ತೆರೆ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನ ತರಬಲ್ಲವೇ “ ಈಗ”

 

ಬೆಂಗಳೂರು, ಏ.06, 2023 : (www.justkannada.in news )  ಚುನಾವಣೆ ಬಂತೆಂದರೆ ಚಲನಚಿತ್ರ ಹಾಗೂ ಕಿರುತೆರೆಯ ನಟರಿಗೆ ರಾಜಕೀಯ ಪಕ್ಷಗಳಿಂದ ಬೇಡಿಕೆ ಬರುವುದು ಸಾಮನ್ಯ. ಅದು ಇದುವರೆಗಿನ ಎಲ್ಲಾ ಚುನಾವಣೆಗಳಲ್ಲಿ ಸಾಬೀತಾಗಿದೆ. ರಾಜಕೀಯ ಪಕ್ಷಗಳಲ್ಲಿ ಚಿತ್ರ ನಟರುಗಳನ್ನು ಪ್ರಚಾರಕ್ಕೆ ಕರೆತಂದರೆ ಅವರನ್ನು ನೋಡಲು ಜನ ಮುಗಿ ಬೀಳುತ್ತಾರೆ, ಅವರ ಅಭಿಮಾನಿಗಳು ಮತ ಹಾಕುವರು ಎಂಬ ಲೆಕ್ಕಚಾರದಲ್ಲೇ ಮುಳುಗಿದ್ದಾರೆ. ಒಂದಂಥೂ ಸತ್ಯ. ನಟರು ಪ್ರಚಾರಕ್ಕೆ ಬೀದಿಗಿಳಿದರೆ, ಅವರನ್ನು ನೋಡಲು ಬರುವ ಮಂದಿಗೆ ಕೊರತೆ ಯೇನೂ ಇಲ್ಲಾ. ಯುವಕ ಯುವತಿಯರಂತೂ ತಮ್ಮ ನೆಚ್ಚಿನ ನಟರನ್ನು ಕಂಡು, ಕೈ ಕುಲುಕಲು ಉತ್ಸುಕರಾಗಿ ಕಾದಿರುತ್ತಾರೆ. ಅಂತಹ ಅಭಿಮಾನಿಗಳನ್ನು ನೋಡಿ ಆ ನಟ, ನಟಿಯರು ಸಹ ಖುಷಿಯಿಂದ ಪ್ರಚಾರದಲ್ಲಿ ತೊಡಗುತ್ತಾರೆ.

ಪ್ರಚಾರವೇನೊ ಅಬ್ಬರವಾಗಿರುತ್ತದೆ. ಆದರೆ ಅದೇ ಅಬ್ಬರದಲ್ಲಿ, ಮತ ಬರುವುದೇ, ಎಂಬ ಪ್ರಶ್ನೆಗೆ ಉತ್ತರ ನಕಾರಾತ್ಮಕ.  ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಪ್ರಮುಖ ನಟ ನಟಿಯರಿಗೆ ಗಾಳ ಹಾಕಿ, ತಮ್ಮ ತಮ್ಮ ಪಕ್ಷದ ಪರ ಪ್ರಚಾರಕ್ಕಿಳಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ, ಇನ್ನೂ ಮುಂದೆಯೂ ಇರುತ್ತದೆ. ನಟರ ಯಾ ನಟಿ ಮಣಿಯರು ತಮ್ಮ ಪಕ್ಷದ ಮತ ಬುಟ್ಟಿ ಗೆ ಮತ ತಂದು ಸುರಿದು ಬಿಡುವರು ಎಂಬ ಭ್ರಮೆ ಯಾವ ಪಕ್ಷದವರಿಗೂ ಇಲ್ಲಾ. ಎಲ್ಲರಿಗೂ ಗೊತ್ತು, ತೆರೆಯ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನಲ್ಲಾ ಎಂದು.

