ಮೈಸೂರು,ಜುಲೈ,8,2022(www.justkannada.in): ಎಚ್. ಡಿ ಕೋಟೆ ತಾಲೂಕಿನ ಹೊಮ್ಮರಗಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 2012ರಿಂದ ನೂರಾರು ರೈತರಿಗೆ ಸಹಿ ಪಡೆದು ಸಾಲ ನೀಡಿದ್ದೇವೆ ಎಂದು ವಂಚನೆ ಎಸಗಿರುವ ಅಂದಿನ ಶಾಖೆ ವ್ಯವಸ್ಥಾಪಕರ ವಿರುದ್ಧ ತನಿಖಾ ವರದಿ ಸಲ್ಲಿಸುವಂತೆ ವಿಭಾಗಿಯ ವ್ಯವಸ್ಥಾಪಕ ರಾಧಾಕೃಷ್ಣ ರೈ ಸೂಚನೆ ನೀಡಿದರು.
ಇಂದು ಬ್ಯಾಂಕಿನ ಕಾರ್ಯಾಲಯದಲ್ಲಿ ನಡೆದ ರೈತರ ಗ್ರಾಹಕರ ಸಮಸ್ಯೆಗಳ ಕುರಿತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ತಾಲೂಕಿನ ರೈತರ ಸಾಲ ವಸೂಲಾತಿಗಾಗಿ ನೋಟಿಸ್ ನೀಡಿರುವುದು ಓಟಿಎಸ್ (OTS) ಮುಖಾಂತರ ರೈತರ ಸಾಲವನ್ನು ಋಣಮುಕ್ತ ಮಾಡಿ ಹೊಸದಾಗಿ ರೈತರಿಗೆ ಬೆಳೆ ಸಾಲವನ್ನು ಕೊಡಬೇಕು ಹಾಗೂ 2012ರಿಂದಲೂ ಈ ಶಾಖೆಯಲ್ಲಿ ಹಿಂದೆ ಇದ್ದಂತಹ ವ್ಯವಸ್ಥಾಪಕರು ಅಕ್ರಮ ವೆಸಗಿದ್ಧಾರೆ. ರೈತರಿಂದ ನವೀಕರಣ ಮಾಡುವುದಾಗಿ ಸಹಿ ಮಾಡಿಸಿಕೊಂಡು ವಂಚಿಸಿದ್ದಾರೆ. ಆದ್ದರಿಂದ 2012ರಿಂದ ಇಲ್ಲಿಯವರೆಗೂ ತನಿಖೆ ಮಾಡಿ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕು ಅಲ್ಲಿಯವರೆಗೂ ರೈತರಿಗೆ ಯಾವುದೇ ರೀತಿಯ ನೋಟಿಸ್ ನೀಡುವುದಾಗಲಿ ರೈತರಿಗೆ ತೊಂದರೆ ಕೊಡುವುದಾಗಲಿ ಮಾಡಕೂಡದು ಎಂದು ಕುರುಬೂರು ಶಾಂತಕುಮಾರ್ ಅವರು ಒತ್ತಾಯಿಸಿದರು. ಮುಗ್ಧ ಅಮಾಯಕ ರೈತರಿಂದ ನವೀಕರಣ ಮಾಡುವುದಾಗಿ ಸಹಿ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ವಿಭಾಗಿಯ ವ್ಯವಸ್ಥಾಪಕ ರಾಧಾಕೃಷ್ಣ ರೈ ಅವರು ಓಟಿಎಸ್ ನಲ್ಲಿ ರೈತರು ಸಾಲ ತೀರಿಸಿಕೊಳ್ಳಲು ಇದೇ ಸೆಪ್ಟೆಂಬರ್ ವರೆಗೂ ಅವಧಿ ವಿಸ್ತರಣೆಯಾಗಿದೆ ಎಷ್ಟು ಸಾಧ್ಯವೋ ಅಷ್ಟು ಓಟಿಎಸ್ ಮುಖಾಂತರ ತೀರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಸರ್ಕಾರಿ ಯೋಜನೆಗಳ ಹಣ ಶಾಖೆ ಜಮಾ ಮಾಡಿಕೊಂಡಿದ್ದರೇ ವಾಪಸ್ ಕೊಡಿಸುವುದಾಗಿ, ಓಟಿಎಸ್ ನಲ್ಲಿ ಸಾಲ ತಿರುವಳಿ ಮಾಡಿದ ತಕ್ಷಣವೇ ಹೊಸ ಹೊಸ ಸಾಲ ನೀಡುವುದಾಗಿ ತಿಳಿಸಿದರು.
ಕಳೆದ ತಿಂಗಳು ಈ ಬ್ಯಾಂಕಿನ ಮುಂದೆ ರೈತರು ಪ್ರತಿಭಟನೆ ನಡೆಸಿದಾಗ ಈ ರೀತಿಯ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ಸಭೆಯಲ್ಲಿ ಶಾಖಾ ವ್ಯವಸ್ಥಾಪಕ ಗಣೇಶ್ ರೈತ ಮುಖಂಡರುಗಳಾದ ಹತ್ತಳ್ಳಿ ದೇವರಾಜ್, ಕೆಂಡಗಣ್ಣಸ್ವಾಮಿ ಬರಡನಪುರ ನಾಗರಾಜ್, ಮಾದಪ್ಪ ವೃಷಭೇಂದ್ರ, ದೇವಮಣಿ, ರೇವಣ್ಣ, ಧನಂಜಯ ಮಹದೇವಸ್ವಾಮಿ ಇನ್ನು ಮುಂತಾದ ನೂರಾರು ರೈತರು ಇದ್ದರು.
Key words: Karnataka –Gramin-Bank-manager – investigate – fraud -case – farmers