ಮೈಸೂರು, ನ.05, 2021 : () ಅಪ್ಪುವಿನ ಹಾಲು ತುಪ್ಪ ಕಾರ್ಯಕ್ರಮ ನಡೆದಿದೆ, ೧೧ನೆ ದಿನದ ಕಾರ್ಯವೂ ನಡೆಯಲಿದೆ,ತಿಂಗಳು,ವರ್ಷ,೫ನೇ ವರ್ಷ ಹೀಗೆ ನಡೆಯುತ್ತಲೇ ಇರುತ್ತದೆ..ಪುನೀತ್ ಇಲ್ಲ ಎಂಬ ಸತ್ಯ ಒಪ್ಪಿಕೊಂಡು ನಾವು ಜೀವನ ಸಾಗಿಸಬೇಕು,ಅದೊಂದೆ ಈಗ ನಮ್ಮ ಪಾಲಿಗೆ ಉಳಿದಿರುವುದು..
ಇದು ಪುನೀತ್ ಸಮಾಧಿ ಬಳಿ ರಾಘವೇಂದ್ರ ರಾಜ್ ಕುಮಾರ್ ಹೇಳಿದ ಮಾತುಗಳು. ಪ್ರೀತಿಯ ತಮ್ಮನನ್ನು ಕಳೆದುಕೊಂಡ ನೋವಿನಲ್ಲೂ ಎಂಥಾ ಪ್ರಬುದ್ಧ ಮಾತುಗಳು! ದೊಡ್ಮನೆಯವರ ಸಹನೆ,ತಾಳ್ಮೆ ಪದೇ ಪದೆ ಸಾಬೀತಾಗುವುದು ಇಂಥಹ ಮಾತು ಹಾಗೂ ನಡೆಗಳಿಂದಲೇ.
ಅಪ್ಪು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಒಂದು ವಾರ. ನೆಚ್ಚಿನ ನಟನ ಅಗಲಿಕೆಯಿಂದ ಕರುನಾಡು ಇನ್ನೂ ಹೊರಬಂದಿಲ್ಲ. ಕರುನಾಡಿನ ಪ್ರತಿಮನೆಯಲ್ಲಿಯೂ ಶೋಕ ಆವರಿಸಿದೆ. ಪ್ರತಿಯೊಂದು ಮನೆಯ ಸದಸ್ಯನಾಗಿ ಪುನೀತ್ ಬೆರೆತು ಹೋಗಿದ್ರು. ಈ ಬಾರಿಯ ದೀಪಾವಳಿಯಲ್ಲಿ ಸಂಭ್ರಮವಿಲ್ಲ, ರಾಜ್ಯೋತ್ಸವದಲ್ಲಿ ಆಸಕ್ತಿಯಿಲ್ಲ. ಪುನೀತ್ ಇಲ್ಲ ಎಂಬ ವಾಸ್ತವ ಒಪ್ಪಿಕೊಳ್ಳಲು ನಮಗೆಲ್ಲಾ ಬಹುಶಃ ವರ್ಷಗಳೇ ಬೇಕೇನೋ. ಮುದ್ದಿನ ಸಹೋದರನನ್ನು ಕಳೆದುಕೊಂಡು ಶಿವಣ್ಣ ಮತ್ತು ರಾಘಣ್ಣ ಅಕ್ಷರಶಃ ಕಂಗಾಲಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅಶ್ವಿನಿ ತಮ್ಮ ಬಾಳ ಸಂಗಾತಿಯ ಅಕಾಲಿಕ ಅಗಲಿಕೆಯಿಂದ ಕುಗ್ಗಿ ಹೋಗಿದ್ದಾರೆ.ಯಾರೂ ಊಹಿಸದ,ಕಲ್ಪನೆಯೂ ಮಾಡದ ಆಕಸ್ಮಿಕವೊಂದು ನಡೆದುಹೋಗಿದೆ. ಜವರಾಯನ ಕರೆಗೆ ಓಗೊಟ್ಟ ಅಪ್ಪು ಹೇಳದೆ ಕೇಳದೆ ಎದ್ದು ಹೋಗಿದ್ದಾರೆ.
