ಬಿಜೆಪಿಯ ಗುಜರಾತ್, ಉತ್ತರ ಪ್ರದೇಶ ಪ್ರಯೋಗ ಕರ್ನಾಟಕದಲ್ಲಿ ಸಾಧ್ಯವೆ..?

ಬೆಂಗಳೂರು, ಏ.11, 2023 : (www.justkannada.in news ) ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಧರಿಸಿ, ಆಡಳಿತ ವಿರೋಧಿ ಅಲೆಯಲ್ಲಿ ಮಿಂದಿರುವ ಬಿಜೆಪಿ, ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಲು ಹಲವಾರು ಸರ್ಕಸ್ ಮಾಡಲು ಹೊರಟಿದೆ. ಮೇ 10 ರಂದು ನಿಗದಿ ಯಾಗಿರುವ ಚುನಾವಣೆಗೆ ಅಧಿಸೂಚನೆ ಹೊರಡಿಸಲು ಕೇವಲ ಒಂದು ದಿನ ಇರುವಾಗಲೂ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲಾ. ಇನ್ನೂ ಸಮಾಲೋಚನೆ ಸಭೆಗಳಲ್ಲೇ ಮುಳುಗಿದೆ.

ಹಳೆ ನೀರನ್ನು ಹೊರ ಹರಿಸಿ, ಹೊಸ ನೀರನ್ನು ತನ್ನ ಸರೋವರದೊಳಗೆ ಬಿಟ್ಟು ಕೊಳ್ಳುವ ಸಾಹಸಕ್ಕೆ ಕಮಲ ಪಾಳೆಯ ಬಿರುಸಿನ ಚಿಂತನೆ ನಡೆಸಿದ್ದು, ಬಂಡಾಯವನ್ನು ಹತ್ತಿಕ್ಕಲು ಬೇಕಾದ ಸಾಮಾಗ್ರಿಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುವ ಸಿಧ್ಧತೆಯಲ್ಲಿ ತೊಡಗಿದಂತಿದೆ. ಬಾಜಪ ಗುಜರಾತ್, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ದಲ್ಲಿ ಕೈಗೊಂಡ ಪ್ರಯೋಗಗಳನ್ನು ಕರ್ನಾಟಕದಲ್ಲಿ ಮಾಡಲು ಸಜ್ಜಾಗಿದೆ ಎಂಬುದು ಈಗಾಗಲೇ ಘಟಿಸುತ್ತಿರುವ ವಿದ್ಯಮಾನಗಳಿಂದ ವೇದ್ಯವಾಗುತ್ತಿದೆ.

ವಯಸ್ಸಿನ ಕಾರಣ ನೀಡಿ, ಆಡಳಿತ ವಿರೋಧಿ ಅಲೆ ಸಾಗಿಸಿಕೊಂಡು ಪಕ್ಷದವರಿಂದಲೇ ವಿರೋಧ ಅನುಭವಿಸುತ್ತಿರುವ ಹಾಗೂ ಭ್ರಷ್ಟಾಚಾರ ಇನ್ನಿತರ ಆರೋಪ ಎದುರಿಸುತ್ತಿರುವ ತನ್ನ ಶಾಸಕರಿಗೆ ಟಿಕೇಟ್ ನಿರಾಕರಿಸಲು ಪಕ್ಷ  ನಿರ್ದರಿಸಿದೆ. ಈ ಪ್ರಯೋಗದ ಮೊದಲ ಬಲಿ ಪಶು ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ಯಡಿಯೂರಪ್ಪ ನವರನ್ನು ಬಿಜೆಪಿ ನಿಕೃಷ್ಟವಾಗಿ ನಡೆಸಿಕೊಂಡು ಅಧಿಕಾರದಿಂದ ಪದಚ್ಯುತಿಗೊಳಿ, ನಂತರ ಮತ್ತೆ ಸ್ಪರ್ದಿಸಲು ಅವಕಾಶ ಇಲ್ಲಾ ಎಂಬ ಸಂದೇಶ ರವಾನಿಸಿ ಯಶಸ್ವಿಯಾಯಿತು.

ಈಗ ಕಮಲ ಪಡಸಾಲೆಯಲ್ಲಿ ಹಿರಿಯರಿಗೆ, ಕಳಂಕಿತರಿಗೆ ಟಿಕೇಟ್ ಇಲ್ಲಾ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ದಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್, ಅಥಣಿಯಲ್ಲಿ ಲಕ್ಷಣ ಸವದಿ, ಸಿಡಿ ಕುಖ್ಯಾತಿ ಯ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಶಿವಮೊಗ್ಗದ ಹಿರಿಯ ನಾಯಕ, ನಲವತ್ತು ಪರ್ಸೆಂಟ್ ಕಮಿಷನ್ ಕೇಳಿದರು ಎಂಬ ಆರೋಪ ಹೊತ್ತು ಮಂತ್ರಿ ಗಿರಿ ಕಳೆದುಕೊಂಡ. ಕೆ ಎಸ್ ಈಶ್ವರಪ್ಪ, ಸುಳ್ಯದ ಅಂಗಾರ, ಮೂಡಿಗೆರೆಯ ಎಮ್ ಪಿ ಕುಮಾರಸ್ವಾಮಿ, ಕೊಡಗಿನ ಕೆ ಜಿ ಭೋಪಯ್ಯ, ಹರತಾಳು ಹಾಲಪ್ಪ, ಬಿ ಸಿ ನಾಗೇಶ, ಎಸ್ ಸುರೇಶ್ ಕುಮಾರ, ವಿಧಾನ ಸಭಾ ಅದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗೆ ಹಲವರಿಗೆ ಟಿಕೆಟ್ ನಿರಾಕರಿಸಲಾಗುತ್ತೆ ಎಂಬ ಸುದ್ದಿ ಇದೆ.

