ಬೆಂಗಳೂರು, ಮೇ 18,2021(www.justkannada.in): ಗ್ರಾಮೀಣ ಪ್ರದೇಶಗಳ ಜನರಿಗೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ ನೀಡುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ ಉತ್ತಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಂಡ ಈ ಯೋಜನೆಯಲ್ಲಿ, 2020-21 ನೇ ಸಾಲಿನಲ್ಲಿ ಕರ್ನಾಟಕ ಉತ್ತಮ ರಾಜ್ಯ ಎಂದೆನಿಸಿಕೊಂಡಿದೆ. ಉಪಕೇಂದ್ರಗಳ ವಿಭಾಗದಲ್ಲಿ 2,263 ಎಚ್ಡಬ್ಲ್ಯುಸಿ ಆರಂಭಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಮಾರ್ಚ್ 31 ರವರೆಗೆ, 3,300 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅಂದರೆ, ನಿಗದಿತ ಗುರಿಗಿಂತ 146% ರಷ್ಟು ಸಾಧನೆಯಾಗಿದೆ. 2,096 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಚ್ಡಬ್ಲ್ಯುಸಿ ಆಗಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, 2,168 ಪೂರ್ಣವಾಗಿದೆ. ಅಂದರೆ ನಿಗದಿತ ಗುರಿಗಿಂತ 103% ರಷ್ಟು ಸಾಧನೆಯಾಗಿದೆ. 294 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಚ್ಡಬ್ಲ್ಯುಸಿ ಆಗಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, 364 ಕೇಂದ್ರ ರೂಪಿಸಲಾಗಿದೆ. ಅಂದರೆ, ನಿಗದಿತ ಗುರಿಗಿಂತ 124% ರಷ್ಟು ಸಾಧನೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ 4,653 ಎಚ್ಡಬ್ಲ್ಯುಸಿ ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಗುರಿಯನ್ನು ಮೀರಿ 5,832 ಕೇಂದ್ರಗಳನ್ನು ಆರಂಭಿಸಲಾಗಿದೆ. ಅಂದರೆ, ಒಟ್ಟಾರೆಯಾಗಿ 125% ರಷ್ಟು ಸಾಧನೆಯನ್ನು ರಾಜ್ಯ ಸರ್ಕಾರ ಮಾಡಿದೆ.
ಜನಸಮುದಾಯಕ್ಕೆ ಸ್ಥಳೀಯ ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲ ಆರೋಗ್ಯ ಕೇಂದ್ರಗಳನ್ನು ಎಚ್ಡಬ್ಲ್ಯುಸಿ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ನೀಡುತ್ತಿರುವ 11,595 ಕೇಂದ್ರಗಳನ್ನು ಎಚ್ಡಬ್ಲ್ಯುಸಿ ಆಗಿ ಮೇಲ್ದರ್ಜೆಗೇರಿಸುವ ಗುರಿ ಇದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಆರಂಭವಾಗಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಹದಿಹರೆಯದವರಿಗೆ ಆಪ್ತ ಸಮಾಲೋಚನೆ, ಸಾರ್ವಜನಿಕರಿಗೆ ಯೋಗ ಶಿಕ್ಷಣ ಶಿಬಿರಗಳು, ಅರ್ಹ ದಂಪತಿಗೆ ತಾತ್ಕಾಲಿಕ ಹಾಗೂ ಶಾಶ್ವತ ಗರ್ಭ ನಿರೋಧಕ ವಿಧಾನಗಳ ಸೇವೆ, ಕಣ್ಣು, ಮೂಗು, ಗಂಟಲು ಮತ್ತು ಬಾಯಿ ಸಂಬಂಧಿ ರೋಗಗಳಿಗೆ ತಪಾಸಣೆ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಸೌಲಭ್ಯಗಳಿವೆ.
ಈ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರ್ನಾಟಕ ಇಡೀ ದೇಶದಲ್ಲಿಯೇ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಜನರು ದೂರದ ನಗರ ಪ್ರದೇಶಗಳಿಗೆ ಸಂಚರಿಸಿ ಆರೋಗ್ಯ ಸೇವೆ ಪಡೆಯುವ ಹೊರೆಯನ್ನು ತಪ್ಪಿಸಿ, ಸುಲಭವಾಗಿ ತಮ್ಮ ಮನೆಯ ಸಮೀಪದಲ್ಲೇ ಆರೋಗ್ಯ ಸೇವೆ ಪಡೆಯಬೇಕೆನ್ನುವುದು ನಮ್ಮ ಸರ್ಕಾರದ ಗುರಿ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಈ ನಿಟ್ಟಿನಲ್ಲಿ ಬಹಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಾಧನೆಗಾಗಿ ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಈಗ ಆರೋಗ್ಯ ಕ್ಷೇತ್ರ ಕೋವಿಡ್ ನಿವಾರಿಸುವ ಕಡೆ ಹೆಚ್ಚು ಗಮನನೀಡಿದೆ. ಕೋವಿಡ್ ನಿಂದ ಆರ್ಥಿಕ ಸಂಕಷ್ಟವೂ ಉಂಟಾಗಿದೆ. ಇಷ್ಟಿದ್ದರೂ ರಾಜ್ಯದಲ್ಲಿ ಇತರೆ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಯಾವುದೇ ಹಿನ್ನೆಡೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.
Key words: Karnataka –no.1- construction – Health and Wellness Center-Minister- Dr K Sudhakar