ಈ ನೋವನ್ನು ಹೇಗೆ ಅರಗಿಸಿಕೊಳ್ಳಬೇಕು ಎಂದು ದೊಡ್ಮನೆ ಸದಸ್ಯರು ಯೋಚಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಪುನೀತ್ ರಾಜಕುಮಾರ್ ರನ್ನು ಆರಾಧ್ಯ ದೈವವೆಂದುಕೊಂಡಿದ್ದ ಅಭಿಮಾನಿಗಳು ದುಃಖದ ಮಡುವಿನಲ್ಲಿದ್ದಾರೆ.
ಕಳೆದೊಂದು ವಾರದಿಂದ ೧೨-೧೩ ಮಂದಿ ಅಪ್ಪು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ೨೦ ರಿಂದ ೩೦ ರ ವಯೋಮಾನದ ಇವರೆಲ್ಲರೂ ಹಿಂದು ಮುಂದು ನೋಡದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇಂತಹ ಅತಿರೇಕದ ವರ್ತನೆ ನಿಜಕ್ಕೂ ಆತಂಕಕಾರಿ! ನೆಚ್ಚಿನ ನಟ ಇನ್ನಿಲ್ಲವೆನ್ನುವ ಸತ್ಯ ಅರಗಿಸಿಕೊಳ್ಳುವುದು ಎಂಥಹವರಿಗೂ ಕಷ್ಟವೇ. ಹಾಗಂತ ಪ್ರಾಣ ಕಳೆದುಕೊಳ್ಳುವುದು ಸರಿಯಲ್ಲ.
ದಯವಿಟ್ಟು ಅಭಿಮಾನಿಗಳು ದುಡುಕಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮಾಧ್ಯಮದ ಮುಂದೆ ಶಿವಣ್ಣ, ರಾಘಣ್ಣ ಕೈ ಮುಗಿದು ಬೇಡಿಕೊಳ್ಳುತ್ತಿದ್ರೆ ಎಂಥಹವರಿಗೂ ದುಃಖವಾಗುತ್ತೆ. ಅವರನ್ನು ನೋಡಿ ನಾವೂ ಧೈರ್ಯ ತಂದುಕೊಳ್ಳಬೇಕಿದೆ
ಒಬ್ಬರ ಸಾವಿಗೆ ಮತ್ತೊಬ್ಬರು ಪ್ರಾಣ ಕಳೆದುಕೊಳ್ಳುತ್ತಾ ಹೋದರೆ ಭೂಮಿಯೇ ಖಾಲಿಯಾಗುತ್ತದೆ. ನಮ್ಮನ್ನಗಲಿದವರ ಹಿಂದೆ ಹೋದರೆ ನಮ್ಮ ನೋವು ಕಡಿಮೆಯಾಗುತ್ತದೆಂದು ಭಾವಿಸಿದರೆ ಅದರಿಂದ ನಮ್ಮನ್ನು ನಂಬಿದವರನ್ನು ಸಂಕಷ್ಟಕ್ಕೆ ದೂಡಿದಂತಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡ ಯುವಕರ ಹೆತ್ತವರ ಪಾಡೇನು? ಪುತ್ರಶೋಕ ನಿರಂತರ ಎಂಬಂತೆ ಸಾಯುವವರೆಗೂ ಅದೇ ನೋವಿನಲ್ಲಿ ದಿನಕಳೆಯಬೇಕೆ?
ಬದುಕಿನುದ್ದಕ್ಕೂ ಯಾರನ್ನೂ ನೋಯಿಸದೆ,ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ,ನೀವೂ ಮತ್ತೊಬ್ಬರ ಕಷ್ಟಕ್ಕೆ ನೆರವಾಗಿಎಂದು ಇತರರನ್ನು ಪ್ರೇರೇಪಿಸುತ್ತಾ ಬದುಕಿನ ಸಂದೇಶ ಸಾರಿದ ನಟನೊಬ್ಬನಿಗೆ ಅಭಿಮಾನಿಗಳು ಸಾವಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸುವುದು ಸರಿಯೇ?ಇದು ಅಪ್ಪು ಆತ್ಮಕ್ಕೆ ನಿಜಕ್ಕೂ ಶಾಂತಿ ನೀಡಲಾರದು.
