ಅಪಾಯ ಸ್ಥಳದಿಂದ 120 ಕುಟುಂಬಗಳ ಸ್ಥಳಾಂತರ: ಕೊಡಗಿನ ಅಯ್ಯಪ್ಪ ಬೆಟ್ಟದಲ್ಲಿ ಭಾರಿ ಬಿರುಕು

ಕೊಡಗು:ಆ-16: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಯ್ಯಪ್ಪ ಬೆಟ್ಟದಲ್ಲಿ ಭಾರಿ ಬಿರುಕು ಕಂಡ ಹಿನ್ನೆಲೆ ಸುತ್ತಮುತ್ತಲ 120 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಬಿರುಕು ಬಿಟ್ಟ ಜಾಗದಲ್ಲಿ ನೀರು ಸರಾಗವಾಗಿ ಒಳ ಹೋಗದಂತೆ ಎಂ ಸ್ಯಾಂಡ್​ನಲ್ಲಿ ತೇಪೆ ಹಾಕಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿದೆ. ಆದರೆ ಅಲ್ಲಲ್ಲಿ ಸಣ್ಣಪುಟ್ಟ ಬಿರುಕುಗಳು ಕಾಣಿಸುತ್ತಿವೆ. ವಾರದಿಂದ ಮಳೆ ಕಡಿಮೆಯಾಗಿದೆ. ಬೆಟ್ಟ ಕುಸಿದರೆ ಕೆಳಭಾಗದ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ.

ಊರೇ ಖಾಲಿ: ಬೆಟ್ಟದಲ್ಲಿ ಬಿರುಕು ಕಂಡ ಕೂಡಲೇ ಕುಸಿಯುವ ಭೀತಿಯಿಂದ ಅಯ್ಯಪ್ಪ ಬೆಟ್ಟ ಸೇರಿ ಉಳಿದ ಬೆಟ್ಟ ಪ್ರದೇಶವಾದ ಅರಸುನಗರ, ಮಲೆತೆರಿಕೆ ಬೆಟ್ಟ, ನೆಹರುನಗರದ ಜನರನ್ನು ಬಲವಂತವಾಗಿ ಖಾಲಿ ಮಾಡಿಸಲಾಗಿದೆ. ಬಹುತೇಕರು ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ತೆರಳಿದ್ದಾರೆ. ಉಳಿದವರು ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ.

ಪರಿಹಾರ ಕೇಂದ್ರ: ಬೆಟ್ಟ ಪ್ರದೇಶ ಹಾಗೂ ಅಪಾಯ ಇರುವ ಸ್ಥಳಗಳಿಂದ ಜನರನ್ನು ಚಿಕ್ಕಪೇಟೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 251, ಸಂತ ಅನ್ನಮ್ಮ ಕಟ್ಟಡದಲ್ಲಿ 534 ಜನರಿಗೆ ಆಶ್ರಯ ನೀಡಲಾಗಿದೆ. ವೈದ್ಯಕೀಯ ವ್ಯವಸ್ಥೆ ಸೇರಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಬೆಟ್ಟದಲ್ಲಿ ಬಿರುಕು ಕಂಡ ಸ್ಥಳದ ಮೇಲ್ಭಾಗದಲ್ಲಿ ಅಂದಾಜು 40 ಮನೆಗಳಿವೆ. 3 ಕುಟುಂಬ ಮಾತ್ರ ಖಾಲಿ ಮಾಡಿ ಪರಿಹಾರ ಕೇಂದ್ರಕ್ಕೆ ತೆರಳಿದ್ದಾರೆ. ಉಳಿದವರು ಅಲ್ಲಿಯೇ ಉಳಿದುಕೊಂಡಿದ್ದಾರೆ.

ಮನೆ ಬಾಡಿಗೆ ದುಪ್ಪಟ್ಟು

ವಿರಾಜಪೇಟೆ ಪಟ್ಟಣದ ಅರ್ಧಭಾಗ ಬೆಟ್ಟ ಪ್ರದೇಶಗಳಿಂದ ಕೂಡಿದ್ದು ಬಹುತೇಕ ಜನರು ಕೂಲಿ ಕಾರ್ವಿುಕರಾಗಿದ್ದಾರೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಬಲವಂತವಾಗಿ ಮನೆ ಖಾಲಿ ಮಾಡಿಸುತ್ತಿರುವುದರಿಂದ ಪರಿಹಾರ ಕೇಂದ್ರಕ್ಕೆ ತೆರಳಲಾಗದೆ ಬಹುತೇಕರು ಮನೆ ಖಾಲಿ ಮಾಡುತ್ತಿದ್ದಾರೆ. ಪಟ್ಟಣದಲ್ಲಿರುವ ಮನೆ ಮಾಲೀಕರು ಇಂತಹ ಸಮಯವನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ.

