ಕೋವಿಡ್-19 ಮಾಹಿತಿಗೆ ವೆಬ್‍ಸೈಟ್ , ಕೂಲಿ ಕಾರ್ಮಿಕರ ಹಸಿವು ನೀಗಿಸಲು ಟೋಲ್ ಫ್ರೀ ದೂರವಾಣಿ ಸೇವೆ ಆರಂಭಿಸಿದ ಕರ್ನಾಟಕ.

 

ಬೆಂಗಳೂರು, ಮಾರ್ಚ್ 28, 2020 : ಕರ್ನಾಟಕದಲ್ಲಿ ಕೊರೊನಾ ವೈರಾಣು 19 ( ಕೋವಿಡ್-19 ) ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಸ ವೆಬ್ ಸೈಟ್ ರೂಪಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ನಗರದ ವಾರ್ತಾ ಸೌಧದ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಈ ವೆಬ್ ಸೈಟ್ ( https://covid19.karnataka.gov.in/wordpress/ ) ಲೋಕಾರ್ಪಣೆ ಮಾಡಿದರು. ಜತೆಗೆ ಬಡ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಕಾರ್ಮಿಕ ಇಲಾಖೆ ಸ್ಥಾಪಿಸಿರುವ ಶುಲ್ಕ-ರಹಿತ ದೂರವಾಣಿಗೂ ( ಸಹಾಯವಾಣಿ : 155214) ಚಾಲನೆ ನೀಡಿದರು.

karnataka-information-website-covid.19-help.line

ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ರ ಉಪಟಳ ಅತೀ ಶೀಘ್ರದಲ್ಲೇ ಅಂತ್ಯಗೊಳ್ಳಲಿ. ಮುಂದೆಂದೂ ಮನುಕುಲಕ್ಕೆ ಇಂತಹ ಸಮಸ್ಯೆಗಳು ಕಾಡದಿರಲಿ ಎಂಬ ಶುಭ ಹಾರೈಸಿದರು.

ವೆಬ್‍ಸೈಟ್ ವೈಶಿಷ್ಠ್ಯ !

ಮುಖ್ಯಮಂತ್ರಿಯವರ ಸಂದೇಶ, ಸಹಾಯವಾಣಿ ಮಾಹಿತಿ, ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಕೋವಿಡ್-19 ರ ಗುಣ-ಲಕ್ಷಣಗಳು, 21 ದಿನಗಳ ಲಾಕ್‍ಡೌನ್ ವಿವರ, ಸ್ವಯಂಸೇವಕರಾಗಿ ಸೇರಬಯಸುವವರಿಗೆ ಅವಕಾಶ ಹಾಗೂ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಬಲಿಯಾದವರ ಸಂಖ್ಯೆ ಒಳಗೊಂಡಂತೆ ಕೋವಿಡ್-19 ದೃಢಪಟ್ಟಿರುವವರ ಅಂಕಿ-ಸಂಖ್ಯೆ ಕುರಿತ ತಾಜಾ ಮಾಹಿತಿ ಈ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.

ಸಹಾಯವಾಣಿಯ ವಿಶೇಷ

ಅನ್ನವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿಕಾರರು ಸಹಾಯವಾಣಿಗೆ ಕರೆ ಮಾಡಿದಲ್ಲಿ ಅವರು ಎಲ್ಲಿಂದ ಕರೆ ಮಾಡಿದ್ದಾರೆ ? ಎಂಬುದನ್ನು ದೃಢಪಡಿಸಿಕೊಂಡು ಸಮೀಪದ ಇಂದಿರಾ ಕ್ಯಾಂಟೀನ್ ಅಥವಾ ಸರ್ಕಾರೇತರ ಸಂಘ-ಸಂಸ್ಥೆಗಳ ನೆರವಿನಿಂದ ಅವರು ಇದ್ದಲ್ಲೇ ಊಟದ ವ್ಯವಸ್ಥೆ ಮಾಡಲು ಸಹಾಯವಾಣಿ ನೆರವು ಒದಗಿಸಲಿದೆ. ಅಲ್ಲದೆ, ಬೇರೆ ಊರುಗಳಿಂದ ಬಂದು ನೆಲ ಇಲ್ಲದ ಜನರಿಗೆ ನೆಲೆ ಒದಗಿಸುವ ಪ್ರಯತ್ನವನ್ನೂ ಸಹಾಯವಾಣಿ ಮಾಡಲಿದೆ. ಜೊತೆಗೆ, ಸಾವು ಇನ್ನಿತರ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಬೇಕಾದ ಸಂಕಷ್ಟ ಎದುರಿಸುತ್ತಿರುವ ಕೂಲಿ ಕಾರ್ಮಿಕರಿಗೂ ಸಹಾಯವಾಣಿ ಸಹಾಯಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದರು.

karnataka-information-website-covid.19-help.line

ಮುಖ್ಯಮಂತ್ರಿಯವರ ಇ-ಗವರ್ನೆನ್ಸ್ ಸಲಹೆಗಾರ ಬೇಳೂರು ಸುದರ್ಶನ, ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

key words : karnataka-information-website-covid.19-help.line