ಮೈಸೂರು, ಜೂ.14, 2020 : (www.justkannada.in news) ‘ಸಾರ್ ಬಾಡಿ ವಿಶುಯಲ್ಸ್ ತಗೊಳ್ಳೋಕೆ ಬಿಡ್ತಾ ಇಲ್ಲ’- ಅಂತ ರಂಗನಾಥ ಮರಕಿಣಿ ಫೋನ್ ಮಾಡಿದಾಗ ನನಗೆ ಎಲ್ಲಿಲ್ಲದ ಆತಂಕ.
ಅದಾಗಲೇ ‘ಸಾಹಿತಿ ರಾಮಚಂದ್ರ ಶರ್ಮ ಇನ್ನಿಲ್ಲ’ ಅನ್ನೋ ಸುದ್ದಿಯನ್ನ ಘೋಷಿಸಿ ಆಗಿತ್ತು. ಜೋಗಿಯ ಫೋನ್-ಇನ್ ತೆಗೆದುಕೊಳ್ಳಲಾಗಿತ್ತು. ಮುಂದಿನ ಬುಲೆಟಿನ್ ಗೆ ಬಾಕಿ ಇದ್ದದ್ದು ಅದರ ದೃಶ್ಯಗಳನ್ನ ನೀಡುವುದು ಮಾತ್ರ.
ಕೊನೆ ನಿಮಿಷದಲ್ಲಿ ವಿಶುಯಲ್ ಗಳು ಸಿಕ್ಕರೂ ಅದನ್ನು ಪ್ರಸಾರ ಮಾಡಲು ಒಂದು ದೊಡ್ಡ ಪಡೆಯೇ ರಾಮೋಜಿ ಫಿಲಂ ಸಿಟಿಯ ಕಚೇರಿಯಲ್ಲಿ ಸಜ್ಜಾಗಿ ನಿಂತಿತ್ತು.
ಗ್ರಾಫಿಕ್ಸ್ ನ ರಾಘವೇಂದ್ರ ಆವಂತಿ, ಬುಲೆಟಿನ್ ಪ್ರೊಡ್ಯೂಸರ್ ಮಹೇಶ್, ಪ್ರೊಡಕ್ಷನ್ ನ ತೇಜೇಶ್ ಎಲ್ಲರೂ ಬೆಂಗಳೂರಿನತ್ತ ಮುಖ ಮಾಡಿ ಕುಳಿತಿದ್ದರು.
ಆಗಲೇ ಈ ಫೋನು ಬಂದದ್ದು. ಅರೇ! ಇದೇನಿದು ವಿಚಿತ್ರ ಎನಿಸಿತು. ಯಾಕಂತೆ ಅಂತ ಕೇಳಿದೆ. ಸಾವು ಅನ್ನುವುದು ಖಾಸಗಿ ವಿಚಾರ. ಅದನ್ನು ಖಾಸಗಿಯಾಗಿಯೇ ಉಳಿಯಲು ಬಿಡಿ ಅಂತ ಹೇಳುತ್ತಿದ್ದಾರೆ ಅಂದರು ಮರಕಿಣಿ.
ಹಣ ಎಂದರೆ ಮಾತ್ರ ಅಲ್ಲ, ಟಿ ವಿ ಕ್ಯಾಮೆರಾ ಎಂದರೂ ಸಾಕು ಹೆಣ ಸಹಾ ಬಾಯ್ಬಿಡುತ್ತದೆ ಎನ್ನುವುದು ಮಾತ್ರ ಗೊತ್ತಿದ್ದ ನನಗೆ ಇದು ಮೊದಲ ಪಾಠ.
ಬಿ ವಿ ಕಾರಂತರು ಆಗ ತಾನೇ ರಂಗಾಯಣಕ್ಕೆ ಚಾಲನೆ ನೀಡಿದ್ದರು. ರಾಜ್ಯಾದ್ಯಂತ ಅಳೆದೂ ಸುರಿದೂ ಆಯ್ದುಕೊಂಡಿದ್ದ ತಂಡಕ್ಕೆ ತಾಲೀಮು ಆರಂಭವಾಗಿತ್ತು.