ಚಿಕ್ಕಮಗಳೂರಿಗೆ ಬರ್ಬೇಡಿ

ನೆರೆಹಾವಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಇನ್ನೂ ಮಳೆಯ ಮುನ್ಸೂಚನೆ ಇರುವ ಕಾರಣ ಪ್ರವಾಸಿಗರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು, ಆ.30ರವರೆಗೆ ದತ್ತಪೀಠ, ಮುಳ್ಳಯ್ಯನಗಿರಿ, ಕೆಮ್ಮಣ್ಣು ಗುಂಡಿಗೆ ಪ್ರವಾಸಿಗರ ವಾಹನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದವರು ಸದ್ಯಕ್ಕೆ ಮುಂದೂಡುವುದು ಒಳಿತು ಎಂದು ಡಿಸಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

ಮನೆ ಪಕ್ಕ ಬಿರುಕು ಬಿಟ್ಟ ಭೂಮಿ!

ಮಡಿಕೇರಿ: ಮನೆ ಪಕ್ಕದಲ್ಲಿ ಅಪಾಯಕಾರಿ ರೀತಿ ಭೂಮಿ ಬಿರುಕು ಬಿಟ್ಟಿದ್ದು, ಹಳೆಯ ಹಾಗೂ ಹೊಸ ಮನೆ ಒಳಗೆ ನೀರು ರಭಸವಾಗಿ ಹರಿದುಹೋಗುತ್ತಿದೆ. ಮರಂದೋಡ ಗ್ರಾಮದಲ್ಲಿ ನಡೆದಿರುವ ಈ ಪ್ರಾಕೃತಿಕ ವಿದ್ಯಮಾನದಿಂದ ಭಯಭೀತರಾಗಿರುವ ಐಯೆಟ್ಟಿ ರವಿ ಸುರೇಶ್ ಕುಟುಂಬ ಸದಸ್ಯರೊಂದಿಗೆ ಮನೆ ಖಾಲಿ ಮಾಡಿದ್ದಾರೆ. ಆ.5 ಮತ್ತು 6ರಂದು ಧಾರಾಕಾರವಾಗಿ ಸುರಿದ ಮಳೆಗೆ ಮನೆ ಅಂಗಳದಲ್ಲಿ ಭೂಮಿ ಕುಸಿಯಲಾರಂಭಿಸಿತು. ಪರಿಣಾಮ 5 ಅಡಿ ಅಗಲ, 20 ಅಡಿ ಅಳದ ಗುಂಡಿಯಾಗಿದೆ. ಮನೆ ಕೆಳಭಾಗದಲ್ಲಿ ರಭಸವಾಗಿ ನೀರು ಹರಿದು ಹೋಗುತ್ತಿದೆ. ಇದರಿಂದ ಆತಂಕಿತರಾದ ರವಿ ಪತ್ನಿಯೊಂದಿಗೆ ಆಪ್ತರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

50 ವರ್ಷದ ಹಿಂದೆ ಕಟ್ಟಿದ ಮನೆ ಸಮೀಪದಲ್ಲಿ 6 ಲಕ್ಷ ರೂ. ವಿನಿಯೋಗಿಸಿ ಸಹೋದರ ಹೊಸ ಮನೆ ಕಟ್ಟಿದ್ದಾರೆ. ಸರ್ಕಾರದ ಆಶ್ರಯ ಯೋಜನೆಯಡಿ ಮನೆ ಕಟ್ಟಿದ್ದು, ಸರ್ಕಾರದಿಂದ ಹಣ ಬಿಡುಗಡೆ ಆಗಬೇಕಾಗಿದೆ. ಗೃಹ ಪ್ರವೇಶ ಮಾಡುವ ಮುನ್ನವೇ ಮನೆ ಖಾಲಿ ಮಾಡುವಂತಾಗಿದೆ ಎಂದು ರವಿ ಸಹೋದರಿ ಮಾಲಾ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು. ಕುಂಜಿಲ- ಕಕ್ಕಬ್ಬೆ ಗ್ರಾಪಂ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಬ್ಬೆ ಬೆಟ್ಟದ ಹಿಂಭಾಗದ ಬಲ್ಯಾಟ್ರಿ ಫಾಲ್ಸ್ ಸಮೀಪದ ಬೆಟ್ಟ ಪ್ರದೇಶದಲ್ಲಿ ಈ ಮನೆ ಇದೆ.

