ಒಳ್ಳೆಯತನದ ನಮ್ಮ ವರಾಳೆ ಸಾಹೇಬರು
ಬೆಂಗಳೂರು, ಫೆ.೦೩, ೨೦೨೪ :
ಪ್ರಕರಣ-1,
ಬೆಳಗಾವಿ ಬಳಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಬಗ್ಗೆ ಮಾಧ್ಯಮ ವರದಿಗಳನ್ನು ಓದಿ ಕನಲಿ ಹೋಗಿದ್ದ ನಮ್ಮ ಸಾಹೇಬರು ಅದನ್ನು ಸ್ವಯಂ ಪ್ರೇರಿತ ಸಾರ್ವಜನಿಕ ಅರ್ಜಿಯನ್ನಾಗಿ ಪರಿಗಣಿಸಿದರು. ನ್ಯಾಯಾಂಗ ಕಲಾಪ ಆರಂಭವಾಗುತ್ತಿದ್ದಂತೆಯೇ ಅದನ್ನು ಪ್ರಸ್ತಾಪಿಸಿ, ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಇಂತಹ ಘಟನೆಗಳು ನಡೆಯುತ್ತಿವೆಯಲ್ಲಾ ಎಂದು ದಿಗ್ದಮೆಗೊಂಡರು.
ಭಾವೋದ್ವೇಗಕ್ಕೆ ಒಳಗಾಗಿ ಅವರ ಕಣ್ಣಾಲಿಗಳು ತುಂಬಿ ಬಂದವು. ಕಂಠ ಗದ್ಗದಿತಗೊಂಡಿತು. ಕನ್ನಡಕವನ್ನು ತೆಗೆದು ಅದರ ತೇವಗೊಂಡ ಮಸೂರವನ್ನು ಒರೆಸುತ್ತಿದ್ದರು. ಅವರೊಂದಿಗಿದ ಕೈವಸ್ತ್ರದಿಂದ ಪೀಠದಲ್ಲಿ ನಾನು. ಸಮಾಧಾನದ ಮಾತು ಹೇಳಿದೆ. ನನ್ನ ಸಲಹೆಯಂತೆ ನಾವಿಬ್ಬರೂ ಎದ್ದು ಹೋಗಿ ಸ್ವಲ್ಪ ಸಮಯ ಕೊಠಡಿಯಲ್ಲಿ ಕಳೆಯಬೇಕಾಯಿತು. ಅವರು ಭಾವನಾತ್ಮಕ ವ್ಯಕ್ತಿ, ಎಲ್ಲದಕ್ಕೂ ಸ್ಪಂದಿಸುವವರು.
ಪ್ರಕರಣ-2:
ಮಸುಕಾದ ಜಾತಿ ಪ್ರಮಾಣಪಪತ್ರ ಸಲ್ಲಿಸಿದ್ದಕ್ಕೆ ಉದ್ಯೋಗವಂಚಿತನಾದ ಯುವಕನ ಪ್ರಕರಣ ಅದು. ಅವನದ್ದೇನೂ ತಪ್ಪಿರಲಿಲ್ಲ, ಅವನಿಗೆ ನೀಡಲಾದ ಅಧಿಕೃತ ಜಾತಿ ಪ್ರಮಾಣಪತ್ರ ಮಸುಕಾಗಿತ್ತು. ಅದನ್ನೇ ಅವನು ವೆಬ್ ಹೋಸ್ಟ್ ಮಾಡಿದ್ದ. ಸಾಹೇಬರು ಸಾತ್ವಿಕ ಸಿಟ್ಟನ್ನು ಪ್ರತಿವಾದಿ ವಕೀಲರುಗಳ ಮೇಲೆ ತೋರ್ಪಡಿಸಿದ್ದರು. ಯುವಕನ ಮನಸ್ಸಿಗೆ ಆದ ನೋವನ್ನು ಅವರೇ ಅನುಭವಿಸಿದಂತಿತ್ತು.