ಊರು ಎದ್ದೇಳುವ ಮುನ್ನವೇ ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ, ಮಂಡಿ ಮೊಹಲ್ಲಾ ಎಲ್ಲಾ ಸುತ್ತಿ ಬರುತ್ತಿದ್ದ ತಂಡ ಅಂದು ತಾವು ಕಂಡದ್ದಕ್ಕೆಲ್ಲಾ ರಂಗ ರೂಪ ನೀಡುತ್ತಿತ್ತು.
ಒಂದು ಹೀಗಿತ್ತು- ಹೆಣದ ಮೆರವಣಿಗೆ ಸಾಗುತ್ತಿದೆ. ಶವಯಾತ್ರೆಯ ಫೋಟೋ ತೆಗೆಯಲು ಕ್ಯಾಮೆರಾಮನ್ ರೆಡಿ ಆದ. ಚಟ್ಟದಲ್ಲಿದ್ದ ಶವ ತಕ್ಷಣ ಎದ್ದು ಕೂತು ಒಂದು ಸ್ಮೈಲ್ ನೀಡಿ ಹಾಗೆ ನೆಲಕ್ಕೆ ಒರಗಿತು.
ಸುಘೋಷ್ ನಿಗಳೆ ನೈಟ್ ಶಿಫ್ಟ್ ನಲ್ಲಿದ್ದಾಗ ಒಂದು ಘಟನೆ ನಡೆಯಿತು. ವರದಕ್ಷಿಣೆ ಕಿರುಕುಳ ತಾಳಲಾರದೆ ಒಬ್ಬ ಮಹಿಳೆ ನೇಣು ಹಾಕಿಕೊಂಡಿದ್ದರು.
ವರದಿ ಮಾಡಲು ಅವರ ಮನೆಗೆ ಹೋದಾಗ ಎದುರಾದ ವ್ಯಕ್ತಿ ‘ಬನ್ನಿ ಸಾರ್, ನೀವು ಬರೋವರ್ಗೂ ಪೊಲೀಸರಿಗೂ ಹೆಣ ಮುಟ್ಟೋಕೆ ಬಿಟ್ಟಿಲ್ಲ’ ಅಂದ.
ಆತ ಆ ಮಹಿಳೆಯ ತಮ್ಮ. ಮನೆಯಲ್ಲಿ ಸಾವಾಗಿದೆ ಹೇಗೆ ಮಾತಾಡಿಸೋದು ಅಂತ ಸುಘೋಷ್ ಮೀನ ಮೇಷ ಎಣಿಸ್ತಿದ್ದಾಗ ಆ ತಮ್ಮ ಕ್ರಾಪು ಸರಿ ಮಾಡಿಕೊಂಡು, ಶರ್ಟ್ ನ ಒಂದು ಗುಂಡಿ ಬಿಚ್ಚಿ, ಹಿನ್ನೆಲೆಯಲ್ಲಿ ತೂಗಾಡುತ್ತಿದ್ದ ಶವ ಕಾಣುವಂತೆ ನಿಂತು ‘ಸರ್ ನಾನು ಮಾತಡೋಕೆ ರೆಡಿ’ ಅಂದ.
ಮುಗಿಯುತ್ತಿದ್ದಂತೆ ತಂದೆ ಬಂದರು. ಆಮೇಲೆ ತಾಯಿ.. ಸುಘೋಷ್ ರೇಗಿದವನೇ ವ್ಯಾನ್ ಹತ್ತಿದ. ‘ಇವತ್ತು ಈಟಿವಿ ನೋಡು ಮಗಾ, ಕನ್ನಡನಾಡೀನಲ್ಲಿ ನಾನು ಕಾಣಿಸ್ಕೊಂತೀನಿ’ ಅಂತ ಆತ ಎಲ್ಲರಿಗೂ ಫೋನ್ ನಲ್ಲಿ ಹೇಳ್ತಾ ಇದ್ದದ್ದು ಬೇಡ ಅಂದರೂ ಕಿವಿಗೆ ಬೀಳುತ್ತಿತ್ತು.
