬುದು ಒಪನ್ ಸೀಕ್ರೆಟ್.

ಉತ್ತರ ಭಾರತದ ರಾಜ್ಯಗಳನ್ನು ಗೆದ್ದಷ್ಟು ದಕ್ಷಿಣ ಭಾರತದ ರಾಜ್ಯಗಳನ್ನು ಗೆಲ್ಲುವುದರಲ್ಲಿ ಬಿಜೆಪಿಗೆ ಸುಲಭದ ಮಾತಲ್ಲ. ಆಂಧ್ರಪ್ರದೇಶ, ತಮಿಳುನಾಡು,ಕೇರಳ,ತೆಲಂಗಾಣದಲ್ಲಿ ನೆಲೆಯೂರಲು ಪರದಾಡುತ್ತಿರುವ ಬಿಜೆಪಿ ಕರ್ನಾಟಕದಲ್ಲಿ ಮಾತ್ರ ಬಹುಮತದ ಹತ್ತಿರಕ್ಕೆ ಬಂದು ಆಡಳಿತ ಮಾಡುವಲ್ಲಿ ಸಫಲವಾಗಿದೆ. ಹೀಗಾಗಿಯೇ, ತಳವೂರಿದ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದು ತಲೆಕೆಡಿಸಿಕೊಂಡಿರುವ ಗೃಹ ಸಚಿವ ಅಮಿತ್ ಶಾ ಈಗ ಪ್ರಧಾನಿ ಮೋದಿ ಅವರ ಮೂಲಕ ಬಿಜೆಪಿ ಪರವಾದ ಸುನಾಮಿ ಅಲೆಯನ್ನು ಉಂಟುಮಾಡಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದು,ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಲಾಗಿದೆ.

೨೦ ರ್ಯಾಲಿಗೆ ಭರ್ಜರಿ ಸಿದ್ಧತೆ:

ರಾಜ್ಯದಲ್ಲಿ ಕಮಲ ಅರಳಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಪ್ರಧಾನಿ ನರೇಂದ್ರಮೋದಿ ಅವರ ೨೦ ರ್ಯಾಲಿಗಳನ್ನು ಆಯೋಜಿಸುತ್ತಿದ್ದು, ಕಲ್ಯಾಣ ಕರ್ನಾಟಕ,ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಹಳೆ ಮೈಸೂರು ಹಾಗೂ ಬೆಂಗಳೂರು ಸೇರಿ ಆರು ಪ್ರಾಂತಗಳಲ್ಲಿ ಕನಿಷ್ಠ ೨ ರಿಂದ ೩ ರ್ಯಾಲಿಗಳು, ೫ ಬೃಹತ್ ಬಹಿರಂಗ ಸಮಾವೇಶ ನಡೆಸಲು ಮುಂದಾಗಿದೆ.

ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಾಬಲ್ಯವಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಗಮನಹರಿಸಲಿದ್ದು,ಕಳೆದ ಬಾರಿ ಈ ಭಾಗದ ೪೦ ಕ್ಷೇತ್ರಗಳಲ್ಲಿ ೧೫ ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿ ೩೦ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ.

ಮೂರು ಭಾಗವಾಗಿ ವಿಂಗಡಣೆ:

ಕಾಂಗ್ರೆಸ್,ಜಾ.ದಳವನ್ನು ಈ ಬಾರಿ ಹೊಡೆದು ಆಡಳಿತಕ್ಕೆ ಬರುವುದಕ್ಕೆ ಶ್ರಮ ಹಾಕಲೇಬೇಕಿರುವುದರಿಂದ ೨೨೪ ಕ್ಷೇತ್ರಗಳನ್ನು  ಎ,ಬಿ ಮತ್ತು ಸಿ ಎಂದು ಮೂರು ಭಾಗವಾಗಿ ವಿಂಗಡಿಸಿದ್ದು, ಎ ಭಾಗದಲ್ಲಿ ಬಿಜೆಪಿ ಗೆದ್ದಿರುವ ೧೧೫ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆ, ಬಿ -ವಿಭಾಗದಲ್ಲಿ ಶ್ರಮಪಟ್ಟರೆ ಗೆಲ್ಲಬಹುದಾದ ೫೦ರಿಂದ ೬೦ ಕ್ಷೇತ್ರಗಳು ಮತ್ತು ಸಿ-ವಿಭಾಗದಲ್ಲಿ ಕಷ್ಟಕರ ಎನ್ನಿಸಿಕೊಂಡಿರುವ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡು ಗೆಲ್ಲುವುದಕ್ಕೆ ಪ್ಲಾನ್ ಮಾಡಲಾಗಿದೆ.

ಈಗಾಗಲೇ ಬಿ ಮತ್ತು ಸಿ ವಲಯಗಳೆಂದು ಗುರುತಿಸಿರುವ ಕ್ಷೇತ್ರಗಳಲ್ಲಿ ಹೆಚ್ಚು ಪ್ರಚಾರ ಮತ್ತು ಎದುರಾಳಿಗಳ ದೌರ್ಬಲ್ಯಅರಿತು ಕೆಲಸಮಾಡುವಂತೆ ಸೂಚನೆ ನೀಡಲಾಗಿದೆ.

ರಾಜ್ಯಕ್ಕೆ ಬಂದಿಳಿದಿರುವ ೫೦ಮಂದಿ ಸ್ಪೆಷಲಿಸ್ಟ್:

ಉತ್ತರಪ್ರದೇಶ,ಗುಜರಾತ್,ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಗೆಲುವಿಗಾಗಿ ಕೆಲಸ ಮಾಡಿರುವ ವಿವಿಧ ರಾಜ್ಯಗಳ ೫೦ ಮಂದಿ ಸಂಸದರ ಸ್ಪೆಷಲಿಸ್ಟ್ ಟೀಮ್ ಕರ್ನಾಟಕಕ್ಕೆ ಬಂದಿಳಿದಿದ್ದು,ಒಬ್ಬೊಬ್ಬರಿಗೆ ಎರಡು-ಮೂರು ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಈ ಸ್ಪೆಷಲಿಸ್ಟ್‌ಗಳು ಚುನಾವಣೆ ಮುಗಿಯುವ ತನಕವೂ ಉಳಿದು ಗೆಲ್ಲುವುದಕ್ಕೆ ಬೇಕಾದ ರೀತಿಯಲ್ಲಿ ಕಾರ್ಯತಂತ್ರ ರೂಪಿಸುತ್ತಾರೆ. ಎದುರಾಳಿ ಸಾಮರ್ಥ್ಯ, ಜಾತೀವಾರು ಮತಗಳಿಕೆ, ಪ್ರಚಾರದ ಶೈಲಿಯ ಬದಲಾವಣೆ, ಮತದಾರರ ನಾಡಿಮಿಡಿತ ಅರಿಯಲು ಬೇಕಾದ ಕೆಲಸ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

Key words : Karnataka-election-2023-bjp-big-plan-modi