ಮೈಸೂರು, ಅ.12,2024: (www.justkannada.in news) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಪುಷ್ಪಾರ್ಚನೆಯು ನಿಗಧಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಮಹಾದೇವಪ್ಪ, ಶಿವರಾಜ್ ತಂಗಡಗಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್ ಪುಷ್ಪಾರ್ಚನೆ ಮಾಡಿದರು.
ಗಣ್ಯರ ಗೈರು :
ಕಳೆದ ಕೆಲ ವರ್ಷಗಳಿಂದ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಸಹ ಪುಷ್ಪಾರ್ಚನೆ ವೇಳೆ ಹಾಜರಿರುತ್ತಿದ್ದರು. ಆದರೆ ಈ ವರ್ಷ ಮುಖ್ಯ ನ್ಯಾಯಮೂರ್ತಿಗಳು ಜಂಬಸವಾರಿ ಕಾರ್ಯಕ್ರಮದಲ್ಲಿ ಗೈರಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ಹಗರಣದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು. ಲೋಕಾಯುಕ್ತರಿಂದ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯ ಮೂರ್ತಿ ಅಂಜಾರಿಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿಯೇ ಜಂಬೂಸವಾರಿಗೆ ಆಗಮಿಸಿಲ್ಲ ಎನ್ನಲಾಗಿದೆ. ಮುಖ್ಯನ್ಯಾಯಮೂರ್ತಿಗಳು ನಿನ್ನೆಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ ಎಂದು ಮೂಲಗಳು “ ಜಸ್ಟ್ ಕನ್ನಡ” ಗೆ ಮಾಹಿತಿ ನೀಡಿವೆ.
ಇದೇ ರೀತಿ, ಮೈಸೂರು-ಕೊಡಗು ಸಂಸದ, ಮೈಸೂರು ರಾಜವಂಶದ ಯದುವೀರ್ ಪುಷ್ಪಾರ್ಚನೆಗೆ ಗೈರು ಹಾಜರಾಗಿದ್ದರು. ಸಂಪ್ರದಾಯದಂತೆ ರಾಜಮನೆತನದ ಪ್ರತಿನಿಧಿ ಪುಷ್ಪಾರ್ಚನೆಯಲ್ಲಿ ಭಾಗಿಯಾಗುವುದು ವಾಡಿಕೆ. ಆದರೆ ಯದುವೀರ್ ದಂಪತಿಗೆ ಮಗು ಜನಿಸಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಕಾರಣಗಳಿಗಾಗಿ ಗೈರು ಹಾಜರಾಗಿರಬಹುದು ಎನ್ನಲಾಗಿದೆ.
ಎಡವಿದ ಸಿಎಂ:
ಪುಷ್ಪಾರ್ಚನೆಗೆಂದು ವಿಶೇಷವಾಗಿ ನಿರ್ಮಿಸಿದ್ದ ವೇದಿಕೆಯನ್ನೇರುವಾಗ ಸಿಎಂ ಸಿದ್ದರಾಮಯ್ಯ ಅವರು ಪಂಚೆ ಕಾಲಿಗೆ ಸಿಲುಕಿ ಎಡವಿ ಮುಗ್ಗರಿಸಿದರಾದರೂ ತಕ್ಷಣವೇ ಸಾವರಿಸಿಕೊಂಡು ವೇದಿಕೆಯನ್ನೇರಿ ಬಳಿಕ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡಿದರು.
ಸ್ಪಷ್ಟನೆ :
ಮುಖ್ಯನ್ಯಾಯಮೂರ್ತಿಗಳಿಗೆ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವಂತೆ ಕೋರಿ ಜಿಲ್ಲಾಡಳಿತ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಗಿತ್ತು. ಅವರ ಗೈರಿಗೆ ಕಾರಣ ತಿಳಿದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಜಸ್ಟ್ ಕನ್ನಡಗೆ ಸ್ಪಷ್ಟಪಡಿಸಿದರು.
ಆದರೆ ಯದುವೀರ್ ದಂಪತಿಗೆ ಮಗು ಜನಿಸಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಕಾರಣಗಳಿಗಾಗಿ ಗೈರು ಹಾಜರಾಗಿರಬಹುದು ಎಂದು ಅಭಿಪ್ರಾಯಪಟ್ಟರು.
key words: Mysore Dasara, jamboosavari, Karnataka High court, CJ, absent