ಜಗದೀಶ್ ಶೆಟ್ಟರಿಗೆ ಇನ್ನೂ ಎಪ್ಪತ್ತು ವರ್ಷ ಆಗಿಲ್ಲಾ. ಆದರೆ ಅವರು 2013 ರಲ್ಲಿ ಮುಖ್ಯ ಮಂತ್ರಿ ಯಾಗಿದ್ದಾಗ ಪಕ್ಷ ಅಧಿಕಾರ ಕಳೆದುಕೊಂಡಿತ್ತು. ಅವರಿಗೆ ಪಕ್ಷವನ್ನು ಮುನ್ನಡೆ ಸುವ ವರ್ಚಿಸ್ಸಿಲ್ಲ. ಅವರು ಗೆಲ್ಲ ಬಲ್ಲರು ಅಷ್ಟೇ.  ಇನ್ನು ಈ ಸರ್ಕಾರ ಬರಲು ಕಾರಣರಾದ ರಮೇಶ್ ಜಾರಕಿಹೊಳಿಗೂ ಟಿಕೆಟ್ ಇಲ್ಲಾ. ಸಿಡಿ ಹಗರಣದಲ್ಲಿ ಪಕ್ಷ ಮತ್ತು ಸರ್ಕಾರ ಅವರಿಂದ ಅನುಭವಿಸಿದ ಮುಜುಗರ ಹೇಳತೀರದ್ಷ್ಟು.

ಹೊಸ ಪ್ರಯೋಗ ನಡೆಸುವುದು ಒಳ್ಳೆಯದೇ. ಆದರೆ ಕರ್ನಾಟಕದಲ್ಲಿ ಬಾಜಪ ಯಾವುದೇ ಸಿಧ್ಧತೆ ಇಲ್ಲದೆ ದಿಢೀರನೆ ಪ್ರಯೋಗ ಕ್ಕೆಮುಂದಾದರೆ ಅದು ಫಲ ಕೊಡುವುದೇ?

ಗುಜರಾತಿನ ಸ್ಥಿತಿಯೇ ಬೇರೆ, ಕರ್ನಾಟಕದ ಪರಿಸ್ಥಿತಿಯೇ ಬೇರೆ. ಗುಜರಾಥ್ನಲ್ಲಿ ಬಿಜೆಪಿಗೆ ಪ್ರತಿ ಸ್ಪರ್ಧಿಯೇ ಇರಲಿಲ್ಲಾ. ಅಲ್ಲಿ ಕಮಲ ಪಕ್ಷ ಆಡಿದ್ದೇ ಆಟ. ಹಿಮಾಚಲದಲ್ಲಿ ನಡೆದ ಪ್ರಯೋಗ ಪಕ್ಷಕ್ಕೆ ತಿರುಗುಬಾಣವಾಗಿ, ಅಧಿಕಾರ ಕಳೆದುಕೊಂಡಿದೆ. ಉತ್ತರ ಪ್ರದೇಶದ ಪರಿಸ್ಥಿತಿಯನ್ನು ನಮ್ಮ ರಾಜ್ಯಕ್ಕೆ ಹೋಲಿಕೆ ಸಾಧುವಲ್ಲಾ. ಕರ್ನಾಟಕದಲ್ಲಿ ಯಾವ ಯೋಗಿ ಅದಿತ್ಯಾನಾಥ ಇಲ್ಲ.

ಇನ್ನು ಬಿಜೆಪಿ ಹಿರಿಯ ಸಚಿವ ಶಾಸಕರಿಗೆ ಟಿಕೇಟ್ ನಿರಾಕರಿಸಿ, ಪಕ್ಷದ ಕಾರ್ಯ ಕರ್ತರಿಗೆ ಮಣೆ ಹಾಕುತ್ತಿಲ್ಲ. ಬದಲಿಗೆ ಆ ಶಾಸಕರುಗಳು ಕರಳ ಕುಡಿಗಳಿಗೆ ಟಿಕೇಟ್ ನೀಡುತ್ತಿದೆ. ಬಿಜೆಪಿ ವಂಶ ಪಾರಂಪರ್ಯ ಆಡಳಿತಕ ವಿರೋಧಿ ಎಂದು ಹೇಳುವ ಎಲ್ಲಾ ಅರ್ಹತೆಯನ್ನು ಕಳೆದುಕೊಂಡಿದೆ.

ಆಡಳಿತ ವಿರೋಧಿ ಅಲೆ ಜೊತೆಗೆ, ಬಂಡಾಯದ ಬಿಸಿ. ಕಮಲವನ್ನು ಮತ್ತೆ ಅರಳಿಸಲು ಸಾಧ್ಯವೇ? ಕಾದು ನೋಡೋಣ.

M.SIDDARAJU, SENIOR JOURNALIST
  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

key words : karnataka-election.2023-gujararth-up-model-bjp