ಪ್ರಕರಣ-3:
ಮಾಧ್ಯಮದಲ್ಲಿ ನಿಷೇಧವಿದ್ದರೂ ಮಲ ಹೊರುವ ಪದ್ಧತಿ ಇನ್ನೂ ಜೀವಂತ’ಎಂಬ ಸುದ್ದಿ ಪ್ರಕಟವಾಗಿತ್ತು.ಅದನ್ನು ಗಮನಿಸಿದ ಚೀಫ್ ಸ್ವಯಂ ಪ್ರೇರಿತ ಪಿಐಎಲ್ ಆಗಿ ಪರಿಗಣಿಸಿ, ”ಸ್ವಾತಂತ್ರ್ಯ ಬಂದು ದಶಕಗಳು ಉರುಳಿದರೂ ಜಾತಿಕಾರಣಕ್ಕೆ ಕೆಲವು ತಳಸಮುದಾಯದವರನ್ನು ಇನ್ನೂ ಮಲದ ಗುಂಡಿಗೆ ಇಳಿಸುವುದು ಅಮಾನವೀಯ ಎಂದು ಖಾರವಾಗಿ ತೆರೆದ ನ್ಯಾಯಾಲಯದಲ್ಲಿ ಹೇಳಿದರು. ಸ್ವಲ್ಪಕಾಲ ಎಲ್ಲವೂ ಸ್ತಬ್ದವಾಗಿತ್ತು.
ಪ್ರಕರಣ-4
ಮೊಕದ್ದಮೆಯೊಂದರಲ್ಲಿ ವ್ಯತಿರಿಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಹಿರಿಯ ನ್ಯಾಯವಾದಿಯೊಬ್ಬರು ಪೀಠದ ಮೇಲೆ ಏರುಧನಿಯಲ್ಲಿ ಹರಿಹಾಯ್ದರು. ನಾನು ಸ್ವಲ್ಪ ವಿಚಲಿತಗೊಂಡಿದ್ದೆ. ಚೀಫ್ ಮುಗುಳಕ್ಕು ಇದೆಲ್ಲಾ ಸಾಮಾನ್ಯ ಅಂದರು. ಬಹುಶಃ ವಕೀಲರ ಮೇಲೆ ಕಕ್ಷಿದಾರನ ಒತ್ತಡ ಹೆಚ್ಚಾಗಿರಬೇಕು ಎಂದು ಮೆಲುಧ್ವನಿಯಲ್ಲಿ ಅರುಹಿದರು. ಚೀಫ್‌ಗೆ ಪದೋನ್ನತಿ ದೊರೆತ ದಿನ ಅದೇ ವಕೀಲರು, ಬಂದು “ನನ್ನನ್ನು ಕ್ಷಮಿಸಿ, ಅಂದು ನಾನು ನಿಮ್ಮ ವಿರುದ್ಧ ರೇಗಾಡಿದ್ದೆ ”ಎಂದರು.
ಅದಕ್ಕೆ ಚೀಫ್, ನಾನು ಅದನ್ನು ಅವತ್ತೆ ಮರೆತುಬಿಟ್ಟೆ ನಾವೆಲ್ಲಾ ಒಂದೇ ಕುಟುಂಬದವರು, ಬಿಡಿ ಎಂದು ಸಮ್ಮನಾದರು.
ಈ ನಾಲ್ಕು ಪ್ರಕರಣಗಳಲ್ಲೂ ಸಿಜೆಯಾಗಿದ್ದ ಪಿ.ಬಿ. ವರಾಳೆ ಅವರ ಮಾನವೀಯ ಹೃದಯ, ಪರಿಶುದ್ಧ ಮನಸ್ಸಿನ ವ್ಯಕ್ತಿತ್ವ ಕಾಣಬಹುದು. ನಾಲ್ಕೂವರೆ ತಿಂಗಳ ಕಾಲ ಚೀಫ್ ಒಟ್ಟಿಗೆ ವಿಭಾಗೀಯ ಪೀಠದಲ್ಲಿದ್ದ ನಾನು ಸದಾ ನ್ಯಾಯದೆಡೆಗಿನ ತುಡಿತ. ಮಾನವೀಯ ಮುಖವನ್ನು ಕಾಣುತ್ತಿದ್ದೆನು. ಸಮಾರಂಭವೊಂದರಲ್ಲಿ ಅವರಿಗೆ ‘ಮರ್ಯಾದಾ ಪುರುಷೋತ್ತಮ ʼ ಎಂದು ಸಂಬೋಧಿಸಿದ್ದೆ.