ಹಾಗಾದರೆ ಚಲನಚಿತ್ರ ರಂಗದ ದಿಗ್ಗಜರು ರಾಜಕೀಯದಲ್ಲಿ ಯಶಸ್ಸು ಸಾಧಿಸಿಲ್ಲವೇ? ಸಾಧಿಸಿದ್ದಾರೆ, ಅವರ ಸಂಖ್ಯೆ ಬೆರಳಿಕೆಯಷ್ಟು. ಆಂದ್ರಪ್ರದೇಶದ ಎನ್ ಟಿ ರಾಮರಾವ್, ತಮಿಳುನಾಡಿನ ಎಂ ಜಿ ರಾಮಚಂದ್ರನ್, ಕರ್ನಾಟಕದಲ್ಲಿ ಜನಿಸಿ ತಮಿಳುನಾಡು ಆಳಿದ ಜಯಲಲಿತ, , ರೆಬೆಲ್ ಸ್ಟಾರ್ ಅಂಬರೀಶ್, ಸಿ ಪಿ ಯೋಗೇಶ್ವರ್, ಜಗ್ಗೇಶ್, ಮುಖ್ಯ ಮಂತ್ರಿ ಚಂದ್ರು, ಶಶಿಕುಮಾರ್, ಉಮಾಶ್ರೀ .

ರಾಜಕೀಯದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ತಮ್ಮ ಸಿನಿಮಾ ವರ್ಚಸ್ಸನ್ನು ಪಣಕ್ಕಿಟ್ಟು ಸೋತವರಿಗೇನೂ ಬರವಿಲ್ಲಾ. ಉದಹರಿಸಬಹುದಾದ ಕೆಲವು ಹೆಸರುಗಳೆಂದರೆ, ಬಹು ಭಾಷ ನಟ ಕಮಲ ಹಾಸನ್, ಪ್ರಕಾಶ್ ರೈ, ಚಿರಂಜೀವಿ, ಪವನ್ ಕಲ್ಯಾಣ್. ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಣೆ ಮಾಡಿಕೊಂಡು ಕಾಲ ಕಳೆದು ನಂತರ ಹಿಂದೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್ ಸಹ ಇದ್ದಾರೆ.    ತಮಿಳುನಾಡಿನ ನಟ ವಿಜಯಕಾಂತ್ ಸ್ವಲ್ಪಮಟ್ಟಿಗೆ ಯಶಸ್ಸು ಕಂಡರೂ, ಅವರ ಪಕ್ಷವನ್ನು ಅಧಿಕಾರದ ಗದ್ದುಗೆಗೆ ತರಿಸಲಾಗಲಿಲ್ಲಾ.

ಕನ್ನಡದ ಮೇರು ನಟ ರಾಜ್ಕುಮಾರ್ ನಟರಲ್ಲೇ ಮೇರು ಪಂಕ್ತಿಯಲ್ಲಿ ಇರುವರು. ಅವರನ್ನು ರಾಜಕೀಯಕ್ಕೆ ಎಳೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸಿದ ಯಾರಿಗೂ ಅವರು ಮಣೆ ಹಾಕಲಿಲ್ಲಾ. ಗೋಕಾಕ್ ಚಳುವಳಿಯ ನಂತರದಲ್ಲಿ ರಾಜಣ್ಣನವರನ್ನು ಚುನಾವಣೆ ಕಣಕ್ಕಿಳಿಸುವ ಅನೇಕ ಪ್ರಯತ್ನ ಗಳು ನಡೆದವು. 1977 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದಿರಾಗಾಂಧಿ ವಿರುಧ್ದ ಸ್ಪರ್ದಿಸುವಂತೆ ಪ್ರಚೋದಿಸುವ ಕೆಲಸವೂ ನಡೆಯಿತು. ಆದರೆ ರಾಜ್ ಕುಮಾರ್ ಇಂತಹ ಪಿತೂರಿಗೆ ಬಲಿಯಾಗಲಿಲ್ಲಾ. ಇಂದಿರಾಗಾಂಧಿ ವಿರುದ್ಧ ಕಣಕ್ಕಿಳಿಯದಂತೆ ರಾಜ್ ಮನವೊಲಿಸಿದವರು ಎಂಜಿಆರ್.

