ಮೈಸೂರು, ಏ.02, 2023 : (www.justkannada.in news) ತಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಬಯಸಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್ ನಿರಾಶೆಯ ನಡುವೆ ತಂದೆ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ತಿ.ನರಸೀಪುರ ಜತೆಗೆ ನಂಜನಗೂಡು ಕ್ಷೇತ್ರದಲ್ಲೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಸುನಿಲ್ ಬೋಸ್ ಮತ್ತೆ ಐದು ವರ್ಷಗಳ ಅಥವಾ ಲೋಕಸಭಾ ಚುನಾವಣೆ ತನಕ ಕಾಯುವುದು ಅನಿಚಾರ್ಯವಾಗಿದೆ.
೨೦೧೩ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮುಂದಾದರೂ ಅಂತಿಮ ಕ್ಷಣದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಟಿಕೆಟ್ ಕೊಡಲಾಗಿತ್ತು. ಹೀಗಾಗಿ, ಬೇಸರಗೊಂಡರೂ ೨೦೧೬ರ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲವೇ ತಿಂಗಳಲ್ಲಿ ಮಿಂಚಿನ ಸಂಚಾರ ಮಾಡಿ ಪ್ರಚಾರ ಮಾಡಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ಕೈ ಟಿಕೆಟ್ ಮಿಸ್ ಆಗಿತ್ತು.
೨೦೧೮ರಲ್ಲಿ ಮಹದೇವಪ್ಪ ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ,ನರಸೀಪುರದಲ್ಲಿ ಬೋಸ್‌ಗೆ ಅವಕಾಶ ಅವಕಾಶ ದೊರೆಯಬಹುದೆಂದು ಹೇಳಲಾಗಿತ್ತಾದರೂ ಮೂರನೇ ಬಾರಿಗೆ ಕೈತಪ್ಪಿತ್ತು. ಈಗ ಮತ್ತೊಮ್ಮೆ ೨೦೨೩ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರಕ್ಕೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಡಾ.ಎಚ್.ಸಿ.ಮಹದೇವಪ್ಪ ಅರ್ಜಿ ಸಲ್ಲಿಸದೆ ಇರುವ ಜತೆಗೆ ಪುತ್ರನಿಗೆ ಬಿಟ್ಟುಕೊಡಲು ಚುನಾವಣಾ ಕಣದಿಂದ ದೂರ ಉಳಿಯಲು ಚಿಂತನೆಯಲ್ಲಿದ್ದರು. ಹೀಗಾಗಿ, ಸುನಿಲ್ ಬೋಸ್ ಅವರಿಗೆ ಟಿಕೆಟ್ ಗ್ಯಾರಂಟಿ ಎನ್ನುವಾಗಲೇ, ಅನಿವಾರ್ಯ ಕಾರಣಗಳಿಂದ ಮತ್ತೆ ಡಾ.ಎಚ್‌ಸಿಎಂಗೆ ಪಕ್ಷದ ಟಿಕೆಟ್ ಲಭಿಸಿದೆ.
ಇದೀಗ ಈ ಎಲ್ಲ ನಿರಾಸೆಯನ್ನು ಬದಿಗೊತ್ತಿ, ತಂದೆ ಪರವಾಗಿ ಅಖಾಡಕ್ಕೆ ಇಳಿದಿದ್ದು. ತಿ.ನರಸೀಪುರ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ತಂದೆಯ ಗೆಲುವಿಗೆ ಮುಂದಾಗಿದ್ದಾರೆ ಬೋಸ್.
ಅಯೂಬ್‌ಖಾನ್‌ಗೂ ನಿರಾಶೆ:
ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಯೂಬ್ ಖಾನ್‌ಗೂ ಇನ್ನಿಲ್ಲದ ನಿರಾಶೆಯಾಗಿದೆ. ಕಳೆದ ಬಾರಿಯೇ ಟಿಕೆಟ್‌ಗೆ ಪೈಪೋಟಿ ನೀಡಿದ್ದ ಅಯೂಬ್ ಖಾನ್ ಅವರು ಟಿಕೆಟ್ ಸಿಗದಿದ್ದರಿಂದ ಜಾ.ದಳದ ಅಭ್ಯರ್ಥಿಯಾಗಲು ಹೊರಟಿದ್ದರು.ಆದರೆ, ಸಿದ್ದರಾಮಯ್ಯ, ಮನವೊಲಿಸಿ ಮುಂದಿನ ಬಾರಿ ಅವಕಾಶ ಕೊಡುವ ಆಶ್ವಾನೆ ನೀಡಿದ್ದರಿಂದ ಸುಮ್ಮನಾಗಿದ್ದರು.
ಈ ಬಾರಿಯ ಚುನಾವಣೆಯಲ್ಲಿ ತನ್ವೀರ್‌ಸೇಠ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸುವ ಮಾತನ್ನಾಡಿ ಹೈಕಮಾಂಡ್‌ಗೆ ಪತ್ರ ಬರೆದು ಸಂಚಲನಕ್ಕೆ ಕಾರಣವಾಗಿದ್ದರು. ಹೀಗಿದ್ದರೂ, ತನ್ವೀರ್‌ಸೇಠ್‌ಗೆ ಮಣೆ ಹಾಕಿರುವುದರಿಂದ ಮತ್ತೊಮ್ಮೆ ಅಯೂಬ್ ಖಾನ್‌ಗೆ ಕೈ ಟಿಕೆಟ್ ತಪ್ಪಿದೆ. ಇದರಿಂದಾಗಿ ಬೇರೆ ಪಕ್ಷಕ್ಕೆ ಸೇರಬೇಕೋ ಅಥವಾ ಉಳಿಯಬೇಕೋ ಎನ್ನುವ ಚಿಂತನೆಯಲ್ಲಿದ್ದು, ಅವರ ಬೆಂಬಲಿಗರು ಜಾ.ದಳದಿಂದ ಸ್ಪರ್ಧಿಸುವಂತೆ ಒತ್ತಡ ಹೇರಿರುವುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ಐಶ್ವರ್ಯ ಇಕ್ಕಟ್ಟಿನಲ್ಲಿ :
ಅದೇ ರೀತಿ ಕೆ.ಆರ್.ನಗರ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ಎಐಸಿಸಿ ವಕ್ತಾರರಾದ ಐಶ್ವರ್ಯ ಮಹದೇವ್ ಅವರಿಗೂ ಟಿಕೆಟ್ ಕೈತಪ್ಪಿದ್ದು, ಇವರಿಗೂ ಬಿಜೆಪಿ ಗಾಳ ಹಾಕಿ ಕುಳಿತಿದೆ. ಬಿಜೆಪಿ ಮೂಲಗಳ ಪ್ರಕಾರ ಕೆ.ಆರ್.ನಗರ ಬದಲಿಗೆ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಟಿಕೆಟ್ ಕೊಡುವುದಕ್ಕೆ ಸಮ್ಮತಿಸಿದರೂ, ಐಶ್ವರ್ಯ ಮಾತುಕತೆಗೆ ಮುಂದಾಗದೆ ಇರುವುದು ಕೇಳಿಬಂದಿದೆ.
Key words : Karnataka-election-2023-mysore-congress-bjp-jds