ಹೃದಯ ವೈಶಾಲ್ಯಕ್ಕೆ ಹೆಸರಾದ ಅವರು ತಾಳ್ಮೆ ಮತ್ತು ಸಹನೆಯ ಸಾಕಾರಮೂರ್ತಿ, ನಿಕಟ ಒಡನಾಟದಲ್ಲಿ ಒಂದು ದಿನವು ಅವರು ಸಿಟ್ಟು ಮಾಡಿಕೊಂಡಿದ್ದನ್ನು. ಕೆಟ್ಟ ಮಾತನಾಡಿದ್ದನ್ನು, ದುರ್ವಿಚಾರಗಳನ್ನು ಕಾಣಲಿಲ್ಲ, ಪರಿಶುದ್ಧ ವ್ಯಕ್ತಿತ್ವ ಹೊಂದಿರುವ ಅವರು ತನ್ನಿಂದ ಬೇರೆಯವರಿಗೆ ಅದರಲ್ಲೂ ವಕೀಲರಿಗೆ, ಕಕ್ಷಿದಾರರಿಗೆ ತೊಂದರೆ ಆಗಬಾರದೆಂದು ಅಂದಿನ ತೀರ್ಪುಗಳನ್ನು ಸಾಧ್ಯವಾದಷ್ಟು ಅಂದೇ ಸಹಿ ಹಾಕಿ ಕಳುಹಿಸುತ್ತಿದ್ದರು.
ಸಹ ನ್ಯಾಯಮೂರ್ತಿಗಳಲ್ಲಿನ ‘ಪ್ರತಿಭೆ’ ಗುರುತಿಸುವ ಕಲೆ ರೂಢಿಸಿಕೊಂಡಿರುವ ಚೀಫ್, ಯಾರ್ಯಾರಿಗೆ ಯಾವ್ಯಾವ ಸಬ್ಬಜ್ಟ್ ಅಲಾಟ್ ಮಾಡಬೇಕು ಎಂಬದನ್ನು ಬಹಳ ಚಾಣಾಕ್ಷತನ ದಿಂದ ನಿಭಾಯಿಸುತ್ತಿದ್ದರು. ತೀರ್ಪುಗಳು ‘ಶುಷ್ಕ’ ವಾಗಿರಬಾರದು. ಅದರಲ್ಲಿ ಇತಿಹಾಸ, ಸಮಾಜಶಾಸ್ತ್ರ, ಸಾಹಿತ್ಯ, ಕಾವ್ಯ, ಧರ್ಮಗ್ರಂಥ ಗಳನ್ನು ಕೋಟ್ ಮಾಡಬೇಕು, ಆಗಲೇ ಆ ತೀರ್ಪು ಸಾಮಾಜಿಕವಾಗಿ ಒಪ್ಪಿತವಾಗುತ್ತದೆಂಬ ದೃಷ್ಟಿಕೋನ ಹೊಂದಿದ್ದರು. ತೀರ್ಪುಗಳು, ಕಾನೂನು ವ್ಯಾಖ್ಯಾನಗಳ ಬಗ್ಗೆ ಸದಾ ಸಮಾಲೋಚಿಸುವ ಅವರು ತೀರ್ಪುಗಳನ್ನು ಬರೆಯುವಾಗ ಎಂದಿಗೂ ಅಡ್ಡ ಬರುತ್ತಿರಲಿಲ್ಲ. ಸಂಸ್ಕೃತ, ಮರಾಠಿ ಹಾಗೂ ಹಿಂದಿ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಶಾಹಿರಿಗಳ ಬಗ್ಗೆ ಒಲವು ಹೊಂದಿರುವ ಅವರು ಆಗಾಗ್ಗೆ ನ್ಯಾಯಾಲಯಗಳಲ್ಲಿ ಅವುಗಳನ್ನು ಉದಾಹರಿಸುತ್ತಿದ್ದರು.
( ಇಂದು ವರಾಳೆ ಅವರ ಬೀಳ್ಕೊಡುಗೆ ಸಮಾರಂಭದ ನಿಮಿತ್ತ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಡಾ.ಕೃಷ್ಣ ಎಸ್.ದೀಕ್ಷಿತ್ ಅವರು ವಿಜಯ ಕರ್ನಾಟಕಕ್ಕೆ ಬರೆದ ಲೇಖನ ಇದು)
Key words : Karnataka ̲ highcourt ̲ cj ̲ sendoff ̲ article