ನದಿಯಲ್ಲಿ ಕೊಚ್ಚಿಹೋದ ಎತ್ತಿನ ಗಾಡಿಗಳು

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿದೆ ಎಂದು ಅಕ್ರಮವಾಗಿ ಮರಳು ತುಂಬುತ್ತಿದ್ದ ವೇಳೆ ಅಧಿಕ ನೀರು ಬಂದು 2 ಎತ್ತಿನ ಗಾಡಿಗಳು, 4 ಎತ್ತುಗಳು ಕೊಚ್ಚಿ ಹೋಗಿದ್ದು, ಕೊನೆಗೆ ಅವುಗಳು ಈಜಿ ದಡ ಸೇರಿವೆ. ತಾಲೂಕಿನ ಗಂಜಾಂನ ಚಂದಗಾಲು ರಸ್ತೆ ಸಮೀಪದ ನದಿಯಲ್ಲಿ ಗಂಜಾಂನ ಕರಿಯಪ್ಪ ಹಾಗೂ ಉಮಾಶಂಕರ್ ಗುರುವಾರ ಮಧ್ಯಾಹ್ನ ಮರಳು ತುಂಬುತ್ತಿದ್ದಾಗ ದಿಢೀರ್ ನೀರು ಹರಿದುಬಂದಿದೆ. ನೀರಿನ ರಭಸ ಕಂಡು ಎತ್ತು, ಗಾಡಿಯನ್ನು ಹೊರಗೆ ಸಾಗಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗದ ಹಿನ್ನೆಲೆ ಅವರಿಬ್ಬರು ಈಜಿ ದಡ ಸೇರಿದ್ದಾರೆ. ಆದರೆ, ನಾವು ಮರಳು ತೆಗೆಯುತ್ತಿರಲಿಲ್ಲ. ಜಮೀನಿಗೆ ಗೊಬ್ಬರ ಹಾಕಿ ಬರುತ್ತಿದ್ದಾಗ ಎತ್ತುಗಳು ಹಾಗೂ ಗಾಡಿ ತೊಳೆಯಲು ನೀರಿಗಿಳಿದಿದ್ದಾಗಿ ಉಮಾಶಂಕರ್ ಪೊಲೀಸರಿಗೆ ತಿಳಿಸಿದ್ದಾರೆ.

ಕೆಆರ್​ಎಸ್ ಡ್ಯಾಂ ಭರ್ತಿ

ಕೆಆರ್​ಎಸ್ ಅಣೆಕಟ್ಟೆ 124.80 ಅಡಿ ಭರ್ತಿಯಾಗಿದ್ದು, ನದಿಗೆ ಮತ್ತೆ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಬುಧವಾರ ಸಂಜೆ 23,187 ಕ್ಯೂಸೆಕ್ ಇದ್ದ ನೀರಿನ ಒಳಹರಿವಿನ ಪ್ರಮಾಣ ಗುರುವಾರ ಬೆಳಗ್ಗೆ 19,768 ಕ್ಯೂಸೆಕ್​ಗೆ ಇಳಿಯಿತು. ಸಂಜೆ 6 ಗಂಟೆ ವೇಳೆಗೆ ಸಂಪೂರ್ಣ ಭರ್ತಿಯಾಯಿತು.
ಕೃಪೆ:ವಿಜಯವಾಣಿ

ಅಪಾಯ ಸ್ಥಳದಿಂದ 120 ಕುಟುಂಬಗಳ ಸ್ಥಳಾಂತರ: ಕೊಡಗಿನ ಅಯ್ಯಪ್ಪ ಬೆಟ್ಟದಲ್ಲಿ ಭಾರಿ ಬಿರುಕು
karnataka-flood-kodagu-ayyappa-hills-landslide-krs-dam-heavy-rain-red-alert