ಸಾಮಾನ್ಯವಾಗಿ ಪ್ರಮುಖ ಚಿತ್ರ ನಟನಟಿಯರು ಇಂತಿಂತ ಪಕ್ಷದ ಪರವಾಗಿ ಪ್ರಚಾರ ಮಾಡುವರು ಎಂಬ ಸುದ್ದಿ ಕೆಲ ದಿನ ರಾರಾಜಿಸಿ ಮರೆಯಾಗಿ ಬಿಡುತ್ತದೆ. 2019 ರಲ್ಲಿ ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್ ಸ್ಪರ್ದಿಸಿದಾಗ, ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ಮಾತ್ರ ನಡೆಸಲಿಲ್ಲಾ. ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವಂತೆ ಮಾಡಿದರು. ಇದಕ್ಕೆ ಕಾರಣ, ಮಂಡ್ಯ ಮತದಾರರ ಸ್ವಾಭಿಮಾನ.  ಎಲ್ಲದಕ್ಕೂ ಮೇಲಾಗಿ ಮಂಡ್ಯದ ಜಿಲ್ಲೆಗೆ ಹೊರಗಿನವರೊಬ್ಬರು ತಮ್ಮ ಜಿಲ್ಲೆಯ ಸೊಸೆಯ ವಿರುದ್ಧ ಸೆಣಸಲು ಹೊರಟಿದ್ದು ಜನರಿಗೆ ಅಪಥ್ಯವಾಗಿಬಿಟ್ಟುತು. ಈ ಕಾರಣಕ್ಕೆಸುಮಲತಾ ರನ್ನು ಗೆಲ್ಲಿಸಿದರು.

ಇಷ್ಟಲ್ಲಾ ವಿಷಯ ಪ್ರಸ್ತಾಪಿಸಿದ ಕಾರಣ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಬೆಂಬಲಿಸುವ ಘೋಷಣೆ ಮಾಡಿದ ಕಾರಣ. ಸುದೀಪ್ ರವರು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು, ಯಾವ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂಬ ನಿರ್ಧಾರ ಅವರ ವ್ಯಯುಕ್ತಿಕ. ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ.  ಸುದೀಪ್ ಎಂಬ ದೊಡ್ಡ ಮಟ್ಟದ ನಾಯಕ ನಟ. ಕನ್ನಡದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದವರು. ಅವರು ಯಾರ ಪರ ನಿಂತರೂ, ಯಾವುದೇ ಪಕ್ಷದ ಪರ ಪ್ರಚಾರ ಕೈ ಗೊಂಡರೂ ಅದು ದೊಡ್ಡ ಸುದ್ದಿ ಯಾಗುವುದರಲ್ಲಿ ಅನುಮಾನವಿಲ್ಲಾ. ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಸುದೀಪ್ ರವರೆ ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ, ಹಾಗೂ ಅವರು ಸೂಚಿಸುವವರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದರು. ವಿಷಯ ಏನೇ ಇರಲಿ, ಅವರು ಬಿಜೆಪಿ ಪರ ಪ್ರಚಾರಕರಾದರು. ಬೊಮ್ಮಾಯಿಯವರು ಬಿಜೆಪಿ ಪಕ್ಷದರನ್ನು ಬಿಟ್ಟು ಬೇರೇಯವರ ಹೆಸರು ಹೇಳಲು ಸಾದ್ಯವೇ?

ಇಂತಹ ನಟನ ಘೋಷಣೆ ಯ ನಂತರ ಜಾತಿ ತಳುಕು ಹಾಕಿಕೊಂಡಿದ್ದು ವಿಪರ್ಯಾಸವೇ ಸರಿ. ನಟರಿಗೆ ಜಾತಿ ಇಲ್ಲಾ. ಅವರು ರಾಜ್ಯದ,  ರಾಷ್ಟದ ಆಸ್ತಿ. ಅವರಿಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿರುತ್ತಾರೆ. ಅವರಿಗೇಕೆ ಜಾತಿಯ ಲೇಪನ.      ಸುದೀಪ್ ನಡೆ ಅವರು ಸೇರಿದ ಜಾತಿ ಎರಡೂ ಈಗ ಬೆಸೆದುಕೊಂಡಿವೆ.

ಬಿಜೆಪಿಗೆ ಎಷ್ಟು ಲಾಭ ಎಂಬುದು ಚುನಾವಣೆಯ ನಂತರ ವಷ್ಟೇ ಅಂದಾಜಿಸಬಹುದು. ಮುಖ್ಯವಾಗಿ, ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ 22000 ಕ್ಕೂ ಹೆಚ್ಚು ನಾಯಕ ಸಮುದಾಯದ ಮತಗಳಿವೆ. ಇದರ ಮೇಲೆ ಕಣ್ಣಿಟ್ಟು ಬೊಮ್ಮಾಯಿ ಸುದೀಪ್ ರನ್ನು ತಮ್ಮ ಪರ ಪ್ರಚಾರಕ್ಕೆ ಮನವೊಲಿಸಿರಬಹುದೇ?   ಕಾದು ನೋಡೋಣ.

M.SIDDARAJU, SENIOR JOURNALIST
  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

Key words : Karnataka-election-2023-sudeep-bjp-support