ಬೆಂಗಳೂರು, ಜ21, 2022 : (www.justkannada.in news ) ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ ರಾಜ್ಯದ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ನ್ಯಾನೊ ಉಪಗ್ರಹವೊಂದನ್ನು ವಿನ್ಯಾಸಗೊಳಿಸಿ, ಉಡಾಯಿಸುವ ಯೋಜನೆಗೆ 1.90 ಕೋಟಿ ರೂ. ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದರ ಅಂಗವಾಗಿ ಬೆಂಗಳೂರಿನ ಆಯ್ದ ಒಂದು ಸರಕಾರಿ ಶಾಲೆಯಿಂದ ಪ್ರಾಯೋಗಿಕವಾಗಿ ನ್ಯಾನೊ ಉಪಗ್ರಹವನ್ನು ವಿನ್ಯಾಸಗೊಳಿಸಿ, ಉಡಾವಣೆ ಮಾಡಲಾಗುವುದು ಎಂದಿದ್ದಾರೆ.
ತಾಂತ್ರಿಕ ತಜ್ಞರ ಸಮಿತಿಯು ಯೋಜನೆಯ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲಿದ್ದು, ಕೆಜಿಎಸ್3ಸ್ಯಾಟ್ ಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜತೆಗೆ ಕೇಂದ್ರ ಸರಕಾರದ ಬಾಹ್ಯಾಕಾಶ ಇಲಾಖೆಯ `ಇನ್-ಸ್ಪೇಸ್’ ವಿಭಾಗವು ಕೂಡ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ. 9ರಿಂದ 12 ತಿಂಗಳ ಅವಧಿಯಲ್ಲಿ ನನಸಾಗಲಿರುವ ಯೋಜನೆಗೆ ಇಸ್ರೋ ಮತ್ತು ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಒಕ್ಕೂಟದ (ಐಟಿಸಿಎ) ಸಹಯೋಗವನ್ನೂ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
key words : Karnataka- Government- approves the project – estimated cost Rs 1.9 crores- Design & Launch of Nano- Satellite- Government School Students