ಬೆಂಗಳೂರು:ಮೇ-7: ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಎಂಬ ಹೋರಾಟ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ನಡೆದಿದ್ದರೆ, ಇತ್ತ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಎಂಬುದು ಮಾತ್ರ ಕನ್ನಡಿಯೊಳಗಿನ ಗಂಟು ಆಗಿದೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಬದಲಾಗಿ ಆದ್ಯತೆ ನೀಡುವ ಬಗ್ಗೆ ಕುಮಾರಸ್ವಾಮಿ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಕಾರ್ವಿುಕ ಇಲಾಖೆ ಜಾರಿಗೆ ತರಲು ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಕೇವಲ ಆಕ್ಷೇಪಣೆ ಕರೆಯುವುದಕ್ಕೆ ಮಾತ್ರ ಸೀಮಿತ ಮಾಡಿದೆ. ಮೀಸಲಾತಿ ಕಡ್ಡಾಯ ಮಾಡದೆ ಆದ್ಯತೆ ಎಂದು ಹೇಳಿರುವುದು ಹಾಗೂ ಕನ್ನಡಿಗರೆಂಬುದಕ್ಕೆ 7 ವರ್ಷ ವಾಸವಿದ್ದರೆ ಸಾಕು ಎಂಬುದಕ್ಕೆ ಸಾಕಷ್ಟು ಆಕ್ಷೇಪಣೆಗಳು ಬಂದಿವೆ. ಅವುಗಳ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಮತ್ತೆ ಸಚಿವ ಸಂಪುಟದ ಮುಂದೆ ಕಡತ ಮಂಡಿಸಬೇಕೆ? ವಿಧೇಯಕ ರೂಪಿಸಿ ಅಧಿವೇಶನದಲ್ಲಿ ಮಂಡಿಸಬೇಕೆ? ಅಥವಾ ನೇರವಾಗಿ ಬಜೆಟ್ ಕಾರ್ಯಕ್ರಮವೆಂದು ಜಾರಿಗೆ ತರಬೇಕೆ ಎಂಬ ಬಗ್ಗೆ ಸರ್ಕಾರದಲ್ಲಿಯೇ ಸ್ಪಷ್ಟತೆ ಇಲ್ಲವೆಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಈ ಕಡತ ಮೂಲೆ ಸೇರಿದೆ.
ಹಿಂದಿ ಲಾಬಿ: ರಾಜ್ಯದಲ್ಲಿ ಹಿಂದಿ ಲಾಬಿ ಬಲವಾಗಿರುವ ಕಾರಣ ಕನ್ನಡೇತರರು ಸುಲಭವಾಗಿ ಉದ್ಯೋಗ ಗಿಟ್ಟಿಸುತ್ತಿದ್ದಾರೆ. ಕನ್ನಡಿಗರೆಂದರೆ ಯಾರು ಎಂಬುದಕ್ಕೆ ಕರ್ನಾಟಕದಲ್ಲಿ 7 ಅಥವಾ 10 ವರ್ಷ ವಾಸವಾಗಿರುವವರು ಎಂಬ ನಿಯಮಗಳನ್ನು ಇಲಾಖೆವಾರು ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ. ಆದ್ದರಿಂದಲೇ ಇತ್ತೀಚೆಗೆ ಬೆಸ್ಕಾಂನಲ್ಲಿ 64 ಜನ ಕನ್ನಡೇತರರು ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಗಿಟ್ಟಿಸಿದ್ದಾರೆ. ಇದೀಗ 3,500 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅದನ್ನು ಸ್ಪಷ್ಟ ನಿಯಮಗಳನ್ನು ರೂಪಿಸುವ ಕಾರಣಕ್ಕೆ ಮುಂದೂಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಾಯ ತಂದರೂ ಉಪಯೋಗವಾಗಿಲ್ಲ ಎಂದು ಮೂಲಗಳು ಹೇಳುತ್ತವೆ.
ಮಹಿಷಿ ವರದಿಯೇ ಪರಿಹಾರ
ಕನ್ನಡಿಗರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಸರೋಜಿನಿ ಮಹಿಷಿ ವರದಿಯನ್ನು ಹಿಂದಿನ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಪರಿಷ್ಕರಣೆ ಮಾಡಿದೆ. ಅದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಭಾಷಾ ಕಾಯ್ದೆ ಹಾಗೂ ಉದ್ಯೋಗ ನೀತಿ ರೂಪಿಸುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಶಿಫಾರಸು ಮಾಡಿದೆ. ಅವು ಜಾರಿಯಾದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವ ಸಾಧ್ಯತೆಗಳಿವೆ. ಆದರೆ ಆ ವರದಿಯನ್ನೇ ಯಾರೊಬ್ಬರೂ ಕಣ್ಣೆತ್ತಿ ನೋಡುತ್ತಿಲ್ಲ.