ರಾಜ್ ಕುಮಾರ್ ಸತ್ತು ಒಂದು ವರ್ಷ ಆಗಿತ್ತು. ಕಂಠೀರವ ಸ್ಟುಡಿಯೋದಲ್ಲಿದ್ದ ಸಮಾಧಿಗೆ ಇದೇ ಸುಘೋಷ್ ಕ್ಯಾಮೆರಾ ಸಹಿತ ಹೋದ.
ಆಗ ಗೊತ್ತಾಯ್ತು. ಕೋಲಾರದಿಂದ ಬಂದ ವ್ಯಕ್ತಿಯೊಬ್ಬ ದುಃಖ ತಡೆಯಲಾರದೆ ಒಂದು ವರ್ಷದಿಂದ ಮೌನಕ್ಕೆ ಶರಣಾಗಿದ್ದಾನೆ ಅಂತ. ಪಾಪ ಅಂದುಕೊಂಡ ಸುಘೋಷ್ ಆತನ ದುಃಖದ ಮುಖ, ಅಣ್ಣಾವ್ರ ಸಮಾಧಿಗೆ ಪೂಜೆ ಮಾಡ್ತಿರೋದು ಎಲ್ಲಾ ಸುತ್ತಿಕೊಂಡ.
ಸಮಸ್ಯೆ ಎದುರಾದದ್ದು ಬೈಟ್ ತೆಗೆದುಕೊಳ್ಳಬೇಕಾಗಿ ಬಂದಾಗ. ಸರಿ ಆತ ಕೈಸನ್ನೆ, ಬಾಯ್ ಸನ್ನೆ ಮಾಡೋದು. ಅದನ್ನೇ ಇನ್ನೊಬ್ಬ ವಿವರಿಸಿ ಹೇಳೋದು ಅಂತ ಆಯ್ತು. ಕ್ಯಾಮೆರಾ ಆನ್ ಆಗ್ತಿದ್ದಂತೆ ಒಂದು ವರ್ಷ ಮೌನವಾಗಿದ್ದ ಆತನೇ ಮಾತಾಡೋಕೆ ಶುರು ಮಾಡಿದ.
ಕ್ಯಾಮೆರಾಮನ್ ‘ಹ ಹ ಹಾ’ ಅಂತ ನಕ್ಕುಬಿಟ್ಟ. ಜನ ‘ಹೋ’ ಅಂತ ಕೂಗಿದರು. ಕ್ಯಾಮೆರಾ ಮಹಾತ್ಮೆ ಹಾಗಿತ್ತು.
ಇಂಥದ್ದನ್ನೇ ಕಂಡ ನಮಗೆ ರಾಮಚಂದ್ರ ಶರ್ಮರ ಮನೆಯಲ್ಲಿ ಹಾಗಂದದ್ದು ವಿಚಿತ್ರ ಅನಿಸಿತ್ತು.
ಶರ್ಮ ನಾಡಿನ ಆಸ್ತಿ, ಹಾಗಿರೋವಾಗ ಹೀಗೆ ಮಾಡೋದು ಸರೀನಾ ಅನ್ನೋ ಹುಳ ತಲೆ ಕೊರಿಯೋದಿಕ್ಕೆ ಶುರು ಮಾಡ್ತು.
ಅವರ ಫೋಟೋಗಳ ಆಲ್ಬಂ ಆದರೂ ಶೂಟ್ ಮಾಡಿ ಅಂತ ಹೇಳಿ ನಾನು ಬುಲೆಟಿನ್ ಗೆ ಹೇಗೆ ಒಗ್ಗರಣೆ ಹಾಕೋದು ಅಂತ ಯೋಚಿಸುತ್ತಾ ಕುಳಿತೆ..
