ಬೆಂಗಳೂರು, ಸೆಪ್ಟಂಬರ್ ,6,2021(www.justkannada.in): ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ, ವಿಶ್ವವಿದ್ಯಾಲಯದ ರಕ್ಷಣೆಗೆ ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಭರವಸೆ ನೀಡಿದ್ದಾರೆ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ ಹಾಗೂ ನಿವೃತ್ತ ಡೀನ್ ಡಾ. ಚಂಬಿ ಪುರಾಣಿಕ್ ಅವರು ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ರಾಜ್ಯದ ಪ್ರಪ್ರಥಮ ಪ್ರಜೆ ರಾಜ್ಯಪಾಲರನ್ನು ಭೇಟಿಯಾಗಿ ಗೌರವಿಸಿ, ವಿವಿಯ ಅಕ್ರಮಗಳಿಗೆ ಸಂಬಂಧಿಸಿದಂತೆ 33 ಪುಟಗಳ ದೂರು ಸಲ್ಲಿಸಿದರು.
ರಾಜ್ಯಪಾಲರ ಭೇಟಿ ಕುರಿತು ಮಾಹಿತಿ ನೀಡಿರುವ ವಿಶ್ರಾಂತ ಕುಲಪತಿ ಮತ್ತು ನಿವೃತ್ತ ಡೀನ್ ಅವರು, ರಾಜ್ಯಪಾಲರು ಸುಮಾರು 15 ನಿಮಿಷಗಳ ಕಾಲ ನಮ್ಮ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದರು. ನಾವು ವಿಶ್ವವಿದ್ಯಾಲಯ ಇತ್ತೀಚಿನ ವರ್ಷಗಳಲ್ಲಿ ಹೇಗೆ ಅಧಃಪತನದತ್ತ ಸಾಗುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದೇವೆ. ವಿಶೇಷವಾಗಿ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರ ಅವೈಜ್ಞಾನಿಕ ತೀರ್ಮಾನಗಳು, ಭ್ರಷ್ಟಾಚಾರಕ್ಕೆ ಕಾರಣವಾಗುವ ಹಾಗೂ ಅಗತ್ಯವೇ ಇಲ್ಲದ ಕಟ್ಟಡ ಕಾಮಗಾರಿಗಳಿಂದ ವಿಶ್ವವಿದ್ಯಾಲಯದ ನಿಧಿ ನೀರಿನಂತೆ ಕರಗುತ್ತಿದೆ. ಕೆಲವೇ ವರ್ಷಗಳಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಶೈಕ್ಷಣಿಕ ಅಭಿವೃದ್ಧಿ ಹೊರತಾಗಿ ವೆಚ್ಚ ಮಾಡಲಾಗಿದೆ. ಕರ್ನಾಟಕ ಮುಕ್ತ ವಿವಿ ಶೈಕ್ಷಣಿಕ ಸಂಸ್ಥೆಯಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಲೋಕೋಪಯೋಗಿ ಇಲಾಖೆ ಮಾದರಿಯಲ್ಲಿ ನಿರ್ಮಾಣ ಕಾಮಗಾರಿ ವಿಭಾಗವಾಗಿ ಪರಿವರ್ತನೆಯಾಗಿದೆ ಎಂದು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಈ ವಿಶ್ವವಿದ್ಯಾಲಯ ದೇಶದ ಅತ್ಯಂತ ಪ್ರತಿಷ್ಠಿತ ವಿವಿಯಾಗಿತ್ತು. ಇದೀಗ ನಶಿಸುವ ಹಂತಕ್ಕೆ ತಲುಪಿದೆ. ಇದು ಹೀಗೆ ಮುಂದುವರೆದರೆ ಕೆಲವೇ ಸಮಯದಲ್ಲಿ ವಿಶ್ವವಿದ್ಯಾಲಯದ ಮರಣೋತ್ತರ ಪರೀಕ್ಷೆ ನಡೆಸುವ ಪರಿಸ್ಥಿತಿ ಎದುರಾಗಲಿದೆ. ನೀವು ಈ ವಿವಿಯ ಕುಲಾಧಿಪತಿಯಾಗಿದ್ದು, ನಿಮ್ಮ ಕಾಲದಲ್ಲಿ ಈ ಸಂಸ್ಥೆ ಮತ್ತೆ ತನ್ನ ಗತ ವೈಭವಕ್ಕೆ ಮರಳುವಂತೆ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಹಣಕಾಸು ಅಕ್ರಮಗಳ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಡಿರುವ. ಮನವಿಗೆ ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹೊಸ ಹೊಸ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಆದರೆ ಆರ್ಥಿಕ ವೆಚ್ಚದ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಸಕ್ತರಾಗಿದ್ದಾರೆ. ವಿಸ್ತರಣಾ ಕೇಂದ್ರಗಳನ್ನು ನಿರ್ಮಿಸುವ ಕೆಲಸದಲ್ಲಿ ಕುಲಪತಿ ಅವರು ತೊಡಗಿದ್ದಾರೆ. ಮುಕ್ತ ವಿವಿ ಗೆ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುವುದಿಲ್ಲ. ಹೀಗಿರುವಾಗ ಕಟ್ಟಡಗಳು, ಹೆಚ್ಚಿನ ಮೂಲ ಸೌಕರ್ಯದ ಅಗತ್ಯವಿಲ್ಲ.
ವಿವಿಯಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ವಿಸ್ತರಣಾ ಕೇಂದ್ರಗಳಿವೆ. ಈ ಪೈಕಿ ಕೆಲವು ಕೇಂದ್ರಗಳು ಮುಚ್ಚಿವೆ. ಹೀಗಿದ್ದರೂ ಧಾರವಾಡ, ಕಲಬುರಗಿ ಸೇರಿ ಮೂರು ಕಡೆಗಳಲ್ಲಿ ಪ್ರಾದೇಶಿಕ ಕೇಂದ್ರಗಳ ಕಟ್ಟಡ ನಿರ್ಮಿಸಲಾಗುತ್ತಿದೆ. ಮಾಗಡಿ ಬಳಿ ಸಂಸ್ಕೃತ ವಿವಿಗಾಗಿ ವಿಸ್ತರಣಾ ಕೇಂದ್ರದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆವು. ರಾಜ್ಯಪಾಲರು ಸಂಸ್ಕೃತ ವಿವಿಗೆ ಕಟ್ಟಡ ನಿರ್ಮಿಸಿದರೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಆಗ ನಾವು ಇದು ವಿವಿ ಕಾಯ್ದೆಗೆ ವಿರುದ್ಧವಾದ ನಡೆ. ಕಟ್ಟಡ ನಿರ್ಮಾಣ ಮಾಡಲೇಬೇಕು ಎನ್ನುವುದಿದ್ದರೆ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿರುವುದಾಗಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ ಹಾಗೂ ನಿವೃತ್ತ ಡೀನ್ ಡಾ. ಚಂಬಿ ಪುರಾಣಿಕ್ ತಿಳಿಸಿದ್ದಾರೆ.
ನಾವು ರಾಜ್ಯಪಾಲರಿಗೆ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಕುಲಾಧಿಪತಿಯವರು ನಮಗೆ ಸ್ಪಷ್ಟವಾದ ಭರವಸೆ ನೀಡಿದ್ದಾರೆ. ಹಾಗೊಂದು ವೇಳೆ ವಿವಿ ರಕ್ಷಣೆ ಸಾಧ್ಯವಾಗದಿದ್ದರೆ ನಾವು ಮುಂದಿನ ದಿನಗಳಲ್ಲಿ ಕಾನೂನಿನ ಹೋರಾಟಕ್ಕೆ ಇಳಿಯುತ್ತೇವೆ ಎಂದು ತಿಳಿಸಿದರು.
ENGLISH SUMMARY…
Complaint to Governor against KSOU Vice-Chancellor Dr. S. Vidyashankar: Governor Thawar Chand Gehlot assures to protect KSOU
Bengaluru, September 6, 2021 (www.justkannada.in): Governor of Karnataka Thwawar Chand Gehlot has assured to initiate legal measures against the alleged corrupt practices taking place in the Karnataka State Open University (KSOU) and protect it.
Dr. N.S. Ramegowda, Former Vice-Chancellor, KSOU, and Dr.Chambi Puranik, Former Dean met the Hon’ble Governor in Bengaluru on the occasion of Teachers Day and submitted a 33-page complaint against the corrupt practices taking place in KSOU.
Dr. N.S. Ramegowda and Dr. Chambi Puranik informed that they met the governor and discussed for 15 minutes. “We have explained about all the corruption that is taking place in KSOU in recent years. We apprised him about the unscientific decisions of the present KSOU Vice-Chancellor Dr. S. Vidyashankar, unnecessary construction of buildings which leads to large-scale corruption and fast melting of funds. More than Rs.400 crore has been spent in the last few years for non-educational purposes. It is not functioning as an educational institution, instead, it is converted into Public Works Department,” they said.
“The KSOU was a reputed institution till a few years ago. But it has reached almost the closure stage. Its post mortem will be held in the nearest future if this situation continues. We have urged the Hon’ble governor to set right things and reinstall the lost glory. The governor has responded positively to our request of issuing a white paper about the financial discrepancies of KSOU. The KSOU should have initiated new educational programs on the occasion of its Silver Jubilee. But the officials concerned are interested only in concentrating on financial expenditure. The Vice-Chancellor is more interested in constructing extension centers. Students won’t come to KSOU often. Hence, there is no need for immense infrastructure,” they said
“We have provided all the documents and the governor has assured us of taking action. In case if no action is taken we take up the legal struggle,” they added.
Keywords: KSOU/ corrupt/ Governor/ Thawar Chand Gehlot/ Dr. N.S. Ramegowda/ Dr. Chambi Puranik
Key words: Karnataka Open University – VC- Vidyashankar- Governor -complains