ನವದೆಹಲಿ,ಏಪ್ರಿಲ್,4,2022(www.justkannada.in): ಕರ್ನಾಟಕದಲ್ಲಿ ಮೂರು ಪಕ್ಷಗಳಿಂದ ಜನ ಬೇಸತ್ತಿದ್ದಾರೆ. ದೆಹಲಿ, ಪಂಜಾಬ್ ರೀತಿ ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ತಿಳಿಸಿದರು.
ನವದೆಹಲಿಯಲ್ಲಿ ಇಂದು ಆಮ್ ಆದ್ಮಿ ಪಕ್ಷ (ಎಎಪಿ) ಸೇರ್ಪಡೆಯಾದ ಬಳಿಕ ಮಾತನಾಡಿದ ಭಾಸ್ಕರ್ ರಾವ್, ಎಎಪಿ ಮಾದರಿ ಆಡಳಿತ ಎಲ್ಲೆಡೆ ಇರಬೇಕು ಎಂಬ ಅಭಿಲಾಷೆಯೊಂದಿಗೆ ನಾನು ನೌಕರಿಗೆ ರಾಜೀನಾಮೆ ನೀಡಿ ಪಕ್ಷ ಸೇರಿದ್ದೇನೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರೀತಿಯ ಸಂಪನ್ಮೂಲಗಳಿವೆ ಆದರೆ ಸ್ವಚ್ಚ ನಾಯಕತ್ವದ ಕೊರತೆ ಹೆಚ್ಚಾಗಿದೆ . ರಾಜ್ಯದ ಮೂರೂ ಪಕ್ಷಗಳು ಅಂದರ್ ಬಾಹರ್ ಆಡುತ್ತಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮೂರು ಪಕ್ಷಗಳ ಬಗ್ಗೆ ಜನ ಬೇಸತ್ತಿದ್ದಾರೆ. ಕರ್ನಾಟಕದಲ್ಲಿ ಬದಲಾವಣೆ ಆಗಬೇಕಿದೆ ಎಂದರು.
‘ಕೇಜ್ರಿವಾಲ್ ಅವರ ಕಾರ್ಯವೈಖರಿ, ವಿಕೇಂದ್ರೀಕರಣ ನೀತಿ, ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ ತಂದಿದ್ದನ್ನು ನೋಡಿದರೆ, ದೇಶದೆಲ್ಲೆಡೆ ಆ ವ್ಯವಸ್ಥೆ ಇರಬೇಕು ಎಂಬುದು ನಮ್ಮ ಆಶಯ ಎಂದು ಭಾಸ್ಕರ್ ರಾವ್ ತಿಳಿಸಿದರು.
Key words: Karnataka-needs – change- Bhaskar Rao- joining -AAP