ವಿಷ್ಣುವರ್ಧನ್ ಇಲ್ಲವಾದಾಗ ಅವರ ಸಾವಿನ ದೃಶ್ಯಗಳು ಟೆಲಿವಿಷನ್ ನಲ್ಲಿ ಹರಿದು ಬರುತ್ತಿರುವಾಗ ‘ಅಲ್ಲ! ಸಾವಿಗೂ ಒಂದು ಘನತೆ ಇಲ್ಲವಾ?’ ಅನಿಸಿಬಿಡ್ತು.
ವಿಷ್ಣುವರ್ಧನ್ ಅವರ ತಲೆಯನ್ನ ಚೆಂಡಿನಂತೆ ಆ ಕಡೆ ಈ ಕಡೆ ಹೊರಳಿಸುವವರು, ಅವರ ಮೈ ಮೇಲೆ ಬಿದ್ದು ಹೊರಳಾಡುವವರು, ಒಮ್ಮೆ ಮುಟ್ಟಿಯೇ ಬಿಡಬೇಕು ಅಂತ ಛಲ ತೊಟ್ಟವರ ಅತಿರೇಕಗಳು…
ರಾಮಚಂದ್ರ ಶರ್ಮರ ಕುಟುಂಬ ಸರಿಯಾಗಿ ಅರ್ಥವಾದದ್ದು ಆಗ. ಅವರು ತಮ್ಮ ಮನೆಯ ಸಾವಿಗೆ ಒಂದು ಘನತೆಯನ್ನ ತಂದುಕೊಟ್ಟಿದ್ದರು.
ಡಾ. ರಾಜ್ ಕುಮಾರ್ ಇಲ್ಲವಾದಾಗ ಆಗಿದ್ದು ಇನ್ನೂ ಕರಾಳ ನೆನಪಿನಂತೆ ಉಳಿದುಬಿಟ್ಟಿದೆ.
ಸಾವು ಎನ್ನುವುದು ಮಾಧ್ಯಮಕ್ಕೆ ಒಂದು ಸಾವು ಮಾತ್ರ. ಮಾಧ್ಯಮ ಕಚೇರಿಗಳಲ್ಲಿ ಯಾವತ್ತಾದರೂ ಒಂದು ಸಾವಿನ ವರದಿ ಹೇಗಿರಬೇಕು ಅಂತ ಕಿವಿಮಾತು ಹೇಳಿದ್ದು ಕೇಳಿದ್ದೀರಾ?
ಅಥವಾ ಸಾವನ್ನು ಹೇಗೆ ವರದಿ ಮಾಡಬೇಕು ಅಂತ ಯಾರಾದರೂ ಸೀನಿಯರ್ ಗಳ ಬಳಿ ಪ್ರಶ್ನೆ ಮಾಡಿದ್ದು ಗೊತ್ತಾ?
ಪತ್ರಿಕೋದ್ಯಮ ಮಾಡುವುದಕ್ಕೂ ಇರುವ ವ್ಯತ್ಯಾಸವನ್ನು ಹೇಳಿಕೊಟ್ಟಿದ್ದಾರಾ?
‘ಮೊದಲು, ಎಲ್ಲರಿಗಿಂತ ಮೊದಲು’ ಎನ್ನುವುದನ್ನು ಮಾತ್ರವೇ ಮಂತ್ರದಂತೆ ಬೋಧಿಸಿ ಕಳಿಸಿದಾಗ ಫೀಲ್ಡ್ ಗಿಳಿದ ಪತ್ರಕರ್ತರಿಗೆ ಸಾವೂ ಸಹಾ ಇನ್ನೊಂದು ವಿಶುಯಲ್ ಮಾತ್ರ.