ಬೇರೆ ರಾಜ್ಯಗಳ ಪ್ರಯತ್ನ
ರಾಜ್ಯದ ರೀತಿಯಲ್ಲಿಯೇ ಒರಿಸ್ಸಾ, ಮಹಾರಾಷ್ಟ್ರ, ಉತ್ತರಾಂಚಲ, ಉತ್ತರಕಾಂಡ, ಹಿಮಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಲ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಮತ್ತು ಅಸ್ಸಾಂಗಳಲ್ಲೂ ಸ್ಥಳೀಯರಿಗೆ ಉದ್ಯೋಗದ ದನಿ ಕೇಳಿಬರುತ್ತಿದೆ. ಅಲ್ಲಿನ ಸರ್ಕಾರಗಳು ಪ್ರಯತ್ನ ಆರಂಭಿಸಿವೆ.
ರಾಜ್ಯ ಸರ್ಕಾರಕ್ಕೆ ಶಿಫಾರಸು
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕೆ ಕ್ಯಾಂಪಸ್ ಸೆಲೆಕ್ಷನ್ ಕಡ್ಡಾಯ.
ರಾಜ್ಯದ ಬ್ಯಾಂಕ್ಗಳಲ್ಲಿ ಗುಮಾಸ್ತರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯ.
ರಾಜ್ಯದಲ್ಲಿರುವ ಸರ್ಕಾರಿ ಉದ್ದಿಮೆಗಳಲ್ಲಿ ಹೊರ ರಾಜ್ಯದವರ ನೇಮಕಕ್ಕೆ ಸರ್ಕಾರದ ಅನುಮತಿ ಕಡ್ಡಾಯ.
ಅಂಪ್ರೆಂಟಿಸ್ಗಳ ಆಯ್ಕೆಯಲ್ಲಿ ಹೊರ ರಾಜ್ಯದವರ ನೇಮಕ ತಪ್ಪಿಸಲು ರಾಜ್ಯದ ಎಸ್ಎಸ್ಎಲ್ಸಿ ಕಡ್ಡಾಯ.
ಗುತ್ತಿಗೆ ನೇಮಕದಲ್ಲೂ ಕನ್ನಡಿಗರ ನೇಮಕ.
ಯಾವುದೇ ಉದ್ದಿಮೆಯಲ್ಲಿ 100 ಹುದ್ದೆಗೆ ನೇಮಕ ನಡೆದರೆ ಆಯ್ಕೆ ಸಮಿತಿಯಲ್ಲಿ ಕನ್ನಡದ ಪ್ರತಿನಿಧಿ.
ಕೇಂದ್ರ ಸರ್ಕಾರದ ಎಂಪ್ಲಾಯ್ಮೆಂಟ್ ನ್ಯೂಸ್ ಮಾದರಿ ರಾಜ್ಯ ಸರ್ಕಾರದಿಂದಲೂ ವೆಬ್ ಪೋರ್ಟಲ್ ಆರಂಭ.
ಸ್ಥಳೀಯರೆಂದು ಪರಿಗಣಿಸಲು 15 ವರ್ಷ ವಾಸ ಕಡ್ಡಾಯ ಮಾಡುವುದು.
ಕೇಂದ್ರ ಸರ್ಕಾರಕ್ಕೆ ಶಿಫಾರಸು
ಸ್ಪಷ್ಟ ಉದ್ಯೋಗ ನೀತಿ
ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕ್ ಪರೀಕ್ಷೆ
ಸಿ ಮತ್ತು ಡಿ ಹುದ್ದೆಗಳು ಸ್ಥಳೀಯರಿಗೆ ಮೀಸಲು.
ಎಸ್ಎಸ್ಸಿ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿದ್ದು ಅಲ್ಲಿ ಹಿಂದಿ, ಇಂಗ್ಲಿಷ್ ಬಳಕೆ ಬಿಟ್ಟು ಕನ್ನಡ ಕಡ್ಡಾಯ.
ಕನ್ನಡಿಗರಿಗೆ ಉದ್ಯೋಗ ಎಂಬ ಜಾಲತಾಣ ಗಳಲ್ಲಿನ ಹೋರಾಟ ಸ್ವಾಗತರ್ಹ, ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲೂ ನೀಡಿರುವ ಶಿಫಾರಸುಗಳ ಜಾರಿ ಇದಕ್ಕೆ ಪರಿಹಾರ. ಸರ್ಕಾರ ಹಿಂದಿ ಲಾಬಿಗೆ ಮಣಿಯದೆ ಈ ಕೆಲಸ ಮಾಡಬೇಕಾಗಿದೆ.
| ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕೃಪೆ:ವಿಜಯವಾಣಿ