ಪುನೀತ್ ಆತ್ಮ ಎಂದಿಗೂ ಇದನ್ನು ನಿರೀಕ್ಷೆ ಮಾಡಿರಲಾರದು.ತನ್ನ ಜೀವಿತಾವಧಿಯಲ್ಲಿ ತಮ್ಮ ಆದರ್ಶ ಗುಣಗಳಿಂದ ಇತರರಿಗೆ ಮಾದರಿಯಾಗಿದ್ದ ಪುನೀತ್ ಸತ್ತ ಮೇಲೆ ಕೆಟ್ಟ ಹೆಸರು ಪಡೆಯಬೇಕೆ? ಅಪ್ಪುಗಾಗಿ ನನ್ನ ಮಗ ಪ್ರಾಣ ಬಿಟ್ಟ ಎಂಬ ಹೆತ್ತವರ ನೋವಿನ ನುಡಿಗಳಿಂದ ಡಾ.ರಾಜ್ ಕುಟುಂಬಕ್ಕೆ ಘಾಸಿಯಾಗುವುದಿಲ್ಲವೇ? ಇಂಥ ಕಷ್ಟದ ದಿನಗಳಲ್ಲಿ ನಾವೆಲ್ಲರೂ ದೊಡ್ಮನೆಯ ಬೆನ್ನಿಗೆ ನಿಲ್ಲಬೇಕಿದೆ. ಕೇವಲ ಸಿನಿಮಾಗಳಲ್ಲಿ ನೋಡಿದ ನಾವೇ ಪುನೀತ್ ಅಗಲಿಕೆಯನ್ನು ಸಹಿಸುತ್ತಿಲ್ಲಎಂದ ಮೇಲೆ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರ,ಸಹೋದರಿಯರು, ಪ್ರೀತಿಸಿ ಮದುವೆಯಾದ ಮಡದಿ,ಅಪ್ಪನನ್ನೇ ಸರ್ವಸ್ವ ಎಂದುಕೊಂಡಿದ್ದ ಮಕ್ಕಳ ಸ್ಥಿತಿ ಹೇಗಿರಬೇಡ?
ಗಾಯದ ಮೇಲೆ ಬರೆ ಎಂಬಂತೆ ಅವರಿಗೆ ಮತ್ತಷ್ಟು ಸಂಕಷ್ಟ ನೀಡದಿರೋಣ.ಅಪ್ಪುವನ್ನು ಪ್ರೀತಿಸುವುದೇ ಆದರೆ ಅವರು ತೋರಿಸಿಕೊಟ್ಟ ದಾರಿಯಲ್ಲಿ ನಡೆಯೋಣ. ಅವರ ಆದರ್ಶಗಳನ್ನು ಪಾಲಿಸೋಣ.ಅವರಂತೆಯೇ ಕಷ್ಟದಲ್ಲಿರುವವರಿಗೆ ನೆರವಾಗುತ್ತಾ,ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ನಮ್ಮೆಲ್ಲರ ಮಧ್ಯೆ ಅಪ್ಪುವನ್ನು ಜೀವಂತವಾಗಿರಿಸೋಣ. ಅಪ್ಪು ನಮ್ಮೊಡನಿಲ್ಲ ಎಂದು ಬೇಸರ ಮಾಡಿಕೊಳ್ಳುವವರು ಅಪ್ಪುವಿನಂತೆಯೇ ಹೆಣ್ಣು ಮಕ್ಕಳ ಶಿಕ್ಷಣ,ಸಬಲೀಕರಣಕ್ಕಾಗಿ ಶ್ರಮಿಸಲಿ. ದ್ವೇಷ,ಅಸೂಯೆ,ಯಾವುದಕ್ಕೂ ಆಸ್ಪದ ಕೊಡದೆ,ಇರುವವರೆಗೂ ನಗುನಗುತ್ತಾ ಜೀವನ ಕಳೆಯುವ ಸಂಕಲ್ಪ ಮಾಡಲಿ.
ಅತ್ಯುತ್ತಮ ನಟನೊಬ್ಬ ಬದುಕಿದ ರೀತಿಯನ್ನು ಅನುಕರಿಸುವ ಮೂಲಕ ಅಗಲಿದ ‘ನಗುವಿನ ಪರಮಾತ್ಮ’ನಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸೋಣ…
-ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತೆ
key words :karnataka-power-star-puneeth.rajkumar-kannada-film-bangalore