ಈಗಲೂ ನೆನಪಿದೆ. ‘ಫ್ರಂಟ್ ಲೈನ್’ ಪತ್ರಿಕೆ ಗುಜರಾತ್ ಗಲಭೆಯ ವರದಿ ಮಾಡಿದಾಗ ಕಂಟೆಂಟ್ ಪೇಜ್ ನಲ್ಲಿ ಇದರೊಳಗೆ ಮನಸ್ಸಿಗೆ ಆಘಾತವಾಗುವಂತಹ ಫೋಟೋಗಳಿವೆ ಅಂತ ಘೋಷಿಸಿಕೊಂಡಿತ್ತು.
ಅದರ ನಂತರ ಆ ದೃಶ್ಯಗಳನ್ನು ಕೂಡಿಸಿಕೊಂಡು ರಾಮೋಜಿರಾವ್ ಒಂದು ಪ್ರಶ್ನೆ ಕೇಳಿದ್ದರು. ಅಪಘಾತದ ಭೀಕರ ದೃಶ್ಯಗಳಿಲ್ಲದೆ ಅಪಘಾತದ ಭೀಕರತೆಯನ್ನು ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲವೇ? ಅಂತ.
ಹೌದಲ್ಲಾ ಅನಿಸಿ ನಾವೆಲ್ಲಾ ಒಂದು ಸಂಹಿತೆ ರೂಪಿಸಿಕೊಂಡೆವು. ಎಲ್ಲಾ ವರದಿಗಾರರಿಗೂ ನಿರ್ದೇಶನ ಹೋಯಿತು. ಅಪಘಾತದ ಲಾಂಗ್ ಶಾಟ್ ಮಾತ್ರ ಸಾಕು ಅಂತ. ಕ್ಲೋಸ್ ಅಪ್ ಬೇಡವೇ ಬೇಡ ಅಂತ.
ಇದನ್ನು ಹೇಳಿದಾಗ ನಮ್ಮ ವರದಿಗಾರರಿಗೇ ಇದು ಸಹ್ಯ ಅನಿಸಲಿಲ್ಲ. ಅವರ ಮನಸ್ಸು ಮತ್ತು ಕಣ್ಣುಗಳು ಅಷ್ಟು ಚೆನ್ನಾಗಿ ‘ಕಂಡಿಷನ್’ ಆಗಿತ್ತು. ಆದರೆ ಕ್ರಮೇಣ ‘ಈಟಿವಿ’ಯಿಂದ ಘೋರ ದೃಶ್ಯಗಳು ಕಡಿಮೆಯಾಗುತ್ತಾ ಹೋಯಿತು.
ಅಲ್ಲಿಯವರೆಗೂ ಕಾಂಪಿಟೇಶನ್ ಹೆಸರಿನಲ್ಲಿ ಅದೂ ತಗೋ, ಇದೂ ತಗೋ, ರಕ್ತದ ಮಾರ್ಕ್ ಬೇಕು, ಚಾಕು ಚೂರಿ ಚುಚ್ಚಿರೋದೂ ಗೊತ್ತಾಗಬೇಕು, ರುಂಡ ಹಾರಿದ್ದೂ ಕಾಣಿಸಬೇಕು ಅನ್ನುತ್ತಿದ್ದ, ಇಷ್ಟೂ ಸಾಕಾಗ್ಲಿಲ್ಲ ಅಂತ ಪೋಸ್ಟ್ ಮಾರ್ಟಂ ರೂಮಿಗೇ ನುಗ್ಗುತ್ತಿದ್ದ ಪತ್ರಕರ್ತರು ಕ್ರಮೇಣ ತಹಬಂದಿಗೆ ಬಂದರು.
ಘೋರ ದೃಶ್ಯವಿಲ್ಲದೆಯೂ ಘೋರ ಸುದ್ದಿ ಮನವರಿಕೆ ಮಾಡಿಕೊಡಲಾಯಿತು. ಇದು ಕ್ರಮೇಣ ಬೇರೆ ಚಾನಲ್ ಗಳ ಮೇಲೂ ಪರಿಣಾಮ ಬೀರಿತು. ಒಂದಿಷ್ಟು ಸಂಯಮ ಹೇಗೆ ಮಾಧ್ಯಮಕ್ಕೆ ಸ್ವಲ್ಪವಾದರೂ ಮರ್ಯಾದೆ ತಂದು ಕೊಡಲು ಸಾಧ್ಯ ಎಂಬುದು ಪ್ರೂವ್ ಆಯಿತು.
ಡಾ. ರಾಜ್ ಸತ್ತಾಗ ಸದಾ ಪಿನ್ ಡ್ರಾಪ್ ಸೈಲೆನ್ಸ್ ನಲ್ಲಿರುವ ಪ್ರೊಡಕ್ಷನ್ ರೂಮು, ಸ್ಟುಡಿಯೋ ಸಹಾ ಸಂತೆಯಾಗಿ ಹೋಗಿತ್ತು. ಅದು ಶತಮಾನದ ಸಾವಿನ ಸುದ್ದಿ.
ವಿ-ಸ್ಯಾಟ್ ನಲ್ಲಿ ಬಂದಿಳಿಯುತ್ತಿದ್ದ ಸುದ್ದಿಗಳನ್ನೆಲ್ಲಾ ಬಾಚಿಕೊಂಡು ಬಂದು ಪ್ರಸಾರ ಮಾಡುತ್ತಿದ್ದ ನಾವು ಆ ಸಂತೆಯ ಮಧ್ಯೆಯೇ ಒಂದು ತೀರ್ಮಾನ ಕೈಗೊಂಡೆವು. ಗಲಭೆಗಳ ಪ್ರಸಾರಕ್ಕೆ ಆದಷ್ಟೂ ಕತ್ತರಿ ಹಾಕೋಣ, ಶವಯಾತ್ರೆಯ ಗೊಂದಲಗಳಿಗೆ ಹೆಚ್ಚು ಪ್ರಚಾರ ಬೇಡ ಅಂತ.
ಯಾಕೋ ನನಗೆ, ಸಿದ್ದು, ಬಾಲುಗೆ ಅನಿಸಿ ಹೋಗಿತ್ತು. ಈ ದಿನ ನಾವು ಸಂಯಮ ಕಳೆದುಕೊಂಡರೆ ಸುದ್ದಿಯ ಆತುರಕ್ಕೆ ಬಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಹೊತ್ತಿಕೊಂಡುಬಿಡುತ್ತದೆ ಅಂತ.
ಕೈಯಲ್ಲಿ ಬೆಂಕಿಯುಂಡೆಯಂತಹ ವಿಶ್ಯುಯಲ್ ಗಳಿದ್ದವು. ಈ ಕ್ಷಣವೇ ಪ್ರಸಾರ ಮಾಡಿಬಿಡೋಣ ಎಂದು ಕೈ ಕೆರೆಯುತ್ತಲೂ ಇತ್ತು. ಅದು ಪ್ರಸಾರವಾದರೆ ಎದುರಾಳಿ ಚಾನಲ್ ಗಳು ‘ಸ್ಟನ್’ ಆಗಿಬಿಡುತ್ತದೆ ಎಂತಲೂ ಗೊತ್ತಿತ್ತು.
ಆದರೂ ಅಕ್ಕಿಯೊಳಗೆ ಸೇರಿ ಹೋಗಿದ್ದ ಕಲ್ಲುಗಳನ್ನೂ ಆಯ್ದೂ ಆಯ್ದೂ ಹಸನು ಮಾಡಿದೆವು.
ನವ ಮಂಗಳೂರು ಬಂದರಿನಲ್ಲಿ ನಿಂತಿದ್ದೆವು. ಭಾರಿ ಸೆಕ್ಯುರಿಟಿಯ ಕಣ್ತಪ್ಪಿಸಿ ಕ್ಯಾಮೆರಾ ಒಳಗೆ ಸಾಗಿಸಿದ್ದೆವು.
ಸಮುದ್ರದೊಳಗೆ ಇಳಿದ ಕ್ರೇನ್ ತನ್ನ ಹಲ್ಲಿಗೆ ಒಂದು ಕಾರನ್ನು ಕಚ್ಚಿಕೊಂಡೇ ಮೇಲೆ ಬಂತು. ಅಷ್ಟೇ ಆಗಿದ್ದರೆ ಏನೂ ಅನಿಸುತ್ತಿರಲಿಲ್ಲ. ಆದರೆ ಆ ಕಾರಿನೊಳಗೆ ಇಬ್ಬರು ಇದ್ದಲ್ಲೇ, ಇದ್ದಂತೆಯೇ ಹೆಣವಾಗಿ ಹೋಗಿದ್ದರು. ಸ್ಟೀರಿಂಗ್ ಹಿಡಿದೇ ಇದ್ದ ದೇಹ ಕ್ರೇನ್ ನೆಲಕ್ಕೆ ಮುಟ್ಟುತ್ತಿದ್ದಂತೆಯೇ ವಿಕಾರವಾಗಿ ಉರುಳಿ ಆಚೆ ಬಿತ್ತು.
‘ಹಮೀದ್, ಎಲ್ಲಾ ಬೇಕು, ಎಲ್ಲಾ…’ ಅಂತ ಕೂಗಿದೆ. ಇನ್ಯಾರಿಗೂ ಸಿಗದ ‘ಎಕ್ಸ್ ಕ್ಲೂಸಿವ್’ ವಿಶ್ಯುಯಲ್ ಗಳು ಸಿಕ್ಕಿಬಿಟ್ಟ ಸಂಭ್ರಮ ಆವರಿಸಿಕೊಂಡಿತ್ತು.
ಅದೇ ನಾನು ಈಗ ದೃಶ್ಯಗಳನ್ನು ಜರಡಿ ಹಿಡಿಯುತ್ತಾ ಇದು ‘ಎಕ್ಸ್ ಕ್ಲೂಸಿವ್’ ಆದರೂ ಏರ್ ಆಗುವುದು ಬೇಡ ಎಂದು ಬದಿಗೆ ಸರಿಸುತ್ತಾ ನಿಂತಿದ್ದೆ.
ಕಲ್ಲು ಹೊಡೆದ, ಬೆಂಕಿ ಹಚ್ಚಿದ, ಒಂದು ಸಾವಿನ ಘನತೆಯನ್ನು ಕಿತ್ತುಕೊಂಡವರ ಕೈಗಳ ರಕ್ತ ನಮ್ಮ ಕೈಗೂ ಮೆತ್ತುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೆವು.
ವಿಷ್ಣುವರ್ಧನ್ ಚಿರ ನಿದ್ರೆಯಲ್ಲಿದ್ದಾಗ ಅವರನ್ನು ಹಿಗ್ಗಾಮುಗ್ಗಾ ಚಿತ್ರಿಸಿದ, ಅಂತ್ಯಸಂಸ್ಕಾರಕ್ಕೂ ನೇರ ಪ್ರಸಾರದ ‘ಗರಿ’ ತೊಡಿಸಿದ, ಪುರೋಹಿತರ ಕೈಗೇ ಮೈಕ್ ನೀಡಿದ ದೃಶ್ಯಗಳು ಸುಳಿ ಸುಳಿಯುತ್ತಾ ಹೋದಾಗ ಇದೆಲ್ಲಾ ನೆನಪಾಯಿತು.
ಮಾಧ್ಯಮ ಮನೆಯಲ್ಲಿ ಸಾವಿನ ಸೂತಕವಿಲ್ಲ.
key words : karnataka-journalist-media-g.n.mohan-story